ʼನನಗೂ ಬೇಕು ವ್ಯಕ್ತಿ ಸ್ವಾತಂತ್ರ್ಯʼ: ಯಾರೆಲ್ಲರ ಬಿಡುಗಡೆಗಾಗಿ ಕೇಳಿ ಬರುತ್ತಿದೆ ಆಗ್ರಹ?

ಬಂಧನದಲ್ಲಿರುವ ಅನೇಕರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳು ದೊರೆಯುತ್ತಿವೆ ಎನ್ನುವುದು ಆಳುವವರಿಗೆ ಮುಜುಗರ ತರುವಂತಹ ವಿಚಾರವಾದರೆ ಹೋರಾಟಗಾರರ ಪರವಾಗಿ ನಿಂತವರಿಗೆ ಹೆಮ್ಮೆಯ ಸಂಗತಿ ಎನಿಸಿದೆ.
ʼನನಗೂ ಬೇಕು ವ್ಯಕ್ತಿ ಸ್ವಾತಂತ್ರ್ಯʼ: ಯಾರೆಲ್ಲರ ಬಿಡುಗಡೆಗಾಗಿ ಕೇಳಿ ಬರುತ್ತಿದೆ ಆಗ್ರಹ?

ಒಳಾಂಗಣ ವಿನ್ಯಾಸಕಾರರೊಬ್ಬರ ಆತ್ಮಹತ್ಯೆ ಪ್ರಕರಣದ ಆರೋಪಿ, ಪತ್ರಕರ್ತ ಅರ್ನಾಬ್‌ ಗೋಸ್ವಾಮಿ ಅವರಿಗೆ ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್ ಮಧ್ಯಂತರ‌ ಜಾಮೀನು ನೀಡಿತು. ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ, “...ಪ್ರಕರಣದಲ್ಲಿ ಮಧ್ಯಪ್ರವೇಶಿಸದಿದ್ದರೆ ವಿನಾಶದ ಹಾದಿಯಲ್ಲಿ ನಾವು ಮುಂದುವರಿಯುತ್ತೇವೆ. ನನ್ನ ಆಯ್ಕೆಗೇ ಬಿಟ್ಟರೆ, ನಾನು ಆ ವಾಹಿನಿಯನ್ನು (ರಿಪಬ್ಲಿಕ್ ಟಿವಿ) ನೋಡುವುದಿಲ್ಲ. ನೀವು ಸೈದ್ಧಾಂತಿಕವಾಗಿ ಭಿನ್ನವಾಗಿರಬಹುದು ಆದರೆ ಸಾಂವಿಧಾನಿಕ ನ್ಯಾಯಾಲಯಗಳು ಅಂತಹ ಸ್ವಾತಂತ್ರ್ಯವನ್ನು ರಕ್ಷಿಸಬೇಕಾಗುತ್ತದೆ. ಇಲ್ಲವಾದರೆ ನಾವು ವಿನಾಶದ ಹಾದಿಯಲ್ಲಿ ಸಾಗುತ್ತೇವೆ” ಎಂದು ಅಭಿಪ್ರಾಯಪಟ್ಟಿತ್ತು.

ಆದರೆ ಇದೇ ರೀತಿ ಉಳಿದ ಪ್ರಕರಣವನ್ನು ತಕ್ಷಣ ಕೈಗೆತ್ತಿಕೊಳ್ಳದಿರುವುದು ಹಾಗೂ ಅವುಗಳನ್ನು ಶೀಘ್ರ ಇತ್ಯರ್ಥಪಡಿಸದಿರುವ ಪರಿಣಾಮ ಸಾಮಾನ್ಯ ಕೈದಿಗಳು, ಬಂಧನದಲ್ಲಿರುವ ಸಾಮಾಜಿಕ ಹೋರಾಟಗಾರರು ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಯುತ್ತಿರುವ ಬಗ್ಗೆ ದೇಶದೆಲ್ಲೆಡೆ ಆಕ್ಷೇಪ ಕೇಳಿಬಂದಿದೆ. 'ವ್ಯಕ್ತಿ ಸ್ವಾತಂತ್ರ್ಯವೆನ್ನುವುದು ಪ್ರಭಾವ ಉಳ್ಳವರಿಗೆ ಮಾತ್ರ ಇದೆ' ಎಂಬ ಅಸಮಾಧಾನ ವ್ಯಕ್ತವಾಗಿದೆ. ಅರ್ನಾಬ್‌ ಬಂಧನ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದಾದರೆ ದೇಶದ ವಿವಿಧೆಡೆ ಹಲವು ವರ್ಷಗಳಿಂದ ಬಂಧನಕ್ಕೊಳಗಾದ ಜನಪರ ಹೋರಾಟಗಾರರು, ಪತ್ರಕರ್ತರು, ವಕೀಲರು, ಪ್ರಾಧ್ಯಾಪಕರು, ಕಲಾವಿದರಿಗೆ ಅದು ಅನ್ವಯಿಸುವುದಿಲ್ಲವೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ ಸೇರಿದಂತೆ ದೇಶದ ವಿವಿಧ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆಕ್ರೋಶವೂ ವ್ಯಕ್ತವಾಗಿದೆ.

