
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನವದೆಹಲಿ ಕ್ಷೇತ್ರದಿಂದ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಬುಧವಾರ ಬಿಜೆಪಿ ನಾಯಕ ಮತ್ತು ದೆಹಲಿ ಲೋಕೋಪಯೋಗಿ ಇಲಾಖೆ ಸಚಿವ ಪರ್ವೇಶ್ ವರ್ಮಾ ಅವರ ಪ್ರತಿಕ್ರಿಯೆ ಕೇಳಿದೆ.
ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿ ಸ್ವೀಕರಿಸಲಿಲ್ಲ, ಇದರಿಂದಾಗಿ ಚುನಾವಣಾ ಫಲಿತಾಂಶ ಕಳಂಕಿತವಾಗಿವೆ ಎಂದು ಆರೋಪಿಸಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ವಿಶ್ವನಾಥ್ ಅಗರ್‌ವಾಲ್ ಅವರು ಅರ್ಜಿ ಸಲ್ಲಿಸಿದ್ದಾರೆ.
ಆದ್ದರಿಂದ, ಚುನಾವಣೆ ಅನೂರ್ಜಿತವೆಂದು ಘೋಷಿಸಬೇಕು ಮತ್ತು ನವದೆಹಲಿ ಕ್ಷೇತ್ರಕ್ಕೆ ಮರು ಚುನಾವಣೆ ನಡೆಸಬೇಕು ಎಂದು ಅವರು ಕೋರಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕಾಗಿ ನಾಮಪತ್ರ ಸಲ್ಲಿಸಲು ಹೋದಾಗ, ಚುನಾವಣಾಧಿಕಾರಿಯ ಕೊಠಡಿಗೆ ಒಳಗಿನಿಂದ ಬೀಗ ಹಾಕಲಾಗಿತ್ತು. ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿದ್ದರು. ಹೊರಗೆ ಕಾಯುತ್ತಿದ್ದ ತಮ್ಮನ್ನು ನಿರ್ಲಕ್ಷಿಸಿ ಕೊಠಡಿಯೊಳಗೆ ಇದ್ದವರ ನಾಮಪತ್ರವನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದು ಇದ್ದಕ್ಕಿದ್ದಂತೆ ಘೋಷಿಸಲಾಯಿತು. ತಮಗೆ ಚುನಾವಣಾಧಿಕಾರಿಗಳು ಬೆದರಿಕೆ ಹಾಕಿ ಸ್ಥಳದಿಂದ ಹೊರನಡೆಯುವಂತೆ ತಾಕೀತು ಮಾಡಿದ್ದಾರೆ ಎಂದು ಅಗರ್‌ವಾಲ್ ದೂರಿದ್ದಾರೆ.
ಇಂದು ಪ್ರಕರಣವನ್ನು ಸಂಕ್ಷಿಪ್ತವಾಗಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ 26 ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದರು.
ಪ್ರತಿವಾದಿಗಳಲ್ಲಿ ವರ್ಮಾ, ಭಾರತ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಸೇರಿದಂತೆ ನವದೆಹಲಿ ಸ್ಥಾನದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ ಉಳಿದ ಅಭ್ಯರ್ಥಿಗಳೂ ಇದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಮೇ 27ರಂದು ನಡೆಯಲಿದೆ.
ಒಟ್ಟು 30,088 ಮತಗಳನ್ನು ಪಡೆದ ವರ್ಮಾ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು 4,089 ಮತಗಳ ಅಂತರದಿಂದ ಸೋಲಿಸಿದ್ದರು.