ಕ್ರಿಕೆಟ್‌ ಬೆಟ್ಟಿಂಗ್‌ ಪ್ರಕರಣ: ಫೋನ್‌ಪೇ ಮೇಲ್ಮನವಿ ಕುರಿತು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ ಹೈಕೋರ್ಟ್‌

ಬಳಕೆದಾರರ ಖಾತೆಯ ಸಂಪೂರ್ಣ ಮಾಹಿತಿ ಒದಗಿಸುವಂತೆ ಪೊಲೀಸರು ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿ ನೀಡಿರುವ ನೋಟಿಸ್‌ ಎತ್ತಿಹಿಡಿದಿರುವುದನ್ನು ಪ್ರಶ್ನಿಸಿ ಫೋನ್‌ಪೇ ಮೇಲ್ಮನವಿ ಸಲ್ಲಿಸಿದೆ.
ಕ್ರಿಕೆಟ್‌ ಬೆಟ್ಟಿಂಗ್‌ ಪ್ರಕರಣ: ಫೋನ್‌ಪೇ ಮೇಲ್ಮನವಿ ಕುರಿತು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ ಹೈಕೋರ್ಟ್‌
Published on

ಕ್ರಿಕೆಟ್‌ ಬೆಟ್ಟಿಂಗ್‌ ಸಂಬಂಧಿತ ಪ್ರಕರಣದಲ್ಲಿ ತನಿಖಾಧಿಕಾರಿಯು ಬಳಕೆದಾರರ ಖಾತೆಯ ಸಂಪೂರ್ಣ ಮಾಹಿತಿ ಒದಗಿಸುವಂತೆ ನೀಡಿದ್ದ ನೋಟಿಸ್‌ ಎತ್ತಿ ಹಿಡಿದಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಫೋನ್‌ಪೇ ಸಲ್ಲಿಸಿರುವ ಮೇಲ್ಮನವಿಯ ಸಂಬಂಧಿತ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಬುಧವಾರ ನೋಟಿಸ್‌ ಜಾರಿ ಮಾಡಿದೆ.

ಬಳಕೆದಾರರ ಖಾತೆಯ ಸಂಪೂರ್ಣ ಮಾಹಿತಿ ಒದಗಿಸುವಂತೆ ಪೊಲೀಸರು ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿ ನೀಡಿರುವ ನೋಟಿಸ್‌ ಪ್ರಶ್ನಿಸಿದ್ದ ಫೋನ್‌ಪೇ ಪ್ರೈವೇಟ್‌ ಲಿಮಿಟೆಡ್‌ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಫೋನ್‌ಪೇ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

Chief Justice Vibhu Bhakhru & Justice CM Poonacha
Chief Justice Vibhu Bhakhru & Justice CM Poonacha

ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ನಿತಿನ್‌ ರಮೇಶ್‌ ಅವರು “ಸಿಆರ್‌ಪಿಸಿ ಸೆಕ್ಷನ್‌ 91 ಮತ್ತು ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆ ಕಾಯಿದೆ ಸೆಕ್ಷನ್‌ 22 ಹಾಗೂ ಬ್ಯಾಂಕರ್ಸ್‌ ಬುಕ್‌ ಸಾಕ್ಷ್ಯ ಕಾಯಿದೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಸಿಆರ್‌ಪಿಸಿ ಸೆಕ್ಷನ್‌ 91 ರ ಅಡಿ ನೋಟಿಸ್‌ ಜಾರಿ ಮಾಡಿ ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆ ಕಾಯಿದೆ ಆಡಳಿತಕ್ಕೆ ಒಳಪಡುವ ಯುಪಿಐ ಸೇವೆ ನೀಡುವ ಸಂಸ್ಥೆಯಿಂದ ಇಡೀ ಮಾಹಿತಿಯನ್ನು ಕೋರಬಹುದೇ? ಕಾಯಿದೆ ಅಡಿ ನಮಗೆ ಪರವಾನಗಿ ಸಹ ನೀಡಲಾಗಿದೆ. ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆ ಕಾಯಿದೆ ಸೆಕ್ಷನ್‌ 22 ರ ಪ್ರಕಾರ ಯುಪಿಐ ಸೇವೆ ನೀಡುವವರನ್ನು ಬ್ಯಾಂಕರ್ಸ್‌ ಬುಕ್‌ ಸಾಕ್ಷ್ಯ ಕಾಯಿದೆ ಅಡಿ ಬ್ಯಾಂಕ್‌ಗಳಿಗೆ ಸಮನಾಗಿ ಪರಿಗಣಿಸಲಾಗುತ್ತದೆ. ಏಕಸದಸ್ಯ ಪೀಠವು ಯುಪಿಐ ಮಧ್ಯಸ್ಥಿಕೆ ಸಂಸ್ಥೆಗಳಿಗೆ ರಕ್ಷಣೆ ನೀಡಿರುವುದನ್ನು ಗುರುತಿಸಿಲ್ಲ” ಎಂದರು.

