ಜಲ್ಲಿಕಟ್ಟು ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಪೆಟಾ

ಕಳೆದ ಮೇ ತಿಂಗಳಿನಲ್ಲಿ ಪ್ರಕಟಿಸಿದ್ದ ತೀರ್ಪಿನಲ್ಲಿ ಕರ್ನಾಟಕದ ಕಂಬಳ, ತಮಿಳುನಾಡಿನ ಜಲ್ಲಿಕಟ್ಟು, ಮಹಾರಾಷ್ಟ್ರದ ಬಂಡಿ ಓಟ ಕ್ರೀಡೆಗಳಿಗೆ ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠವೊಂದು ಅನುಮತಿ ನೀಡಿತ್ತು.
Supreme Court and Jallikattu
Supreme Court and Jallikattu
Published on

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆಗೆ (ಪಿಸಿಎ) ತಮಿಳುನಾಡು ಸರ್ಕಾರ ಮಾಡಿದ್ದ ತಿದ್ದುಪಡಿಗಳ ಸಿಂಧುತ್ವ ಎತ್ತಿ ಹಿಡಿಯುವ ಮೂಲಕ ಜಲ್ಲಿಕಟ್ಟು ರೀತಿಯ ಕ್ರೀಡೆಗಳಿಗೆ ಅನುಮತಿಸಿ ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠ ಮೇ 18ರಂದು ಪ್ರಕಟಿಸಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಪ್ರಾಣಿ ದಯಾಸಂಸ್ಥೆಯಾದ ಪೆಟಾ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ.  

ಈ ಎಲ್ಲಾ ಕ್ರೀಡೆಗಳು ಹಿಂಸಾಚಾರ, ಬಲಪ್ರಯೋಗ, ತೊಂದರೆ, ಒತ್ತಡ ಹೇರುವ ಮೂಲಕ ಪ್ರಾಣಿಗಳ ಶೋಷಣೆಯನ್ನು ಒಳಗೊಂಡಿರುತ್ತವೆ ಎಂದು ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಸಲ್ಲಿಸಿರುವ ಮರುಪರಿಶೀಲನಾ ಅರ್ಜಿ ತಿಳಿಸಿದೆ.  

“ಈ ಕ್ರೀಡೆಗಳು ಎತ್ತು/ ಹೋರಿ/ ಕೋಣಗಳ ಸಹಜ ಪ್ರವೃತ್ತಿ, ನಡೆ ಹಾಗೂ ಅಂಗರಚನಾಶಾಸ್ತ್ರಕ್ಕೆ ವಿರುದ್ಧವಾಗಿದ್ದು ಯಾವುದೇ ಅಗತ್ಯ ಉದ್ದೇಶವನ್ನು ಸಾಕಾರಗೊಳಿಸುವುದಿಲ್ಲ. ಜೊತೆಗೆ ಅವ್ಯಕ್ತ ಯಾತನೆ, ನೋವು ಹಾಗೂ ಕ್ರೌರ್ಯಕ್ಕೆ ಎಡೆ ಮಾಡಿಕೊಡುತ್ತವೆ” ಎಂದು ಪೆಟಾ ವಿವರಿಸಿದೆ.  

Also Read
ಕಂಬಳ, ಜಲ್ಲಿಕಟ್ಟು, ಬಂಡಿ ಓಟ ಕ್ರೀಡೆಗಳಿಗೆ ಸುಪ್ರೀಂ ಅನುಮತಿ; ತಿದ್ದುಪಡಿ ಕಾಯಿದೆಗಳನ್ನು ಎತ್ತಿ ಹಿಡಿದ ನ್ಯಾಯಾಲಯ

ಪ್ರತಿವರ್ಷ ನಡೆಯುವ ಈ ಕ್ರೀಡೆಗಳು ಅದರಲ್ಲಿಯೂ ಜಲ್ಲಿಕಟ್ಟು ಮತ್ತು ಮಹಾರಾಷ್ಟ್ರದ ಎತ್ತಿನ ಗಾಡಿ ಓಟದ ಸ್ಪರ್ಧೆಗಳು, ಅವುಗಳಲ್ಲಿ ಭಾಗವಹಿಸುವವರ, ಪ್ರೇಕ್ಷಕರ ಹಾಗೂ ಅಪ್ರಾಪ್ತ ಮಕ್ಕಳ ಸಾವು ನೋವಿಗೂ ಕಾರಣವಾಗಿವೆ ಎಂದು ಅದು ದೂರಿದೆ.

ತೀರ್ಪು ಒಂದು ಬಗೆಯಲ್ಲಿ ಹಿಮ್ಮುಖವಾಗಿ ಇರಿಸಿದ ಹೆಜ್ಜೆಯಾಗಿದ್ದು ಕ್ರಿಯಾತ್ಮಕ ಮತ್ತು ಉಪಯುಕ್ತವಾದ ಸಾಂವಿಧಾನಿಕ ವ್ಯಾಖ್ಯಾನವನ್ನು ನಿಷ್ಕ್ರಿಯಗೊಳಿಸುತ್ತದೆ. ಅಲ್ಲದೇ ಅಸಿತ್ವದಲ್ಲಿರುವ ಪರಿಸರ ಕಾನೂನು ಮತ್ತು ಪ್ರಾಣಿ ಕಲ್ಯಾಣ ನ್ಯಾಯಶಾಸ್ತ್ರಕ್ಕೆ ಈ ತೀರ್ಪು ವಿರುದ್ಧವಾಗಿದೆ ಎಂದು ಪೆಟಾ ಪ್ರತಿಪಾದಿಸಿದೆ.

ಕಳೆದ ಮೇ ತಿಂಗಳಿನಲ್ಲಿ ಪ್ರಕಟಿಸಿದ್ದ ತೀರ್ಪಿನಲ್ಲಿ ಕರ್ನಾಟಕದ ಕಂಬಳ, ತಮಿಳುನಾಡಿನ ಜಲ್ಲಿಕಟ್ಟು, ಮಹಾರಾಷ್ಟ್ರದ ಬಂಡಿ ಓಟ ಕ್ರೀಡೆಗಳಿಗೆ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್, ಅಜಯ್ ರಾಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಹಾಗೂ ಸಿ ಟಿ ರವಿಕುಮಾರ್ ಅವರಿದ್ದ ಸಾಂವಿಧಾನಿಕ ಪೀಠ ಅನುಮತಿ ನೀಡಿತ್ತು.

Kannada Bar & Bench
kannada.barandbench.com