ಹೀಗೆ ಬಂಧನದಲ್ಲಿರುವ ಕೆಲವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳು ದೊರೆಯುತ್ತಿವೆ ಎನ್ನುವುದು ಆಳುವವರಿಗೆ ಮುಜುಗರ ತರುವಂತಹ ವಿಚಾರವಾದರೆ ಹೋರಾಟಗಾರರ ಪರವಾಗಿ ನಿಂತವರಿಗೆ ಹೆಮ್ಮೆಯ ಸಂಗತಿ ಎನಿಸಿದೆ. ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ದೊಡ್ಡ ಮಟ್ಟದಲ್ಲಿ ಕೂಗು ಕೇಳಿ ಬಂದಿದ್ದು, ನ್ಯಾಯಾಲಯದಿಂದ ಅರ್ನಾಬ್‌ರಿಗೆ ದೊರೆತ ಶೀಘ್ರ ಸ್ಪಂದನೆ ಇವರಿಗೂ ದೊರೆಯಬೇಕು ಎಂಬ ನೆಲೆಯಲ್ಲಿ ಆಂದೋಲನಗಳು ನಡೆದಿವೆ.

ಈ ಕೂಗನ್ನು ಪ್ರತಿಬಿಂಬಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಪೋಸ್ಟರ್‌ಗಳು ಮೂಡಿಬಂದಿದ್ದು ಅನೇಕ ಹೋರಾಟಗಾರರ ಸ್ಥಿತಿಗತಿ ಬಗ್ಗೆ ಬೆಳಕು ಚೆಲ್ಲಲಾಗಿದೆ. ʼನನ್ನ ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಏನು ಹೇಳುತ್ತೀರಿ?" ಎಂಬ ಒಕ್ಕಣೆ ಇವುಗಳಲ್ಲಿದೆ. ಸುಧಾ ಭಾರದ್ವಾಜ್‌, ಜಿ ಎನ್‌ ಸಾಯಿಬಾಬಾ, ವರವರ ರಾವ್‌, ಉಮರ್‌ ಖಾಲಿದ್‌, ಆನಂದ್‌ ತೇಲ್ತುಂಬ್ಡೆ, ಗುಲ್ವಿಶಾ ಫಾತಿಮಾ, ದೇವಾಂಗನಾ ಕಲಿತಾ, ಆಸಿಫ್‌ ಸುಲ್ತಾನ್ ಮುಂತಾದವರಿಗೆ ನ್ಯಾಯ ಒದಗಿಸಬೇಕು ಎಂಬ ಧ್ವನಿಗೆ ಬಲ ಬಂದಿದೆ. ಅಲ್ಲದೆ ವಕೀಲ ಸುರೇಂದ್ರ ಗಾಡ್ಲಿಂಗ್‌, ಮಾನವ ಹಕ್ಕುಗಳ ಹೋರಾಟಗಾರ ಗೌತಮ ನವಲಾಖ, ಪ್ರಾಧ್ಯಾಪಕಿ ಶೋಮಾ ಸೇನ್‌, ಮರಾಠಿ ನಟ ಸುಧೀರ್‌ ಡವಳೆ, ಭಾರತ ಜನಾಂದೋಲನ ಸಂಘಟನೆಯ ಮಹೇಶ್‌ ರಾವುತ್‌, ಲೇಖಕರು ಹಾಗೂ ಹೋರಾಟಗಾರರಾದ ಅರು ಪೆರೇರಾ, ರೋನಾ ವಿಲ್ಸನ್,‌ ಈಚೆಗೆ ಬಂಧನಕ್ಕೊಳಗಾದ ಜಾರ್ಖಂಡ್‌ ಆದಿವಾಸಿಗಳ ಸೇವೆಯಲ್ಲಿ ತೊಡಗಿದ್ದ ಫಾದರ್‌ ಸ್ಟಾನ್‌ ಸ್ವಾಮಿ ಅವರನ್ನು ಸಹ ಕೂಡಲೇ ಬಂಧನದಿಂದ ಬಿಡುಗಡೆ ಮಾಡಬೇಕೆಂಬ ಕೂಗು ಕೇಳಿಬರುತ್ತಿದೆ. ಅಂದಹಾಗೆ ಹೋರಾಟಗಾರರ ಹಿನ್ನೆಲೆ, ಬಂಧನಕ್ಕೆ ಕಾರಣಗಳು, ಸೆರೆವಾಸದಲ್ಲಿ ಕಳೆದ ದಿನಗಳ ಮಾಹಿತಿ ಹಾಗೂ ಪೋಸ್ಟರ್‌ಗಳನ್ನು ಇಲ್ಲಿ ನೀಡಲಾಗಿದೆ:

ಸುಧಾ ಭಾರದ್ವಜ್

Sudha Bharadwaj
Sudha Bharadwaj

ಹಿನ್ನೆಲೆ: ವಕೀಲೆ, ಆದಿವಾಸಿ ಹಕ್ಕುಗಳ ಹೋರಾಟಗಾರ್ತಿ, ಕಾರ್ಮಿಕ ಸಂಘಟಕಿ
ಬಂಧನಕ್ಕೆ ಕಾರಣ: ಭೀಮಾ ಕೋರೆಗಾಂವ್‌ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪ
ಬಳಸಲಾದ ಕಾಯಿದೆ: ಯುಎಪಿಎ ಕಾಯಿದೆ
ಬಂಧಿಸಿದ ದಿನ: 28 ಆಗಸ್ಟ್ 2018
ಕೈದಿಯಾಗಿ ಕಳೆದ ದಿನಗಳು: 800ಕ್ಕೂ ಹೆಚ್ಚು ದಿನಗಳು

ಜಿ ಎನ್‌ ಸಾಯಿಬಾಬಾ

G N Saibaba
G N Saibaba

ಹಿನ್ನೆಲೆ: ದೆಹಲಿ ವಿಶ್ವವಿದ್ಯಾಲಯದ ಇಂಗ್ಲಿಷ್‌ ಪ್ರಾಧ್ಯಾಪಕ
ಬಂಧನಕ್ಕೆ ಕಾರಣ: ನಕ್ಸಲರೊಂದಿಗೆ ನಂಟು ಹೊಂದಿದ ಆರೋಪ
ಬಳಸಲಾದ ಕಾಯಿದೆ: ಯುಎಪಿಎ ಕಾಯಿದೆ
ಬಂಧಿಸಿದ ದಿನ: 9 ಮೇ 2014
ಕೈದಿಯಾಗಿ ಕಳೆದ ದಿನಗಳು: 2380ಕ್ಕೂ ಹೆಚ್ಚು ದಿನಗಳು

ಆನಂದ್‌ ತೇಲ್ತುಂಬ್ಡೆ

Anand Teltumbde
Anand Teltumbde

ಹಿನ್ನೆಲೆ: ಪ್ರಾಧ್ಯಾಪಕ, ವಿದ್ವಾಂಸ, ಲೇಖಕ, ನಾಗರಿಕ ಹಕ್ಕುಗಳ ಹೋರಾಟಗಾರ
ಬಂಧನಕ್ಕೆ ಕಾರಣ: ಭೀಮಾ ಕೋರೆಗಾಂವ್‌ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪ
ಬಳಸಲಾದ ಕಾಯಿದೆ: ಯುಎಪಿಎ ಕಾಯಿದೆ
ಬಂಧಿಸಿದ ದಿನ: 3 ಫೆಬ್ರುವರಿ 2019
ಕೈದಿಯಾಗಿ ಕಳೆದ ದಿನಗಳು: 800ಕ್ಕೂ ಹೆಚ್ಚು ದಿನಗಳು