ಈ ವಾದ ಆಲಿಸಿದ ಪೀಠವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೆನ್‌ ಪೊಲೀಸ್‌ ಠಾಣೆ ಮತ್ತು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆಯನ್ನು 2026ರ ಫೆಬ್ರವರಿ 12ಕ್ಕೆ ಮುಂದೂಡಿತು.

“ಗೌಪ್ಯವಾಗಿಡಬೇಕಾದ ಮಾಹಿತಿಯನ್ನು ಬಹಿರಂಗಗೊಳಿಸಲಾಗದು ಎಂಬ ಫೋನ್‌ ಪೇ ವಾದವನ್ನು ಒಪ್ಪಲಾಗದು. ಕಾನೂನುಬದ್ಧವಾಗಿ ಸಾಕ್ಷಿ ಸಂಗ್ರಹಿಸಿ, ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ತನಿಖಾಧಿಕಾರಿಯ ಕೈಯನ್ನು ಗ್ರಾಹಕರ ಖಾಸಗಿತನ ರಕ್ಷಣೆ ಹೆಸರಿನ ನೆಪದಲ್ಲಿ ಕಟ್ಟಿಹಾಕಲಾಗದು. ಹೊಣೆಗಾರಿಕೆ ಮತ್ತು ಗೌಪ್ಯತೆ ಒಟ್ಟೊಟ್ಟಿಗೆ ಸಾಗಬೇಕು” ಎಂದು ಏಕಸದಸ್ಯ ಪೀಠ ಆದೇಶಿಸಿತ್ತು.

“ಕ್ರಿಮಿನಲ್‌ ಚಟುವಟಿಕೆಯ ವಾಸನೆ ಕಂಡುಬಂದಾಗ ಸಂಸ್ಥೆಗಳು ತನಿಖಾ ಸಮನ್ಸ್‌ನಿಂದ ಹಿಂದೆ ಸರಿಯಲಾಗದು ಎಂದು ಬಾಂಬೆ, ಮದ್ರಾಸ್‌ ಮತ್ತು ಕೇರಳ ಹೈಕೋರ್ಟ್‌ ಹೇಳಿವೆ. ಹೀಗಾಗಿ, ಸಾರ್ವಜನಿಕ ಹಿತಾಸಕ್ತಿ ಮತ್ತು ಕ್ರಿಮಿನಲ್‌ ತನಿಖೆಯ ವಿಷಯ ಬಂದಾಗ ದತ್ತಾಂಶ ರಕ್ಷಣೆಯ ಕರ್ತವ್ಯ ತಲೆಬಾಗಬೇಕಾಗುತ್ತದೆ” ಎಂದು ಅಭಿಪ್ರಾಯಪಟ್ಟಿತ್ತು.

