ವ್ಯಕ್ತಿಯೊಬ್ಬರು ದೇಶ ತೊರೆಯದಂತೆ ತಡೆದಾಗ ಅವರಿಗೆ ಲುಕ್‌ಔಟ್ ಸುತ್ತೋಲೆಯ (ಎಲ್‌ಒಸಿ) ಪ್ರತಿ ನೀಡುವುದು ಸ್ವಾಭಾವಿಕ ನ್ಯಾಯ ತತ್ವ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶ ಮಾಡಿದೆ.
ಬೆಂಗಳೂರಿನ ಹರ್ಷವರ್ಧನ ರಾವ್ ಕೆ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
ಎಲ್‌ಒಸಿ ಹಿಂಪಡೆಯಲು ಅರ್ಜಿದಾರರು ಸಲ್ಲಿಸಿರುವ ಕೋರಿಕೆಯನ್ನು ಪರಿಗಣಿಸಿ, ಆರು ತಿಂಗಳಲ್ಲಿ ಸೂಕ್ತ ಆದೇಶ ಹೊರಡಿಸುವಂತೆ ಬೆಂಗಳೂರು ದಕ್ಷಿಣದ ಡಿಸಿಪಿಗೆ ಹೈಕೋರ್ಟ್ ನಿರ್ದೇಶಿಸಿದೆ.
“ಜಾಮೀನು ಷರತ್ತಿನಲ್ಲಿ ಪ್ರವಾಸ ನಿರ್ಬಂಧಗಳು ಸೇರಿಲ್ಲ. ಆರೋಪಿಗೆ ಜಾಮೀನು ದೊರೆತಿರುವಾಗ ಅವರ ಪ್ರವಾಸಕ್ಕೆ ಅಡ್ಡಿಪಡಿಸುತ್ತಿರುವುದೇಕೆ ಎಂಬುದನ್ನು ತಿಳಿಸಬೇಕು. ಅದಾಗ್ಯೂ, ಕಾನೂನಿನ ಅನ್ವಯ ಅಧಿಕೃತ ಜ್ಞಾಪನ ಪತ್ರ ಮೂಲಕ ಜಾರಿಗೆ ತಂದಿರುವ ಎಲ್‌ಒಸಿ ನಿಯಮಾವಳಿಗಳು ಅರ್ಜಿದಾರರ ಪ್ರಯಾಣದ ಹಕ್ಕನ್ನು ಮೊಟಕುಗೊಳಿಸುತ್ತದೆ ಎಂದು ಅರ್ಥೈಸಿಕೊಂಡರೂ ಸಹ ಅರ್ಜಿದಾರರು ಕನಿಷ್ಠ ನಕಲು ಪ್ರತಿಗೆ ಅರ್ಹರಾಗುತ್ತಾರೆ” ಎಂದು ನ್ಯಾಯಾಲಯ ಹೇಳಿದೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪತ್ನಿಯ ಜೊತೆ ಹರ್ಷವರ್ಧನ ರಾವ್ ಅವರು ವ್ಯಾಜ್ಯ ಹೊಂದಿದ್ದಾರೆ ಎನ್ನಲಾಗಿದೆ. ಪುತ್ರನನ್ನು ಪತಿ ಹರ್ಷವರ್ಧನ್ ಅವರು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಪತ್ನಿಯು ಮತ್ತೊಂದು ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಎರಡು ತಿಂಗಳು ನ್ಯಾಯಾಂಗ ಬಂಧನದಲ್ಲಿದ್ದ ಹರ್ಷವರ್ಧನ್ ಆನಂತರ ಬಿಡುಗಡೆ ಹೊಂದಿದ್ದರು.
ಅಧಿಕೃತ ಕೆಲಸದ ಮೇಲೆ ಪ್ಯಾರಿಸ್‌ಗೆ ಪ್ರಯಾಣಿಸುವಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹರ್ಷವರ್ಧನ್ ಅವರನ್ನು 2022ರ ಮೇ 29ರಂದು ಪೊಲೀಸರು ತಡೆದಿದ್ದರು. ಪತ್ನಿ ನೀಡಿದ್ದ ದೂರಿನ ಆಧಾರದ ಮೇಲೆ ಹರ್ಷವರ್ಧನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ, ಅವರ ವಿರುದ್ಧ ಬೆಂಗಳೂರು ದಕ್ಷಿಣದ ಡಿಸಿಪಿ ಎಲ್‌ಒಸಿ ಜಾರಿ ಮಾಡಿದ್ದಾರೆ ಎಂದು ತಿಳಿಸಲಾಗಿತ್ತು. ಹಲವು ಬಾರಿ ವಿನಂತಿಸಿದರೂ ಸಂಬಂಧಿತ ಅಧಿಕಾರಿಗಳನ್ನು ಎಲ್‌ಒಸಿ ಹಿಂಪಡೆಯುವ ಮನವಿ ಪುರಸ್ಕರಿಸಿದ ಹಿನ್ನೆಲೆಯಲ್ಲಿ ಹರ್ಷವರ್ಧನ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ವಕೀಲರಾದ ಎಸ್ ಮಹೇಶ್ ಮತ್ತು ಸಂಜಯ್ ಯಾದವ್ ಬಿ ಅವರು ಅರ್ಜಿದಾರರನ್ನು ಪ್ರತಿನಿಧಿಸಿದ್ದರು.