ಅಂತರ್ಧರ್ಮೀಯ ವಿವಾಹಕ್ಕಾಗಿ ಮತಾಂತರಗೊಳ್ಳುವವರು ಹೊಸ ಧರ್ಮದ ಪರಿಣಾಮ ತಿಳಿದಿದೆ ಎಂದು ಘೋಷಿಸಬೇಕು: ದೆಹಲಿ ಹೈಕೋರ್ಟ್

ಮತ್ತೊಂದು ಧರ್ಮಕ್ಕೆ ಮತಾಂತರಗೊಳ್ಳುವ ವ್ಯಕ್ತಿಗೆ ಹೊಸ ಧರ್ಮದಲ್ಲಿ ಅಂತರ್ಗತವಾಗಿರುವ ತತ್ವ, ಆಚರಣೆ ಹಾಗೂ ನಿರೀಕ್ಷೆಗಳನ್ನು ವಿವರಿಸಬೇಕು ಎಂದ ನ್ಯಾಯಾಲಯ
ದೆಹಲಿ ಹೈಕೋರ್ಟ್, ಧಾರ್ಮಿಕ ಚಿಹ್ನೆಗಳು
ದೆಹಲಿ ಹೈಕೋರ್ಟ್, ಧಾರ್ಮಿಕ ಚಿಹ್ನೆಗಳು
Published on

ಅನ್ಯ ಧರ್ಮೀಯರೊಂದಿಗೆ ವಿವಾಹವಾಗುವ ಸಲುವಾಗಿ ಮತಾಂತರಗೊಳ್ಳುವ ವ್ಯಕ್ತಿಗೆ ಇದರಿಂದ ವಿಚ್ಛೇದನ, ಮಕ್ಕಳ ಪಾಲನೆ, ಉತ್ತರಾಧಿಕಾರ ಹಾಗೂ ಧಾರ್ಮಿಕ ಹಕ್ಕುಗಳಿಗೆ ಸಂಬಂಧಿಸಿದಂತೆ ಹೊಸ ಧರ್ಮದ ಪರಿಣಾಮಗಳ ಬಗ್ಗೆ ತನಗೆ ತಿಳಿದಿದೆ ಎಂದು ಅಫಿಡವಿಟ್‌ನಲ್ಲಿ ಘೋಷಿಸಬೇಕು ಎಂಬುದಾಗಿ ದೆಹಲಿ ಹೈಕೋರ್ಟ್‌ ಶುಕ್ರವಾರ ಹೇಳಿದೆ.

ಆದ್ದರಿಂದ, ಮತಾಂತರಗೊಂಡ ನಂತರ ನಡೆಯುವ ಅಂತರ್ಧರ್ಮೀಯ ವಿವಾಹಗಳಿಗೆ ಮತ್ತು ಸಿಆರ್‌ಪಿಸಿ ಸೆಕ್ಷನ್ 164ರ ಅಡಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ಹೇಳಿಕೆಯನ್ನು ದಾಖಲಿಸುವಿಕೆಗೆ ಅಧಿಕಾರಿಗಳು ಅನುಸರಿಸಬೇಕಾದ ವಿವರವಾದ ಮಾರ್ಗಸೂಚಿಗಳನ್ನು ನ್ಯಾಯಾಲಯ ಹೊರಡಿಸಿದೆ.

