ಭವಿಷ್ಯ ನಿಧಿ ವಂಚನೆ ಪ್ರಕರಣ: ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧದ ವಾರೆಂಟ್‌ಗೆ ಹೈಕೋರ್ಟ್ ತಡೆ

ಸೆಂಟಾರಸ್‌ ಲೈಫ್-ಸ್ಟೈಲ್ ಬ್ರ್ಯಾಂಡ್ ಪ್ರೈವೇಟ್ ಲಿಮಿಟೆಡ್‌ ಕಂಪೆನಿಯು ಸಂಬಳದಲ್ಲಿ ಇಪಿಎಫ್ ಹಣ ಕಡಿತಗೊಳಿಸಿ, ಉದ್ಯೋಗಿಗಳ ಖಾತೆಗೆ ಹಾಕದೇ 23 ಲಕ್ಷ ರೂಪಾಯಿಯನ್ನು ವಂಚಿಸಿದೆ ಎಂಬುದು ಆರೋಪವಾಗಿದೆ.
Robin Uthappa and the Karnataka High Court
Robin Uthappa and the Karnataka High Court
Published on

ತಾನು ಸಹ ಪಾಲುದಾರನಾಗಿರುವ ಕಂಪೆನಿಯಲ್ಲಿನ ಉದ್ಯೋಗಿಗಳಿಗೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಹಣ ಪಾವತಿ ಮಾಡದೆ ವಂಚಿಸಿದ ಆರೋಪದ ಮೇಲೆ ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧ ವಾರೆಂಟ್‌ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.

ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಹೊರಡಿಸಿರುವ ವಸೂಲಿ (ರಿಕವರಿ) ನೋಟಿಸ್ ಮತ್ತು ಬಂಧನ ವಾರೆಂಟ್ ಪ್ರಶ್ನಿಸಿ ರಾಬಿನ್ ಉತ್ತಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್‌ ಅವರ ರಜಾಕಾಲೀನ ಏಕಸದಸ್ಯ ಪೀಠ ನಡೆಸಿತು.

ಕೇಂದ್ರ ಕಾರ್ಮಿಕ ಇಲಾಖೆ, ಸಹಾಯಕ ಭವಿಷ್ಯ ನಿಧಿ ಆಯುಕ್ತರು ಮತ್ತು ವಸೂಲಿ ಅಧಿಕಾರಿ, ಬೆಂಗಳೂರಿನ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಮತ್ತು ವಸೂಲಿ ಅಧಿಕಾರಿ ಹಾಗೂ ಪುಲಿಕೇಶಿ ನಗರ ಠಾಣಾಧಿಕಾರಿಗೆ ನ್ಯಾಯಾಲಯವು ನೋಟಿಸ್‌ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ರಾಬಿನ್‌ ಉತ್ತಪ್ಪ ಪರವಾಗಿ ವಾದಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ರಾಬಿನ್‌ ಉತ್ತಪ್ಪ ಅವರು ಸೆಂಟಾರಸ್‌ ಲೈಫ್‌ಸ್ಟೈಲ್‌ ಬ್ರ್ಯಾಂಡ್ಸ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಖಾಸಗಿ ಕಂಪನಿಯ ಸಹ ಪಾಲುದಾರರಾಗಿದ್ದಾರೆ.  ಆದರೆ, 2020ರಲ್ಲಿಯೇ ತಮ್ಮ ಪಾಲುದಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದ್ದರಿಂದ ಅವರನ್ನು ಪ್ರಕರಣದಲ್ಲಿ ಭಾಗಿಯನ್ನಾಗಿಸುವುದಕ್ಕೆ ಅವಕಾಶವಿಲ್ಲ. ಹೀಗಾಗಿ, ಅವರಿಗೆ ನೀಡಿರುವ ವಸೂಲಿ ನೋಟಿಸ್ ಮತ್ತು ಪುಲಕೇಶಿ ನಗರ ಪೊಲೀಸರು ಹೊರಡಿಸಿರುವ ಬಂಧನ ವಾರೆಂಟ್ ರದ್ದುಪಡಿಸಬೇಕು” ಎಂದು ಕೋರಿದರು.

ಪ್ರಕರಣದ ಹಿನ್ನೆಲೆ: ರಾಬಿನ್ ಉತ್ತಪ್ಪ ಸಹಪಾಲುದಾರರಾಗಿರುವ ಮೆಸರ್ಸ್‌ ಸೆಂಟಾರಸ್‌ ಲೈಫ್-ಸ್ಟೈಲ್ ಬ್ರ್ಯಾಂಡ್ ಪ್ರೈವೇಟ್ ಲಿಮಿಟೆಡ್‌ ಕಂಪೆನಿಯಲ್ಲಿ ಸುಮಾರು ರೂ.12 ಕೋಟಿ ಹೂಡಿಕೆ ಮಾಡುವ ಮೂಲಕ ಪಾಲುದಾರರಾಗಿದ್ದರು. ಈ ಮಧ್ಯೆ, ಕಂಪೆನಿಯು ನಷ್ಟಕ್ಕೆ ಸಿಲುಕಿದ್ದರಿಂದ ರಾಬಿನ್‌ ಉತ್ತಪ್ಪ ಅವರು ಕಂಪೆನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೇ, ಹೂಡಿಕೆ ಹಿಂಪಡೆಯುವ ಸಲುವಾಗಿ ಕಂಪೆನಿಯ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಈ ನಡುವೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಇಪಿಎಫ್ ಹಣ ಪಾವತಿಸಿಲ್ಲ. ಸಂಬಳದಲ್ಲಿ ಇಪಿಎಫ್ ಹಣ ಕಡಿತಗೊಳಿಸಿ, ಉದ್ಯೋಗಿಗಳ ಖಾತೆಗೆ ಹಾಕದೇ 23 ಲಕ್ಷ ರೂಪಾಯಿಯನ್ನು ವಂಚಿಸಲಾಗಿದೆ ಎಂದು ಆರೋಪಿಸಿದ್ದರು. ದೂರಿನ ಸಂಬಂಧ ಇಪಿಎಫ್ ಪ್ರಾದೇಶಿಕ ಆಯುಕ್ತ ಷಡಾಕ್ಷರಿ ಗೋಪಾಲ ರೆಡ್ಡಿ ಪತ್ರ ಬರೆದು ರಾಬಿನ್ ಉತ್ತಪ್ಪ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಕೋರಿದ್ದರು. ಇದನ್ನು ಪ್ರಶ್ನಿಸಿ ಉತ್ತಪ್ಪ ಹೈಕೋಟ್ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com