ಮೀರನ್‌ ಹೈದರ್‌

Meeran Haider
Meeran Haider

ಹಿನ್ನೆಲೆ: ಪಿಎಚ್‌ಡಿ ವಿದ್ಯಾರ್ಥಿ, ಆರ್‌ಜೆಡಿ ಪಕ್ಷದ ದೆಹಲಿ ರಾಜ್ಯ ಯುವ ಘಟಕದ ಅಧ್ಯಕ್ಷ
ಬಂಧನಕ್ಕೆ ಕಾರಣ: ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪ
ಬಳಸಲಾದ ಕಾಯಿದೆ: ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ)
ಬಂಧಿಸಿದ ದಿನ: 1 ಏಪ್ರಿಲ್ 2020
ಕೈದಿಯಾಗಿ ಕಳೆದ ದಿನಗಳು: 224ಕ್ಕೂ ಹೆಚ್ಚು ದಿನಗಳು

ವರವರ ರಾವ್‌

ಹಿನ್ನೆಲೆ: ಉಪನ್ಯಾಸಕ, ಕವಿ, ಹೋರಾಟಗಾರ
ಬಂಧನಕ್ಕೆ ಕಾರಣ: ನಕ್ಸಲರಿಗೆ ನೆರವು ಮತ್ತು ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ನಡೆಸಿದ ಆರೋಪ
ಬಳಸಲಾದ ಕಾಯಿದೆ: ಭಯೋತ್ಪಾದನಾ ವಿರೋಧಿ ಕಾಯಿದೆ, ಯುಎಪಿಎ ಕಾಯಿದೆ
ಬಂಧಿಸಿದ ದಿನ: 28 ಆಗಸ್ಟ್ 2018
ಕೈದಿಯಾಗಿ ಕಳೆದ ದಿನಗಳು: 800ಕ್ಕೂ ಹೆಚ್ಚು ದಿನಗಳು

ಜಗ್ತರ್‌ ಸಿಂಗ್‌ ಜೋಹಲ್‌ (ಜಗ್ಗಿ)

Jagtar Singh (Jaggi)
Jagtar Singh (Jaggi)

ಹಿನ್ನೆಲೆ: ಸಿಖ್‌ ಹೋರಾಟಗಾರ
ಬಂಧನಕ್ಕೆ ಕಾರಣ: ಆರ್‌ಎಸ್‌ಎಸ್‌ ಮುಖಂಡ ಸೇರಿದಂತೆ ಹಲವು ಹಿಂದುತ್ವವಾದಿ ಮುಖಂಡರ ಹತ್ಯೆಗೆ ಸಂಚು ರೂಪಿಸಿದ ಆರೋಪ
ಬಳಸಲಾದ ಕಾಯಿದೆ: ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳು, ಶಸ್ತ್ರಾಸ್ತ್ರ ಕಾಯಿದೆ, ಯುಎಪಿಎ ಕಾಯಿದೆ ಇತ್ಯಾದಿ.
ಬಂಧಿಸಲಾದ ದಿನ: 4 ನವೆಂಬರ್‌ 2017
ಕೈದಿಯಾಗಿ ಕಳೆದ ದಿನಗಳು: 1,120ಕ್ಕೂ ಹೆಚ್ಚು ದಿನಗಳು

ಗುಲ್ಫಿಶಾ ಫಾತಿಮಾ

Gulfisha Fatima
Gulfisha Fatima

ಹಿನ್ನೆಲೆ: ಸಮುದಾಯ ಶಿಕ್ಷಕಿ, ಎಂಬಿಎ ಪದವೀಧರೆ
ಬಂಧನಕ್ಕೆ ಕಾರಣ: ಸಿಎಎ ಎನ್‌ಆರ್‌ಸಿ ಎನ್‌ಪಿಆರ್‌ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವೇಳೆ ದೆಹಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪ
ಬಳಸಲಾದ ಕಾಯಿದೆ: ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ)
ಬಂಧಿಸಿದ ದಿನ: 29 ಏಪ್ರಿಲ್‌ 2020
ಕೈದಿಯಾಗಿ ಕಳೆದ ದಿನಗಳು: 217ಕ್ಕೂ ಹೆಚ್ಚು ದಿನಗಳು

