

ಗಾಣಿಗ ಜಾತಿಯು ಲಿಂಗಾಯತ ಸಮುದಾಯದೊಳಗಿನ ವಿಶಿಷ್ಟ ಉಪ ಜಾತಿಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಹೇಳಿದೆ.
ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಒಬ್ಬರಿಗೆ ನೀಡಿದ್ದ ಜಾತಿ ಪ್ರಮಾಣ ಪತ್ರ ಪ್ರಶ್ನಿಸಿ ಪೊಲೀಸ್ ಪೇದೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಜಾಗೊಳಿಸುವ ವೇಳೆ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.
ಲಿಂಗಾಯತ ಹಾಗೂ ಗಾಣಿಗ ಪ್ರತ್ಯೇಕವೇನಲ್ಲ. ವೃತ್ತಿ ಹಾಗೂ ಸಾಮಾಜಿಕ ಅಸ್ಮಿತೆಯನ್ನು ಒಳಗೊಂಡಿರುವ ವಿವಿಧ ಜಾತಿಗಳನ್ನು ಒಳಗೊಳ್ಳುವ ಮೂಲಕ ಲಿಂಗಾಯತವು ಹೊರಹೊಮ್ಮಿದ್ದು, ವಿಶಾಲವಾದ ಲಿಂಗಾಯತ ಪಂಥದೊಳಗೆ ಈ ಜಾತಿಗಳಿವೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
“ಧಾರ್ಮಿಕ ನೆಲೆಯಲ್ಲಿ ವ್ಯಕ್ತಿಯು ಏಕಕಾಲಕ್ಕೆ ಲಿಂಗಾಯತನಾಗಿದ್ದು, ಜಾತಿಯ ವರ್ಗೀಕರಣದಡಿ ಗಾಣಿಗ ಆಗಿರಬಹುದು ಎಂದು ನ್ಯಾಯಾಲಯವು ಹೇಳಿತು. ಮುಂದುವರೆದು, ಲಿಂಗಾಯತದಲ್ಲಿ ಗಾಣಿಗರು ಇದ್ದ ಮಾತ್ರಕ್ಕೆ ಎಲ್ಲಾ ಲಿಂಗಾಯತರು ಗಾಣಿಗ ಅಸ್ಮಿತೆಯನ್ನು ಕೋರಲಾಗದು. ಅಸ್ಮಿತೆಗಳ ಸಹಬಾಳ್ವೆಯು ಕಾನೂನಾತ್ಮಕ ಸಾಧ್ಯತೆಯಾಗಿದ್ದು, ನಿರ್ದಿಷ್ಟ ಪ್ರಕರಣದಲ್ಲಿ ಆ ಅಸ್ಮಿತೆಯು ಸಾಕ್ಷಿಗೆ ಒಳಪಟ್ಟ ವಿಚಾರವಾಗಿದೆ” ಎಂದು ನ್ಯಾಯಾಲಯ ತಿಳಿಸಿತು.
2009ರಲ್ಲಿ ಲಿಂಗಾಯತ-ಗಾಣಿಗ ಸಮುದಾಯ ರಾಜಕುಮಾರ್ ವೈ. ಬೀಳಗಿ ಎಂಬವರು ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದರು. ಹಿಂದುಳಿದ ವರ್ಗಗಳ 2A ಅಡಿ ಲಿಂಗಾಯತ ಗಾಣಿಗ ಎಂದು ಸುಳ್ಳು ಹೇಳಿ ಮೀಸಲಾತಿಯ ಮೂಲಕ ಇನ್‌ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದಾರೆ ಎಂದು ಅರ್ಜಿದಾರರಾದ ಪೊಲೀಸ್ ಕಾನ್‌ಸ್ಟೆಬಲ್ ಟಿ ಎನ್ ಜಗದೀಶ್ ದೂರಿದ್ದರು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಬೀಳಗಿ ಅವರ ತಂದೆ, ಸಹೋದರರು ಮತ್ತು ಸಂಬಂಧಿಗಳ ಶಾಲಾ ದಾಖಲೆಗಳನ್ನು ಪರಿಶೀಲಿಸಿತ್ತು. ಬೀಳಗಿ ತಂದೆಯ ಶಾಲಾ ದಾಖಲೆಗಳಲ್ಲಿ ಲಿಂಗಾಯತ ಎಂದು ನಮೂದಾಗಿದ್ದು, ಅದು ಲಿಂಗಾಯತ-ಗಾಣಿಗ ಗುರುತಿಗೆ ಯಾವುದೇ ಅಡ್ಡಿ ಮಾಡುವುದಿಲ್ಲ ಎಂದು ಪೀಠ ಹೇಳಿದೆ.
