ರಾಷ್ಟ್ರೀಯ ಹಿತಾಸಕ್ತಿಗೆ ವೈಯಕ್ತಿಕ ಹಕ್ಕುಗಳು, ಪದ್ಧತಿ, ಸಂಪ್ರದಾಯ ತಲೆಬಾಗಬೇಕು: ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌

ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರ ಮಾಡುವಾಗ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನ್ಯಾಯಾಲಯವು ನಿರ್ದೇಶಿಸಿತು.
High Court of Jammu & Kashmir
High Court of Jammu & Kashmir
Published on

ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದವರ ಮೃತ ದೇಹ ನಿರ್ವಹಣೆ ಮತ್ತು ಅಂತ್ಯ ಸಂಸ್ಕಾರ ಮಾಡುವಾಗ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಈಚೆಗೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ಹೇಳಿದೆ. ಅಲ್ಲದೇ, ಕೋವಿಡ್‌ ಸಾಂಕ್ರಾಮಿಕತೆಯ ಈ ಸಂದರ್ಭದಲ್ಲಿ ವಿಶಾಲವಾದ ರಾಷ್ಟ್ರೀಯ ಹಿತಾಸಕ್ತಿಯು ವೈಯಕ್ತಿಕ ಹಕ್ಕುಗಳು, ಪದ್ಧತಿ, ಸಂಪ್ರದಾಯಗಳಿಗಿಂತ ಹೆಚ್ಚು ಮುಖ್ಯವಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಂಕಜ್‌ ಮಿಥಲ್‌ ಮತ್ತು ನ್ಯಾಯಮೂರ್ತಿ ವಿನೋದ್‌ ಚಟರ್ಜಿ ಕೌಲ್‌ ಅವರಿದ್ದ ವಿಭಾಗೀಯ ಪೀಠವು ನಡೆಸಿತು. ಈ ವೇಳೆ ವೈರಸ್‌ನಿಂದ ಮೃತಪಟ್ಟವರ ಕಳೇಬರವನ್ನು ಅವರ ಸಂಬಂಧಿಕರಿಗೆ ನೀಡಬೇಕು ಎಂಬ ಮನವಿಗೆ ಸಂಬಂಧಿಸಿದಂತೆ ನಿರ್ದೇಶನ ನೀಡಬೇಕು ಎಂಬುದಕ್ಕೆ ಪೀಠ ನಿರಾಕರಿಸಿತು.

“ಕೋವಿಡ್‌ ಸಾಂಕ್ರಾಮಿಕತೆಯ ಈ ಅಸಾಮಾನ್ಯವಾದ ಸಂದರ್ಭದಲ್ಲಿ ವಿಶಾಲವಾದ ರಾಷ್ಟ್ರೀಯ ಹಿತಾಸಕ್ತಿಯು ವೈಯಕ್ತಿಕ ಹಕ್ಕುಗಳು, ಪದ್ದತಿ, ಸಂಪ್ರದಾಯಗಳಿಗಿಂತ ಹೆಚ್ಚು ಮುಖ್ಯವಾಗುತ್ತದೆ. ಇದಕ್ಕೆ ಎಲ್ಲರೂ ತಲೆಬಾಗಬೇಕು” ಎಂದು ಪೀಠ ಹೇಳಿದೆ.

ಕೊರೊನಾ ವೈರಸ್‌ನಿಂದ ಮೃತಪಟ್ಟವರ ಸಂಬಂಧಿಕರಿಗೆ ಕಳೇಬರ ನೋಡಲು ಮತ್ತು ಸರ್ಕಾರದ ಮಾರ್ಗಸೂಚಿಯ ಅನ್ವಯ ಅಂತಿಮ ವಿಧಿ-ವಿಧಾನ ಪೂರೈಸಲು ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಸಮಸ್ಯೆ ಮಾಡುವುದಿಲ್ಲ ಎಂಬ ಭರವಸೆಯನ್ನು ಪೀಠವು ವ್ಯಕ್ತಪಡಿಸಿತು.

ಕೋವಿಡ್‌ನಿಂದ ಮೃತಪಟ್ಟರೆ ಮರಣೋತ್ತರ ಪರೀಕ್ಷೆ ನಡೆಸುವ ಅಗತ್ಯವಿಲ್ಲದಿರುವುದರಿಂದ ಕಳೇಬರವನ್ನು ಅವರ ಕುಟುಂಬಸ್ಥರಿಗೆ ನೀಡುವ ಸಂಬಂಧ ನಿರ್ದೇಶನ ನೀಡಬೇಕು ಎಂದು ಬಲ್ವೀಂದರ್‌ ಸಿಂಗ್‌ ಎಂಬವರು ವಕೀಲ ದಿನೇಶ್‌ ಸಿಂಗ್‌ ಚೌಹಾಣ್‌ ಅವರ ಮೂಲಕ ಮನವಿ ಸಲ್ಲಿಸಿದ್ದರು.