Natasha Narwal and Devangana Kalita
Natasha Narwal and Devangana Kalita

ದೇವಾಂಗನಾ ಕಲಿತಾ

ಹಿನ್ನೆಲೆ: ಪಿಂಜ್ರಾತೋಡ್‌ (ಅರ್ಥ- ಪಂಜರವ ಮುರಿ) ಸಂಘಟನೆ ಕಾರ್ಯಕರ್ತೆ, ಜೆಎನ್‌ಯು ವಿದ್ಯಾರ್ಥಿನಿ
ಬಂಧನಕ್ಕೆ ಕಾರಣ: ದೆಹಲಿ ಹಿಂಸಾಚಾರದಲ್ಲಿ ಭಾಗಿಯಾದ ಆರೋಪ
ಬಳಸಲಾದ ಕಾಯಿದೆ: ಗಲಭೆ, ಕಾನೂನು ಬಾಹಿರ ಚಟುವಟಿಕೆ, ಕೊಲೆ ಯತ್ನ ಇತ್ಯಾದಿ ಪ್ರಕರಣಗಳು
ಬಂಧಿಸಿದ ದಿನ: 23 ಮೇ 2020
ಕೈದಿಯಾಗಿ ಕಳೆದ ದಿನಗಳು: 170ಕ್ಕೂ ಹೆಚ್ಚು ದಿನಗಳು

ನತಾಶಾ ನರ್ವಾಲ್‌

ಹಿನ್ನೆಲೆ: ಪಿಂಜ್ರಾತೋಡ್‌ ಸಂಘಟನೆ ಕಾರ್ಯಕರ್ತೆ, ಜೆಎನ್‌ಯು ವಿದ್ಯಾರ್ಥಿನಿ
ಬಂಧನಕ್ಕೆ ಕಾರಣ: ಸಿಎಎ ಪ್ರತಿಭಟನೆ ವೇಳೆ ದೆಹಲಿ ಹಿಂಸಾಚಾರದಲ್ಲಿ ಭಾಗಿಯಾದ ಆರೋಪ
ಬಳಸಲಾದ ಕಾಯಿದೆ: ಯುಎಪಿಎ
ಬಂಧಿಸಿದ ದಿನ: 23 ಮೇ 2020
ಕೈದಿಯಾಗಿ ಕಳೆದ ದಿನಗಳು: 170ಕ್ಕೂ ಹೆಚ್ಚು ದಿನಗಳು

ಆಸಿಫ್‌ ಸುಲ್ತಾನ್‌

Asif Sultan
Asif Sultan

ಹಿನ್ನೆಲೆ: ಕಾಶ್ಮೀರ್‌ ನೆರೇಟರ್‌ ಪತ್ರಿಕೆಯ ವರದಿಗಾರ
ಬಂಧನಕ್ಕೆ ಕಾರಣ: ಭಯೋತ್ಪಾದಕರಿಗೆ ಸಹಾಯ ನೀಡಿದ ಆರೋಪ
ಬಳಸಲಾದ ಕಾಯಿದೆ: ಯುಎಪಿಎ ಇತ್ಯಾದಿ
ಬಂಧಿಸಿದ ದಿನ: 31 ಆಗಸ್ಟ್ 2018
ಕೈದಿಯಾಗಿ ಕಳೆದ ದಿನಗಳು:‌ 800ಕ್ಕೂ ಹೆಚ್ಚು ದಿನಗಳು