“ಇಂದಿನ ಯುಗದಲ್ಲಿ ಸಾಂಪ್ರದಾಯಿಕ ಅಪರಾಧಗಳು ಹಿಂದೆ ಸರಿದಿದ್ದು, ಹೊಸ ಕಾಲಮಾನದ ಅಪರಾಧಗಳು ಹೆಚ್ಚಾಗುತ್ತಿವೆ. ಹೊಸ ಯುಗದ ಅಪರಾಧಗಳು ಸೈಬರ್‌ ಅಪರಾಧಗಳಾಗಿದ್ದು, ಗುಪ್ತಗಾಮಿನಿಯಾಗಿರುವ ಆಧುನಿಕ ಅಪರಾಧಗಳಾಗಿವೆ. ಇಂಥ ಅಪರಾಧಗಳಿಗೆ ತಕ್ಷಣ, ಗುರಿ ಕೇಂದ್ರಿತ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆ ನೀಡಬೇಕಿದೆ. ಕಾನೂನಿನ ಮಿತಿಯಲ್ಲಿ ಪೊಲೀಸರಿಗೆ ಡಿಜಿಟಲ್‌ ಹೆಜ್ಜೆಗುರುತು ಪತ್ತೆ ಹಚ್ಚುವ ಅಧಿಕಾರ ನೀಡಬೇಕಿದೆ. ಇಲ್ಲವಾದಲ್ಲಿ ಅದು ನಾಶವಾಗಲಿದೆ. ಫೋನ್‌ ಪೇ ವಾದದಂತೆ ಖಾಸಗಿತನದ ನಿರ್ವಹಣೆಯನ್ನು ಕಾಪಾಡಬೇಕಾಗುತ್ತದೆಯಾದರೂ ಕಾನೂನುಬದ್ಧ ತನಿಖೆಯ ಮುಂದೆ ಅದನ್ನು ಗುರಾಣಿಯಂತೆ ಬಳಸಲಾಗದು” ಎಂದಿತ್ತು.

“ಪೇಮೆಂಟ್‌ ಅಂಡ್‌ ಸೆಟಲ್‌ಮೆಂಟ್‌ ಸಿಸ್ಟಮ್‌ ಕಾಯಿದೆ 2007 ಮತ್ತು ಬ್ಯಾಂಕರ್ಸ್‌ ಬುಕ್ಸ್‌ ಸಾಕ್ಷ್ಯ ಕಾಯಿದೆಗಳು ಶಾಸನಬದ್ಧ ಸಂಸ್ಥೆಗಳ ಜೊತೆ ಮಾಹಿತಿ ಹಂಚಿಕೊಳ್ಳಲು ಅನುಮತಿಸುತ್ತವೆ. ಜೊತೆಗೆ ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ವೇದಿಕೆ ಮಾರ್ಗಸೂಚಿಗಳು ಮತ್ತು ಡಿಜಿಟಲ್‌ ಮಾಧ್ಯಮ ನೀತಿ ಸಂಹಿತೆ) ನಿಯಮಗಳು 2011ರ ಅನ್ವಯ ತನಿಖಾಧಿಕಾರಿ ಕಾನೂನಿನ ಅನ್ವಯ ಮಾಹಿತಿ ಕೋರಿದಾಗ 72 ತಾಸಿನ ಒಳಗೆ ಮಾಹಿತಿ ಒದಗಿಸಬೇಕು ಎಂದು ಹೇಳಿದೆ” ಎಂದು ನ್ಯಾಯಾಲಯ ವಿವರಿಸಿತ್ತು.

“ತನಿಖಾಧಿಕಾರಿ ಕೇಳುವ ಮಾಹಿತಿಯು ನಿರ್ದಿಷ್ಟವಾಗಿರಬೇಕು. ಈ ನೆಲೆಯಲ್ಲಿ ಪೊಲೀಸರು ಫೋನ್‌ ಪೇಗೆ ಜಾರಿ ಮಾಡಿರುವ ನೋಟಿಸ್‌ ಕಾನೂನುಬಾಹಿರವಲ್ಲ. ಇಲ್ಲಿ ಹಲವು ಖಾತೆಗಳ ಮೂಲಕ ಹಣ ವರ್ಗಾವಣೆಯಾಗಿದ್ದು, ಅಕ್ರಮ ಹಣಕಾಸು ವ್ಯವಹಾರ ಪತ್ತೆ ಮಾಡುವ ಗುರಿಯನ್ನು ತನಿಖೆ ಹೊಂದಿದೆ” ಎಂದು ಏಕಸದಸ್ಯ ಪೀಠ ಹೇಳಿತ್ತು.

ಫೋನ್‌ ಪೇ ಪರ ವಕೀಲ ನಿತಿನ್‌ ರಮೇಶ್‌ “ಪೇಮೆಂಟ್‌ ಅಂಡ್‌ ಸೆಟಲ್‌ಮೆಂಟ್‌ ಸಿಸ್ಟಮ್‌ ಕಾಯಿದೆ 2007 ಮತ್ತು ಬ್ಯಾಂಕರ್ಸ್‌ ಬುಕ್ಸ್‌ ಸಾಕ್ಷ್ಯ ಕಾಯಿದೆ ಅನ್ವಯ ಗ್ರಾಹಕರ ದತ್ತಾಂಶದ ಗೌಪ್ಯತೆ ಕಾಪಾಡುವುದು ತನ್ನ ಹೊಣೆಗಾರಿಕೆಯಾಗಿದ್ದು, ನ್ಯಾಯಾಲಯ ಆದೇಶಿಸಿದರೆ ಮಾತ್ರ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು” ಎಂದಿದ್ದರು.