ಮೃತಪಟ್ಟವರ ಮುಖ ನೋಡಲು ಸಂಬಂಧಿಕರಿಗೆ ಅವಕಾಶ ಮಾಡಿಕೊಡಬೇಕು ಮತ್ತು ಶವಕ್ಕೆ ಪವಿತ್ರ ಜಲವನ್ನು ಪ್ರೋಕ್ಷಣೆ ಮಾಡುವುದು ಸೇರಿದಂತೆ ವಿಧಿ-ವಿಧಾನದ ಮೂಲಕ ಅಂತ್ಯ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಬೇಕು ಎಂದು ಮನವಿಯಲ್ಲಿ ಕೋರಲಾಗಿತ್ತು.

ಇದಕ್ಕೆ ಒಪ್ಪದ ಪೀಠವು “ಕೋವಿಡ್‌ ಸಾಂಕ್ರಾಮಿಕತೆಯನ್ನು ನಿಯಂತ್ರಿಸುವ ಸಂಬಂಧ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಜ್ಞರ ಜೊತೆಗೂಡಿ ಮಾರ್ಗಸೂಚಿ ರೂಪಿಸಿದೆ. ಇದರ ಪ್ರಕಾರ ಕಳೇಬರವನ್ನು ನಿರ್ದಿಷ್ಟವಾಗಿ ಕುಟುಂಬಸ್ಥರಿಗೆ ಒಪ್ಪಿಸಲು ಮಾರ್ಗಸೂಚಿ ಅನುಮತಿಸದೆ ಮೃತದೇವನ್ನು ನೋಡಲು ಮತ್ತು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟರೆ ಅಷ್ಟೇ ಸಾಕು. ಇಲ್ಲವಾದರೆ ವೈರಸ್‌ ನಿಯಂತ್ರಿಸುವುದು ಕಷ್ಟವಾಗುತ್ತದೆ” ಎಂದಿದೆ.

Also Read
[ಕೋವಿಡ್‌-19] ಅಂತ್ಯ ಸಂಸ್ಕಾರದ ವೇಳೆ 20ಕ್ಕಿಂತ ಹೆಚ್ಚು ಮಂದಿ ಇರದಂತೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಿ: ಹೈಕೋರ್ಟ್‌

ಸರ್ಕಾರಿ ಕ್ರೀಡಾಂಗಣವನ್ನು ಲಸಿಕಾ ಕೇಂದ್ರವನ್ನಾಗಿ ಪರಿವರ್ತಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಗೆ ವಿಭಾಗೀಯ ಪೀಠ ಅಸಮ್ಮತಿಸಿದೆ. “ಈ ಕೋರಿಕೆಯನ್ನು ಪೀಠ ಪರಿಗಣಿಸುವುದು ಸೂಕ್ತವಲ್ಲ. ಲಸಿಕೆ ನೀಡಲು ಸ್ಥಳದ ಸಮಸ್ಯೆ ಉದ್ಭವಿಸಿದರೆ ಆಡಳಿತಗಾರರು ಅದನ್ನು ತೀರ್ಮಾನಿಸುತ್ತಾರೆ” ಎಂದು ನ್ಯಾಯಾಲಯ ಹೇಳಿದೆ.

ಸಂಭಾವ್ಯ ಮೂರನೇ ಅಲೆ ನಿಯಂತ್ರಿಸುವ ಕುರಿತು ಮುಂಚಿತವಾಗಿ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಇದಕ್ಕಾಗಿ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಕೆಲಸವನ್ನು ತುರ್ತಾಗಿ ಮಾಡಬೇಕು. ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ಅಗತ್ಯವಿರುವ ಕಡೆಗಳಲ್ಲಿ ಆಮ್ಲಜನಕ ಪೂರೈಕೆ ಘಟಕಗಳನ್ನು ಆರಂಭಿಸುವುದನ್ನು ಸರ್ಕಾರ ಖಾತರಿಪಡಿಸಬೇಕು. ತಾತ್ಕಾಲಿಕವಾಗಿ ಸಿದ್ಧಪಡಿಸಿರುವ ವ್ಯವಸ್ಥೆಯನ್ನು ಹಾಗೆ ಉಳಿಸಿಕೊಳ್ಳಬೇಕು ಎಂದಿರುವ ನ್ಯಾಯಾಲಯವು ವಿಚಾರಣೆಯನ್ನು ಜುಲೈ 6ಕ್ಕೆ ಮುಂದೂಡಿದೆ.

Kannada Bar & Bench
kannada.barandbench.com