ನಸೀಮಾ ಬಾನೊ

Naseema Bano
Naseema Bano

ಹಿನ್ನೆಲೆ: ಗೃಹಿಣಿ
ಬಂಧನಕ್ಕೆ ಕಾರಣ: ಎ ಕೆ 47 ಗನ್‌ ಹಿಡಿದಿದ್ದ ಬಂಡುಕೋರ ಮಗನೊಂದಿಗೆ ಫೋಟೊ ತೆಗೆಸಿಕೊಂಡ ಆರೋಪ
ಬಳಸಲಾದ ಕಾಯಿದೆ: ಯುಎಪಿಎ
ಬಂಧಿಸಿದ ದಿನ: 20 ಜೂನ್‌ 2020
ಕೈದಿಯಾಗಿ ಕಳೆದ ದಿನಗಳು: 150ಕ್ಕೂ ಹೆಚ್ಚು ದಿನಗಳು

ಉಮರ್‌ ಖಾಲಿದ್

Umar Khalid
Umar Khalid

ಹಿನ್ನೆಲೆ: ಮಾನವ ಹಕ್ಕುಗಳ ಹೋರಾಟಗಾರ ವಿದ್ಯಾರ್ಥಿ ಸಂಘಟನೆ ಡಿಎಸ್‌ಯು ನ ಮಾಜಿ ನಾಯಕ
ಬಂಧನಕ್ಕೆ ಕಾರಣ: ಕೋಮುಗಲಭೆ ಸೃಷ್ಟಿಸಿದ ಆರೋಪ
ಬಳಸಲಾದ ಕಾಯಿದೆ: ಯುಎಪಿಎ ಇತ್ಯಾದಿ ಕಾಯಿದೆಗಳು
ಬಂಧಿಸಿದ ದಿನ: 14 ಸೆಪ್ಟೆಂಬರ್‌
ಕೈದಿಯಾಗಿ ಕಳೆದ ದಿನಗಳು: ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ 60 ದಿನಗಳು.

ಜಗ್ತರ್‌ ಸಿಂಗ್‌ ಹವಾರಾ

Jagtar Singh Hawara
Jagtar Singh Hawara

ಹಿನ್ನೆಲೆ: ಬಬ್ಬರ್‌ ಖಾಲ್ಸಾ ಬಂಡುಕೋರ
ಬಂಧನಕ್ಕೆ ಕಾರಣ: ಪಂಜಾಬ್‌ ಮಾಜಿ ಮುಖ್ಯಮಂತ್ರಿ ಬಿಯಾಂತ್‌ ಸಿಂಗ್‌ ಹತ್ಯೆಗೆ ಸಂಚು ರೂಪಿಸಿದ ಆರೋಪ
ಬಳಸಲಾದ ಕಾಯಿದೆ: ಶಸ್ತ್ರಾಸ್ತ್ರ ಕಾಯಿದೆ, ಐಪಿಸಿಯ 307ನೇ ಸೆಕ್ಷನ್‌
ಬಂಧಿಸಿದ ದಿನ: 24 ಜುಲೈ 2017
ಕೈದಿಯಾಗಿ ಕಳೆದ ದಿನಗಳು: 5475ಕ್ಕೂ ಹೆಚ್ಚು ದಿನಗಳು

ಶರ್ಜೀಲ್‌ ಇಮಾಮ್‌

Sharjeel Imam
Sharjeel Imam

ಹಿನ್ನೆಲೆ: ಐಐಟಿ ಪದವೀಧರ, ಜೆಎನ್‌ಯು ಇತಿಹಾಸ ವಿದ್ಯಾರ್ಥಿ
ಬಂಧನಕ್ಕೆ ಕಾರಣ: ಸಿಎಎ ಪ್ರತಿಭಟನೆ ವೇಳೆ ದೆಹಲಿ ಹಿಂಸಾಚಾರದಲ್ಲಿ ಭಾಗಿಯಾದ ಆರೋಪ
ಬಳಸಲಾದ ಕಾಯಿದೆ: ಯುಎಪಿಎ, ದೇಶದ್ರೋಹಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ ಇತ್ಯಾದಿ
ಬಂಧಿಸಿದ ದಿನ: 28 ಜನವರಿ 2020
ಕೈದಿಯಾಗಿ ಕಳೆದ ದಿನಗಳು: 280ಕ್ಕೂ ಹೆಚ್ಚು ದಿನಗಳು

Related Stories

No stories found.
Kannada Bar & Bench
kannada.barandbench.com