Also Read
ಹೊಣೆಗಾರಿಕೆ ಮತ್ತು ಗೌಪ್ಯತೆ ಒಟ್ಟೊಟ್ಟಿಗೆ ಸಾಗಬೇಕು: ಫೋನ್‌ ಪೇ ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌

ಪ್ರಕರಣದ ಹಿನ್ನೆಲೆ: ವ್ಯಕ್ತಿಯೊಬ್ಬರು ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಪಂದ್ಯಕ್ಕೆ ಬೆಟ್ಟಿಂಗ್‌ ಮಾಡುವ ಸಂಬಂಧ ಕ್ರೀಡಾ ವೆಬ್‌ಸೈಟ್‌ ಒಂದಕ್ಕೆ ಸುಮಾರು ₹6,000 ಹಣ ಠೇವಣಿ ಇಡಲು ಫೋನ್‌ ಪೇ ಬಳಕೆ ಮಾಡಿದ್ದರು. ಆದರೆ, ಆನಂತರ ಅವರು ತಮ್ಮ ವರ್ಚುವಲ್‌ ವಾಲೆಟ್‌ ಮೂಲಕ ಹಣ ಹಿಂಪಡೆಯಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ವೆಬ್‌ಸೈಟ್‌ ಅನ್ನು ನಿರ್ಬಂಧಿಸಲಾಗಿತ್ತು. ಇದರಿಂದ ಆ ವ್ಯಕ್ತಿಯು ತನಗೆ ವಂಚನೆಯಾಗಿದೆ ಎಂದು ಆರೋಪಿಸಿ, ಹಣ ವಾಪಸ್‌ ಕೊಡಿಸುವಂತೆ ದೂರು ಸಲ್ಲಿಸಿದ್ದರು.

ಇದರ ಆಧಾರದಲ್ಲಿ ಫೋನ್‌ ಪೇಗೆ ಅದರ ವೇದಿಕೆ ಬಳಕೆ ಮಾಡಿ ಜೂಜಿನ ವೆಬ್‌ಸೈಟ್‌ಗೆ ಹಣ ಠೇವಣಿ ಇಟ್ಟಿರುವ ಸಂಬಂಧ ಮಾಹಿತಿ ನೀಡುವಂತೆ ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿ 2022ರ ಡಿಸೆಂಬರ್‌ನಲ್ಲಿ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದರು.

ಬಳಕೆದಾರ ಯಾರಿಗೆ ಹಣ ಪಾವತಿಸಿದ್ದಾರೆ? ಅಂಥ ಗ್ರಾಹಕರನ್ನು ಸೇರ್ಪಡೆ ಮಾಡುವುದಕ್ಕೂ ಮುನ್ನ ಫೋನ್‌ ಪೇ ಅವರಿಗೆ ವಿವರಣೆ ನೀಡಿತ್ತೇ? ವಂಚನೆ ಆಗುತ್ತಿರುವ ಬಗ್ಗೆ ಫೋನ್‌ ಪೇಗೆ ತಿಳಿದಿತ್ತೇ? ತನ್ನ ವೇದಿಕೆಯಲ್ಲಿ ಆನ್‌ಲೈನ್‌ ಜೂಜು ನಡೆಯುತ್ತಿರುವುದು ಪತ್ತೆ ಮಾಡಿತ್ತೇ ಎನ್ನುವ ಪ್ರಶ್ನೆಗಳೂ ಸೇರಿದಂತೆ ಆನ್‌ಲೈನ್‌ ಜೂಜಿನಲ್ಲಿ ತೊಡಗಿರುವ ಗ್ರಾಹಕರ ಪಟ್ಟಿ ಒದಗಿಸುವಂತೆ ಪೊಲೀಸ್‌ ನೋಟಿಸ್‌ನಲ್ಲಿ ಕೋರಲಾಗಿತ್ತು.

Kannada Bar & Bench
kannada.barandbench.com