ಕಾಡುಹಂದಿಗಳು ಕೃಷಿಭೂಮಿಗೆ ನುಗ್ಗಿ ಬೆಳೆನಾಶ ಪಡಿಸುತ್ತಿರುವುದರಿಂದ ನಷ್ಟ ಅನುಭವಿಸುತ್ತಿರುವ ರೈತರಿಗೆ ಸಾಕಷ್ಟು ಪರಿಹಾರ ನೀಡಲು ರಾಜ್ಯವು ಇಲ್ಲಿಯವರೆಗೆ ಕೈಗೊಂಡಿರುವ ಕ್ರಮಗಳು ವಿಫಲವಾಗಿರುವುದನ್ನು ಪರಿಗಣಿಸಿರುವ ಕೇರಳ ಹೈಕೋರ್ಟ್ ಕೃಷಿಭೂಮಿಯಲ್ಲಿ ಬೆಳೆ ನಾಶಪಡಿಸುವ ಕಾಡುಹಂದಿಗಳನ್ನು ಬೇಟೆಯಾಡಲು ರೈತರಿಗೆ ಅನುಮತಿಸುವಂತೆ ಮುಖ್ಯ ವನ್ಯಜೀವಿ ವಾರ್ಡನ್‌ಗೆ ನಿರ್ದೇಶನ ನೀಡಿದೆ.
ವನ್ಯಜೀವಿಗಳ ಸಂರಕ್ಷಣಾ ಕಾಯಿದೆಯ ಸೆಕ್ಷನ್ 11 (1) (ಬಿ) ನಲ್ಲಿ ತಿಳಿಸಿರುವಂತೆ ಕೃಷಿ ಭೂಮಿಯನ್ನು ಹೊಂದಿರುವ ಪ್ರದೇಶಗಳಲ್ಲಿ ಹಂದಿಗಳನ್ನು ಬೇಟೆಯಾಡಲು ವ್ಯಕ್ತಿಗಳಿಗೆ ಅವಕಾಶ ನೀಡುವಂತೆ ಮುಖ್ಯ ವನ್ಯಜೀವಿ ವಾರ್ಡನ್‌ಗೆ ನಿರ್ದೇಶನ ನೀಡುವ ಮಧ್ಯಂತರ ಆದೇಶವನ್ನು ಜಾರಿಗೆ ತರುವುದು ಸೂಕ್ತ ಎಂದು ನ್ಯಾಯಮೂರ್ತಿ ಪಿ ಬಿ ಸುರೇಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.
ಅರ್ಜಿದಾರರ ಆಸ್ತಿಗಳು ಕಾಡುಹಂದಿ ದಾಳಿಯ ಭೀತಿಗೆ ತುತ್ತಾಗುತ್ತಿವೆ. ಕಾಯಿದೆಯ ಸೆಕ್ಷನ್ 11 (1) (ಬಿ) ಅಡಿಯಲ್ಲಿ ತೆಗೆದುಕೊಳ್ಳಲಾದ ಕ್ರಮಗಳು ಯಾವುದೇ ಫಲಿತಾಂಶ ನೀಡಿಲ್ಲ. ರೈತರ ಹಿತಾಸಕ್ತಿಗಳನ್ನು ಕಾಪಾಡುವ ಏಕೈಕ ಪರ್ಯಾಯವೆಂದರೆ ಕಾಡುಹಂದಿಗಳನ್ನು ರಾಜ್ಯದ ನಿರ್ದಿಷ್ಟ ಪ್ರದೇಶಗಳಲ್ಲಿ ಕ್ರೂರಮೃಗಗಳೆಂದು ಘೋಷಿಸುವುದಾಗಿದೆ ಎಂದು ನ್ಯಾಯಾಲಯ ಹೇಳಿದೆ. ಕೇರಳದ ಪಟ್ಟಣಂತಿಟ್ಟ, ಮಲಪ್ಪುರಂ ಮತ್ತು ಕೋಳಿಕ್ಕೋಡ್ ಜಿಲ್ಲೆಗಳಲ್ಲಿ ಜಮೀನು ಹೊಂದಿರುವ ಕೃಷಿಕರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.
