ಮತಾಂತರ ನಿಷೇಧ ತಡೆ ಕಾಯಿದೆಯನ್ನು ಪ್ರಶ್ನಿಸಿ ಬಲವಂತದ ಮತಾಂತರದ ಆರೋಪ ಹೊತ್ತ ವ್ಯಕ್ತಿಯೇ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿರುವುದನ್ನು ಗಮನಿಸಿದ ನ್ಯಾಯಾಲಯ ಆ ವ್ಯಕ್ತಿಯಿಂದ ವಿವರಣೆಯನ್ನು ಕೇಳಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬಾ ತಾಲೂಕಿನ ಹಲ್ಲಂಗೇರಿಯ ವಿಕ್ಟರ್‌ಮಾರ್ಟಿನ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸೋಮವಾರ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಈ ವೇಳೆ ಅರ್ಜಿದಾರರ ಪರ ವಕೀಲರು, ಮತಾಂತರ ನಡೆಸುವುದನ್ನು ನಿಷೇಧಿಸಲು ರಾಜ್ಯದಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ಕಾಯಿದೆ ಜಾರಿಗೆ ಬಂದಿದೆ. ಅನ್ಯ ಧರ್ಮಗಳನ್ನು ಗಮನದಲ್ಲಿರಿಸಿಕೊಂಡು ಇದನ್ನು ರೂಪಿಸಿದ್ದು, ಇದು ಸಂವಿಧಾನ ವಿರೋಧಿಯಾಗಿದೆ. ಇಂತಹ ಕಾನೂನು ಬಾಹಿರ ಕಾಯಿದೆಯನ್ನು ರದ್ದುಗೊಳಿಸಬೇಕು ಎಂದು ಕೋರಿದರು.
ಆಗ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೆಟ್ ಜನರಲ್ ಪ್ರಭುಲಿಂಗ ನಾವದಗಿ ಅವರು, ಅರ್ಜಿದಾರರ ವಿರುದ್ದವೇ ಎರಡು ಬಲವಂತದ ಮತಾಂತರದ ಕ್ರಿಮಿನಲ್ ಕೇಸ್‌ಗಳಿವೆ. ಅಂತಹ ವ್ಯಕ್ತಿಯು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯ ಯಾವುದೇ ಕಾರಣಕ್ಕೂ ಪುರಸ್ಕರಿಸಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಪೀಠವು ಅರ್ಜಿದಾರರ ವಿರುದ್ದವೇ ಎರಡು ಕ್ರಿಮಿನಲ್ ಕೇಸ್‌ಗಳಿವೆ. ಹಾಗಾಗಿ ಅಂತಹ ವ್ಯಕ್ತಿ ಸಲ್ಲಿಸಿರುವ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿಗಣಿಸುವುದು ಹೇಗೆ? ಎಂದು ಅರ್ಜಿದಾರ ವಕೀಲರನ್ನು ಪ್ರಶ್ನಿಸಿತು.
ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲರು, ಆ ಕ್ರಿಮಿನಲ್ ಪ್ರಕರಣಗಳನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದರು.
ಇದಕ್ಕೆ ಪೀಠವು ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಕೇಸುಗಳನ್ನು ಪ್ರಶ್ನಿಸುವುದು, ಬಿಡುವುದು ನಿಮಗೆ ಬಿಟ್ಟ ವಿಚಾರ. ಆದರೆ ಅಂತಹ ವ್ಯಕ್ತಿ ಸಲ್ಲಿಸಿರುವ ಅರ್ಜಿಯನ್ನು ಪಿಐಎಲ್ ಆಗಿ ಪರಿಗಣಿಸಲಾಗದು. ಹಾಗಾಗಿ ಒಂದು ವಾರದಲ್ಲಿ ಅರ್ಜಿದಾರರು ಪ್ರತಿಕ್ರಿಯಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ನ.28 ಕ್ಕೆ ಮುಂದೂಡಿತು.