ಸಾಕು ನಾಯಿ ಮಲ ವಿಸರ್ಜನೆ ಪ್ರಕರಣ: ಶ್ವಾನ ಮಾಲಕಿ ಸೇರಿ ಕುಟುಂಬ ಸದಸ್ಯರ ವಿರುದ್ಧದ ತನಿಖೆಗೆ ಹೈಕೋರ್ಟ್‌ ತಡೆ

ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ 13.01.2026ರಂದು ಬಿಎನ್‌ಎಸ್‌ ಸೆಕ್ಷನ್‌ಗಳಾದ 74,115(2),351(1),352,3(5) ಅಡಿ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಕೆಯಾಗಿತ್ತು.
ಸಾಕು ನಾಯಿ ಮಲ ವಿಸರ್ಜನೆ ಪ್ರಕರಣ: ಶ್ವಾನ ಮಾಲಕಿ ಸೇರಿ ಕುಟುಂಬ ಸದಸ್ಯರ ವಿರುದ್ಧದ ತನಿಖೆಗೆ ಹೈಕೋರ್ಟ್‌ ತಡೆ
Published on

ಸಾಕು ನಾಯಿ ಮಲ ವಿಸರ್ಜನೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಅಪಾರ್ಟ್‌ಮೆಂಟ್ ನಿವಾಸಿಗಳ ಎರಡು ಕುಟುಂಬದ ನಡುವೆ ನಡೆದಿರುವ ಕಲಹದ ಕುರಿತಾದ ಪ್ರಕರಣದಲ್ಲಿ ಶ್ವಾನ ಮಾಲಕಿ ಮತ್ತು ಅವರ ಕುಟುಂಬದ ಇನ್ನಿಬ್ಬರು ಸದಸ್ಯರ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ತಡೆ ನೀಡಿದೆ.

ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ 13.01.2026ರಂದು ಬಿಎನ್‌ಎಸ್‌ ಸೆಕ್ಷನ್‌ಗಳಾದ 74,115(2),351(1),352,3(5) ಅಡಿ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಶ್ವಾನವನ್ನು ಹೊರಗೆ ಕರೆದೊಯ್ದಿದ್ದ ಪುತ್ರಿ, ಆಕೆಯ ತಾಯಿ ಮತ್ತು ಸಹೋದರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಪೀಠವು ಲಘು ದಾಟಿಯಲ್ಲಿ “ನಾಯಿಯನ್ನು ಹೊರಗೆ ಕರೆದುಕೊಂಡು ಹೋದವರು ಯಾರು?” ಎಂದು ಕೇಳಿತು.

ಅರ್ಜಿದಾರರ ಪರ ಹಿರಿಯ ವಕೀಲ ಜಯ್ನಾ ಕೊಥಾರಿ ಅವರ ವಾದ ಆಲಿಸಿದ ಪೀಠವು “ಅರ್ಜಿದಾರರು ಮತ್ತು ದೂರುದಾರರು ಅಪಾರ್ಟ್‌ಮೆಂಟ್‌ವೊಂದರ ನಿವಾಸಿಗಳಾಗಿದ್ದು, ಅರ್ಜಿದಾರೆಯು ಸಾಕುನಾಯಿಯನ್ನು ಹೊರಗೆ ಕರೆದುಕೊಂಡು ಹೋಗಿರುವುದು ದೂರಿಗೆ ಮೂಲವಾಗಿದೆ. 12.1.2026ರಂದು ಅರ್ಜಿದಾರೆಯು ಅಪಾರ್ಟ್‌ಮೆಂಟ್‌ನಲ್ಲಿ ಸಾಕುನಾಯಿಯೊಂದಿಗೆ ವಾಕಿಂಗ್‌ ಮಾಡುತ್ತಿದ್ದರು. ಇದಕ್ಕೆ ದೂರುದಾರರು ಆಕ್ಷೇಪಿಸಿದ್ದು, ಜಗಳ ನಡೆದಿದೆ. ಅರ್ಜಿದಾರರು ದೂರುದಾರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಇದಕ್ಕೂ ಮೊದಲು ಅರ್ಜಿದಾರೆಯು ಹಾಲಿ ದೂರುದಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ದೂರುದಾರರು ಅರ್ಜಿದಾರರ ವಿರುದ್ಧ ದೂರು ದಾಖಲಿಸಿದ್ದಾರೆ. ಹೀಗಾಗಿ, ಅರ್ಜಿದಾರರ ವಿರುದ್ಧ ಮುಂದಿನ ವಿಚಾರಣೆವರೆಗೆ ತನಿಖೆಗೆ ತಡೆ ನೀಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