ಮತಾಂತರಗೊಂಡವರು ಹೊಸ ಧರ್ಮದಲ್ಲಿ ಅಂತರ್ಗತವಾಗಿರುವ ತತ್ವ, ಆಚರಣೆ, ನಿರೀಕ್ಷೆಗಳು, ವಿಚ್ಛೇದನ, ಉತ್ತರಾಧಿಕಾರ, ಪಾಲನೆ ಹಾಗೂ ಧಾರ್ಮಿಕ ಹಕ್ಕುಗಳಿಗೆ ಸಂಬಂಧಿಸಿದಂತೆ ಉಂಟಾಗುವ ಪರಿಣಾಮಗಳನ್ನು ತಿಳಿದಿದ್ದೇನೆ ಎಂದು ವಿವರಿಸುವ ಪ್ರಮಾಣಪತ್ರವನ್ನು ಮತಾಂತರ ಪ್ರಮಾಣಪತ್ರದೊಂದಿಗೆ ಸಲ್ಲಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಮತಾಂತರ ಮತ್ತು ವಿವಾಹದ ಪ್ರಮಾಣಪತ್ರವು ಮತಾಂತರಗೊಂಡವರಿಗೆ ಅರ್ಥವಾಗುವ ಸ್ಥಳೀಯ ಭಾಷೆಯಲ್ಲಿ ಕೂಡ ಇರಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ವಯಸ್ಸು, ವೈವಾಹಿಕ ಹಿನ್ನೆಲೆ, ವಿವಾಹದ ಸ್ಥಿತಿ ಹಾಗೂ ಅವುಗಳ ಬಗೆಗಿನ ಪುರಾವೆಗಳನ್ನು ಒಳಗೊಂಡ ಅಫಿಡವಿಟ್‌ ಸಲ್ಲಿಸಬೇಕು ಎಂದು ಅದು ಹೇಳಿದೆ. ಜೊತೆಗೆ ವಿಚ್ಛೇದನ, ಉತ್ತರಾಧಿಕಾರ, ಪಾಲನೆ, ಧಾರ್ಮಿಕ ಹಕ್ಕು ಇತ್ಯಾದಿಗಳಿಗೆ ಸಂಬಂಧಿಸಿದ ಫಲಶ್ರುತಿ ಮತ್ತು ಪರಿಣಾಮಗಳನ್ನು ಅರ್ಥಮಾಡಿಕೊಂಡು ಸ್ವಪ್ರೇರಣೆಯಿಂದ ಮತಾಂತರಗೊಳ್ಳುತ್ತಿರುವ ವಿಚಾರವನ್ನು ಅಫಿಡವಿಟ್‌ ಒಳಗೊಂಡಿರಬೇಕು ಎಂದು ಅದು ಹೇಳಿದೆ.

ಮತಾಂತರಗೊಂಡವನು ಈಗಾಗಲೇ ತನ್ನ ಮೂಲ ಧರ್ಮದ ಬಗ್ಗೆ ಚೆನ್ನಾಗಿ ತಿಳಿದಿರುವುದರಿಂದ ಈ ನಿರ್ದೇಶನಗಳು ಆತ ಅಥವಾ ಆಕೆ ತನ್ನ ಮೂಲಧರ್ಮಕ್ಕೆ ಮತಾಂತರಗೊಳ್ಳುವಾಗ ಅನ್ವಯವಾಗುವುದಿಲ್ಲ ಎಂದು ನ್ಯಾಯಮೂರ್ತಿ ಸ್ವರಣ ಕಾಂತಾ ಶರ್ಮಾ ಸ್ಪಷ್ಟಪಡಿಸಿದ್ದಾರೆ.

ವಿಶೇಷ ವಿವಾಹ ಕಾಯಿದೆ 1954ರ ಅಡಿಯಲ್ಲಿ ನಡೆಸುವ ಮದುವೆಗಳಿಗೆ ಈ ಮಾರ್ಗಸೂಚಿಗಳು ಅನ್ವಯಿಸುವುದಿಲ್ಲ ಎಂದು ಕೂಡ ನ್ಯಾಯಾಲಯ ಹೇಳಿದೆ.

ತಮ್ಮ ವೈಯಕ್ತಿಕ ಕಾನೂನು ಮತ್ತು ಜೀವನದ ವಿವಿಧ ಅಂಶಗಳ ಮೇಲೆ ಅನೇಕ ಪರಿಣಾಮಗಳನ್ನು ಬೀರುವ ತಕ್ಷಣದ ವಿವಾಹ ಬಂಧವನ್ನು ಮೀರಿದ ಮತಾಂತರದ ಆಳವಾದ ಪರಿಣಾಮಗಳನ್ನು ಸಂಪೂರ್ಣ ಗ್ರಹಿಸದೆ ಮತಾಂತರವಾಗಿ ವಿವಾಹವಾಗುವ ಮುಗ್ಧ, ಅಶಿಕ್ಷಿತ ಹಾಗೂ ಸುಲಭಕ್ಕೆ ಪ್ರಚೋದನೆಗೆ ಒಳಗಾಗಬಲ್ಲ ಹದಿಹರೆಯದ ದಂಪತಿಗೆ ಮತಾಂತರದ ಬಗ್ಗೆ ಉತ್ತಮ ತಿಳಿವಳಿಕೆಯಿಂದ ನಿರ್ಧಾರ ಕೈಗೊಂಡಿದ್ದನ್ನು ಖಾತ್ರಿಪಡಿಸಿಕೊಳ್ಳುವುದಕ್ಕಾಗಿ ಈ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ನ್ಯಾಯಮೂರ್ತಿ ಸ್ವರಣ ಕಾಂತಾ ಶರ್ಮಾ
ನ್ಯಾಯಮೂರ್ತಿ ಸ್ವರಣ ಕಾಂತಾ ಶರ್ಮಾ

ಸಿಆರ್‌ಪಿಸಿ ಹೇಳಿಕೆಗಳನ್ನು ದಾಖಲಿಸುವ ಕುರಿತಂತೆ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಕೂಡ ನ್ಯಾಯಾಲಯ ವಿವರಿಸಿದೆ.