ತಂದೆಯ ಜಾತಿ ಸಂಬಂಧಿತ ದಾಖಲೆಗಳು ಪ್ರಸ್ತುತವಾಗಿದ್ದರೂ ಅದುವೇ ನಿರ್ಣಾಯಕವಲ್ಲ. ಜಾತಿ ನಿರ್ಧರಣವನ್ನು ಕಾಲಾಂತರದಲ್ಲಿ ಸಂಚಯಗೊಂಡಿರುವ ಹಾಗೂ ಏಕಪ್ರಕಾರವಾಗಿರುವ ದಾಖಲೆಗಳ ಮೂಲಕ ದೃಢಪಡಿಸಬೇಕಾಗಿದ್ದು, ಶಾಸನಾತ್ಮಕವಾಗಿ ಪರಿಶೀಲನೆಗೊಳಪಟ್ಟಿರಬೇಕಾಗುತ್ತದೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು.
“ತಂದೆಯ ಶಾಲಾ ದಾಖಲೆಗಳನ್ನು ನಿರಾಕರಿಸಲಾಗದ ಪುರಾವೆ ಎನ್ನುವ ಹಂತಕ್ಕೆ ಕಾನೂನು ಏರಿಸುವುದಿಲ್ಲ. ಬದಲಾಗಿ, ಅವು ಹೆಚ್ಚು ಪ್ರಸ್ತುತವಾದ ಅದರೆ ಅದೇ ವೇಳೆ ನಿರಾಕರಿಸಲೂಬಹುದಾದ ಪುರಾವೆಗಳಾಗಿವೆ. ಹಾಲಿ ಪ್ರಕರಣದಲ್ಲಿ, ಆ ಸಾಕ್ಷ್ಯಾಧಾರ ಗಾಣಿಗ ಅಸ್ಮಿತೆಯನ್ನು ಸೂಚಿಸುವ, ಏಕಪ್ರಕಾರವಾಗಿರುವ, ದೃಢೀಕರಿಸಿದ ಮತ್ತು ಶಾಸನಬದ್ಧವಾಗಿ ಪರಿಶೀಲಿಸಿದ ಪೂರಕ ದಾಖಲಾತಿಗಳಿಂದ ಸಮತೋಲಿತವಾಗಿದೆ” ಎಂದಿದೆ.
ಬೀಳಗಿ ಅವರ ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ಸಾರ್ವಜನಿಕ ಉದ್ಯೋಗದಲ್ಲಿ ಪಿಎಸ್ಐ ಆಗಿ ಅವರು ಮಾಡಿದ 15 ವರ್ಷಗಳ ಸೇವೆಯನ್ನು ಪರಿಗಣಿಸಿ, ನ್ಯಾಯಾಲಯವು ಅವರ ನೇಮಕಾತಿಯ ಸಿಂಧುತ್ವವನ್ನು ಎತ್ತಿಹಿಡಿದಿದೆ.
“ಮೂರನೇ ಪ್ರತಿವಾದಿಯು( ಬೀಳಗಿ) ಸರ್ಕಾರಿ ಅಧಿಕಾರಿಯಾಗಿ 15 ವರ್ಷ ಕರ್ತವ್ಯ ನಿರ್ವಹಿಸಿದ್ದು, ಸೇವಾವಧಿಯು ಜಾತಿ ಅಸ್ಮಿತೆಯನ್ನು ಸೃಷ್ಟಿಸಲು ಸಾಧ್ಯವಿಲ್ಲವಾದರೂ, ಸಾಕ್ಷ್ಯಗಳ ದಾಖಲೆಗಳು ಜಾತಿ ಅಸ್ಮಿತೆಯನ್ನು ಗಣನೀಯವಾಗಿ ನಿರೂಪಿಸುತ್ತಿರುವಾಗ ಮತ್ತು ಯಾವುದೇ ವಂಚನೆಯನ್ನು ಪ್ರದರ್ಶಿಸದಿರುವಾಗ ನ್ಯಾಯಾಂಗ ಸಂಯಮದ ಅಗತ್ಯವನ್ನು ಬಲಪಡಿಸುತ್ತವೆ. ಸಾಕ್ಷ್ಯಾಧಾರದ ಶ್ರೇಣಿಗೆ ಸಂಬಂಧಿಸಿದ ವ್ಯಾಖ್ಯಾನಾತ್ಮಕ ವಿವಾದದ ಆಧಾರದ ಮೇಲೆ ಅಂತಹ ದೀರ್ಘಕಾಲದ ಸೇವೆಯನ್ನು ಕದಲಿಸುವುದು ನ್ಯಾಯಿಕ ಉದ್ದೇಶಕವನ್ನು ಮುನ್ನಡೆಸುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.