ಅರ್ಜಿದಾರರ ಪರವಾಗಿ ವಕೀಲ ಅಮಲ್ ದರ್ಶನ್ ವಾದ ಮಂಡಿಸಿದರು. ನವೆಂಬರ್ 2020ರಲ್ಲಿ ಇದೇ ರೀತಿಯ ಅಹವಾಲನ್ನು ಆಲಿಸಲಾಗಿದ್ದು ಕಾಡುಹಂದಿಗಳನ್ನು ಸಮಸ್ಯಾತ್ಮಕ ಪ್ರದೇಶಗಳಲ್ಲಿ ಕಂಟಕಪ್ರಾಯವೆಂದು ಘೋಷಿಸುವಂತೆ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ತಿಳಿಸಲಾಗಿತ್ತು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ವಿವರಿಸಿದೆ. ಕಾಯಿದೆಯ ನಿಬಂಧನೆಗಳ ಪ್ರಕಾರ, ಕಾಡುಹಂದಿಗಳನ್ನು ಕಂಟಕಪ್ರಾಯವೆಂದು ಘೋಷಿಸಿದರೆ, ಸಂಬಂಧಪಟ್ಟ ವ್ಯಕ್ತಿಗಳು ತಮ್ಮ ಜೀವ ಮತ್ತು ಆಸ್ತಿಗೆ ಹಾನಿಯಾಗದಂತೆ ಅವುಗಳನ್ನು ಬೇಟೆಯಾಡಬಹುದು ಎಂದು ಪೀಠ ಹೇಳಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಕಾಯಿದೆಯ ಸೆಕ್ಷನ್ 11 (1) (ಬಿ) ಅನ್ನು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸೇವೆಗಳನ್ನು ಬಳಸಿಕೊಳ್ಳಬೇಕು ಎಂದು ಸೂಚಿಸಿತ್ತು. 2011ರಿಂದ ರಾಜ್ಯ ಸರ್ಕಾರವು ಕೈಗೊಂಡ ವಿವಿಧ ಕ್ರಮಗಳು ಯಾವುದೇ ಪರಿಣಾಮಕಾರಿ ಫಲಿತಾಂಶ ನೀಡಿಲ್ಲ ಎಂದು ಕೇಂದ್ರ ಸರ್ಕಾರ ಗಮನಸೆಳೆದಿದ್ದರಿಂದ 2021ರ ಜೂನ್ 17ರಂದು ರಾಜ್ಯ ಸರ್ಕಾರ ಈ ವಿಷಯವನ್ನು ಮತ್ತೆ ಕೈಗೆತ್ತಿಕೊಂಡಿದೆ. ಆದರೆ ಈ ವಿಷಯದಲ್ಲಿ ಕೇಂದ್ರ ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ವಿವರಿಸಲಾಗಿದೆ.
ಕಾಯಿದೆಯ ಸೆಕ್ಷನ್ 11 (1) (ಬಿ) ಅಡಿಯಲ್ಲಿ, ಮುಖ್ಯ ವನ್ಯಜೀವಿ ಪಾಲಕರಿಗೆ ಅಧಿಕಾರ ಇದ್ದು, ಪರಿಚ್ಛೇದ II, ಪರಿಚ್ಛೇದ III ಅಥವಾ ಪರಿಚ್ಛೇದ IV ಯಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ಕಾಡು ಪ್ರಾಣಿ ಮನುಷ್ಯರ ಜೀವಕ್ಕೆ ಅಪಾಯಕಾರಿಯಾಗಿದೆ ಅಥವಾ ಯಾವುದೇ ಫಸಲು ಇಲ್ಲವೇ ಯಾವುದೇ ಭೂಮಿಗೆ ಹಾನಿ ಉಂಟು ಮಾಡುತ್ತಿದೆ ಎಂದು ತೃಪ್ತಿಕರವಾಗಿ ಅನ್ನಿಸಿದರೆ, ಆ ನಿರ್ದಿಷ್ಟ ಪ್ರಾಣಿ ಅಥವಾ ಪ್ರಾಣಿಗಳ ಗುಂಪನ್ನು ಬೇಟೆಯಾಡಲು ಯಾವುದೇ ವ್ಯಕ್ತಿಗೆ ಲಿಖಿತವಾಗಿ ಆದೇಶಿಸುವಂತೆ ನ್ಯಾಯಾಲಯ ಸೂಚಿಸಿತು.
ಆದ್ದರಿಂದ, ರೈತರ ಹಿತದೃಷ್ಟಿಯಿಂದ, ಅರ್ಜಿದಾರರು ತಮ್ಮ ಕೃಷಿ ಭೂಮಿ ಇರುವ ಪ್ರದೇಶಗಳಲ್ಲಿ ಕಾಡುಹಂದಿಗಳನ್ನು ಬೇಟೆಯಾಡಲು ಅನುಮತಿ ನೀಡುವಂತೆ ನ್ಯಾಯಾಲಯ ಮುಖ್ಯ ವನ್ಯಜೀವಿ ಪಾಲಕರಿಗೆ ನಿರ್ದೇಶಿಸಿತು.