ದೂರುದಾರೆ ಮತ್ತು ಆರೋಪಿ ಮದುವೆಯಾದ ನಂತರವೂ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ವ್ಯಕ್ತಿಯ ವಿರುದ್ಧ ದಾಖಲಾದ ಎಫ್ಐಆರ್ ರದ್ದುಗೊಳಿಸಲು ನಿರಾಕರಿಸಿದ ನ್ಯಾಯಾಲಯ ಈ ನಿರ್ದೇಶನಗಳನ್ನು ನೀಡಿದೆ.

ಮಕ್ಸೂದ್ ಅಹ್ಮದ್ ಎಂಬಾತ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರಂಭದಲ್ಲಿ ದೂರು ನೀಡಿದ್ದಳು. ಬಳಿಕ ಮಹಿಳೆ ಇಸ್ಲಾಂಗೆ ಮತಾಂತರಗೊಂಡು ಅಹ್ಮದ್ ನನ್ನು ಮದುವೆಯಾಗಿದ್ದಳು. ಆದರೂ ಆರೋಪಿಯನ್ನು ಬಂಧಿಸಲಾಗಿತ್ತು. ಎಫ್ಐಆರ್ ರದ್ದುಗೊಳಿಸಲು ತನಗೆ ಯಾವುದೇ ಆಕ್ಷೇಪವಿಲ್ಲ ಎಂದು ಮಹಿಳೆ ನಂತರ ಹೇಳಿದ್ದರು.

ಪ್ರಕರಣದ ವಾಸ್ತವಾಂಶಗಳನ್ನು ಪರಿಗಣಿಸಿದ ನ್ಯಾಯಮೂರ್ತಿ ಶರ್ಮಾ ಅವರು ಆರೋಪಿ ಮತ್ತು ದೂರುದಾರೆ ಮದುವೆಯಾದಾಗ, ದೂರುದಾರೆ ತಮ್ಮ ಮೊದಲ ಪತಿಯಿಂದ ವಿಚ್ಛೇದನ ಪಡೆದಿಲ್ಲದಿರುವುದು ಅವರ ಮರುಮದುವೆಯನ್ನು ಅನರ್ಹಗೊಳಿಸಿದೆ ಎಂದರು.

ಐಪಿಸಿಯ ಸೆಕ್ಷನ್ 376 ರ ಅಡಿಯಲ್ಲಿ ದಾಖಲಾದ ಪ್ರತಿಯೊಂದು ಪ್ರಕರಣದ ಎಫ್ಐಆರ್ ಅನ್ನು ರದ್ದುಗೊಳಿಸಲು ಸಂತ್ರಸ್ತೆ ಮತ್ತು ಆರೋಪಿಯ ನಡುವಿನ ವಿವಾಹವೇ ಆಧಾರ ಎಂಬ ನಿರೀಕ್ಷೆ ಇರಬಾರದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ವಿಚಾರಣೆ ರದ್ದುಗೊಳಿಸಿದರೆ ಅದು ಇಬ್ಬರೂ ಕಕ್ಷಿದಾರರು ಕಾನೂನು ಪ್ರಕ್ರಿಯೆ ದುರುಪಯೋಗಪಡಿಸಿಕೊಳ್ಳಲು ಅನುಮತಿಸುವುದಕ್ಕೆ ಸಮವಾಗುತ್ತದೆ. ಹೀಗಾಗಿ ಪ್ರಕರಣದ ಸಂದರ್ಭ ಮತ್ತು ಸನ್ನಿವೇಶಗಳನ್ನು ಗಮನಿಸಿ ಎಫ್‌ಐಆರ್‌ ರದ್ದತಿಗೆ ಇದು ಸೂಕ್ತ ಪ್ರಕರಣವೆಂದು ಭಾವಿಸುವುದಿಲ್ಲ ಎಂದು ಅದು ತಿಳಿಸಿತು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Attachment
PDF
Maksood Ahmad v State of NCT of Delhi & Anr.pdf
Preview
Kannada Bar & Bench
kannada.barandbench.com