
ಚಿಕ್ಕಬಳ್ಳಾಪುರ ನಗರದ ಸದಾಶಿವನಗರ ಬಡಾವಣೆಯ ಸಾರ್ವಜನಿಕ ಉಪಯೋಗಿ (ಸಿಎ) ನಿವೇಶನವನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರವು (ಸಿಯುಡಿಎ) 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಿ ನೋಂದಣಿ ಮಾಡಿಕೊಟ್ಟಿರುವುದನ್ನು ರದ್ದುಪಡಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಬೆಂಗಳೂರಿನ ಕಾವಲ್ ಬೈರಸಂದ್ರದ ಎಂಎಂ ಬಡಾವಣೆ ನಿವಾಸಿ ಬಿ ಕೃಷ್ಣಮೂರ್ತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಿಯುಡಿಎ ಆಯುಕ್ತರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು (ಕೆಪಿಸಿಸಿ) ಪ್ರತಿವಾದಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಅಣಕನೂರು ಗ್ರಾಮದಲ್ಲಿ ಸದಾಶಿವನಗರ ಬಡಾವಣೆ ನಿರ್ಮಾಣಕ್ಕೆ ರಸ್ತೆ, ಉದ್ಯಾನ ಮತ್ತು ನಾಗರಿಕ ಸೌಲಭ್ಯ ನಿವೇಶನ ಜಾಗ ಮೀಸಲಿಡಬೇಕು ಎಂಬ ಷರತ್ತಿನೊಂದಿಗೆ ಪ್ರಾಧಿಕಾರವು 2022ರ ಅಕ್ಟೋಬರ್ 3ರಂದು ತಾತ್ಕಾಲಿಕ ಅನುಮೋದನೆ ನೀಡಿತ್ತು. 3,404.26 ಚದರ ಮೀಟರ್ ಅನ್ನು ನಾಗರಿಕ ಸೌಲಭ್ಯ ನಿವೇಶನಕ್ಕೆ ಹಾಗೂ 20,467.20 ಚದರ ಮೀಟರ್ ಜಾಗವನ್ನು ಉದ್ಯಾನ/ಮುಕ್ತ ಪ್ರದೇಶಕ್ಕೆ ಪ್ರಾಧಿಕಾರಕ್ಕೆ ಬಿಟ್ಟುಕೊಟ್ಟು ಭೂ ಮಾಲೀಕರು/ಭೂ ಅಭಿವೃದ್ಧಿದಾರರು ಪರಿತ್ಯೇಜನ ಮಾಡಿಕೊಟ್ಟಿದ್ದರು. ಪಾರ್ಕ್, ಸಿಎ ಸೈಟ್ ಮತ್ತು ರಸ್ತೆಗಳಿಗೆ ಮೀಸಲಿಟ್ಟ ಜಾಗವನ್ನು ತನ್ನ ಸುಪರ್ದಿಯಲ್ಲಿಟ್ಟುಕೊಂಡು ಪ್ರಾಧಿಕಾರವು ಸದಾಶಿವನಗರ ಬಡಾವಣೆಗೆ 2025ರ ಫೆಬ್ರವರಿ 19ರಂದು ಅಂತಿಮ ಅನುಮೋದನೆ ನೀಡಿ ಆದೇಶಿಸಿತ್ತು ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಆದರೆ, ಪ್ರಾಧಿಕಾರವು 3,404.26 ಚದರ ಮೀಟರ್ ವಿಸ್ತೀರ್ಣದ ಸಾರ್ವಜನಿಕ ಉಪಯೋಗಕ್ಕೆ ಮೀಸಲಿಟ್ಟ ನಿವೇಶನವನ್ನು 2025ರ ಜುಲೈ 1ರಂದು ಕಾಂಗ್ರೆಸ್ ಭವನ ಟ್ರಸ್ಟ್ ಹೆಸರಿಗೆ ಮೂವತ್ತು ವರ್ಷಗಳ ಅವಧಿಗೆ ಗುತ್ತಿಗೆ ನೀಡಿದೆ. ಆ ಕುರಿತು ಗುತ್ತಿಗೆ ಒಪ್ಪಂದ ಮಾಡಿಕೊಟ್ಟಿದೆ. ರಾಜಕೀಯ ಪಕ್ಷದ ಕಚೇರಿಗೆ ಭೂಮಿ ಮಂಜೂರು ಮಾಡಿರುವುದು ಕರ್ನಾಟಕ ನಗರ ಅಭಿವೃದ್ಧಿ ಪ್ರಾಧಿಕಾರಗಳ ಕಾಯಿದೆ-1987ರ ಮತ್ತು ಕರ್ನಾಟಕ ನಗರಾಭಿವೃದ್ಧಿ (ನಾಗರಿಕ ಸೌಲಭ್ಯ ನಿವೇಶನಗಳ ಮಂಜೂರಾತಿ) ಅಧಿನಿಯಮಗಳು-1991ರ ಮತ್ತು ಸಾರ್ವಜನಿಕ ನಂಬಿಕೆ ತತ್ವಕ್ಕೆ ವಿರುದ್ಧವಾಗಿದೆ. ಸಾರ್ವಜನಿಕ ಉದ್ಯಾನ, ಶಾಲೆ ಅಥವಾ ಸರ್ಕಾರಿ ಸೇವೆಗಳಿಗೆ ಮೀಸಲಿಟ್ಟಿರುವ ಜಾಗವನ್ನು ಖಾಸಗಿ ವ್ಯಕ್ತಿಗಳ ಬಳಕೆಗೆ ವರ್ಗಾಯಿಸಿರುವುದು ಅಕ್ರಮ ಮತ್ತು ರಾಜ್ಯದ ಮೇಲೆ ಸಾರ್ವಜನಿಕರು ಇಟ್ಟಿರುವ ನಂಬಿಕೆ-ವಿಶ್ವಾಸವನ್ನು ಬುಡಮೇಲು ಮಾಡುವುದಾಗಿದೆ. ಆದ್ದರಿಂದ, ಪ್ರಾಧಿಕಾರವು ನಾಗರಿಕ ಸೌಲಭ್ಯ ನಿವೇಶನವನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ವರ್ಗಾವಣೆ ಮಾಡಿರುವುದನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.