ಕೊನೆಗೆ ಪೀಠವು “ನಿಮ್ಮ ನಾಯಿಯನ್ನು ಈಗ ಎಲ್ಲಿಗೂ ಕರೆದೊಯ್ಯಬೇಡಿ” ಎಂದು ಲಘುದಾಟಿಯಲ್ಲಿ ತಿಳಿಸಿತು.

ಪ್ರಕರಣದ ಹಿನ್ನೆಲೆ: ದೂರುದಾರೆಯ ಅನ್ವಯ ರಿನೈಸಾನ್ಸ್‌ ಪ್ರಾಸ್ಪರೊ ಅಪಾರ್ಟ್‌ಮೆಂಟ್‌ ನಿವಾಸಿಯಾದ ಅರ್ಜಿದಾರೆಯು ಪ್ರತಿದಿನ ತಮ್ಮ ನಾಯಿಯನ್ನು ಕರೆದುಕೊಂಡು ಬಂದು ತನ್ನ ಮನೆಯ ಮುಂದೆ ಮಲ ವಿಸರ್ಜನೆ ಮಾಡಿಸುತ್ತಿದ್ದರು. ಹೀಗೆ ಮಾಡದಂತೆ ಕಳೆದ ಮೂರು ತಿಂಗಳಿಂದ ಅವರಿಗೆ ತಿಳಿಸಲಾಗಿದೆ. ಅದಾಗ್ಯೂ, ಪದೇಪದೇ ಅವರು ಅದನ್ನೇ ಮಾಡುತ್ತಿದ್ದು, ಘಟನೆ ನಡೆದ ದಿನ ನಾಯಿಯನ್ನು ಮನೆಯ ಹತ್ತಿರ ಕರೆತರದಂತೆ ಹೇಳಿದಾಗ ಜೋರಾಗಿ ಕೂಗುತ್ತಾ, ಇಂಗ್ಲಿಷ್‌ನಲ್ಲಿ ನಿಂದಿಸಲಾರಂಭಿಸಿದರು.

ಆಗ ನನ್ನ ಪತಿ ಬಂದು ಅವರನ್ನು ಹೀಗೇಕೆ ಮಾಡುತ್ತಿದ್ದೀರಿ ಎಂದು ಕೇಳಿದ್ದರು. ಆ ಸಂಭಾಷಣೆಯನ್ನು ಆಕೆ ರೆಕಾರ್ಡ್‌ ಮಾಡಿದ್ದು, ಅವರ ಸಹೋದರ ನನ್ನ ಪತಿಯ ಮೇಲೆ ಹಲ್ಲೆ ನಡೆಸಿದರು. ಬಿಡಿಸಲು ಹೋದ ನನ್ನನ್ನೂ ನೂಕಿ, ಮನೆಯ ಕೆಲಸಗಾರನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ತಳ್ಳಾಡಿದ್ದರು. ಇದಕ್ಕೆ ಅರ್ಜಿದಾರೆಯ ತಾಯಿಯ ಕುಮ್ಮಕ್ಕು ಇದೆ ಎಂದು ದೂರು ನೀಡಿದ್ದರು.

Kannada Bar & Bench
kannada.barandbench.com