ರಾಜ್ಯದಲ್ಲಿ ಬೀಡಾಡಿ ದನಗಳ ಹಾವಳಿ ಮಿತಿ ಮೀರಿದೆ ಎಂದು ಗುಜರಾತ್ ಹೈಕೋರ್ಟ್ ಮಂಗಳವಾರ ಹೇಳಿದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಸಮಸ್ಯೆ ನಿಭಾಯಿಸಲು ಗಂಭೀರ ಕ್ರಮ ಕೈಗೊಳ್ಳುವಂತೆ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ಅವರಿದ್ದ ಪೀಠ ಸರ್ಕಾರಕ್ಕೆ ಸೂಚಿಸಿದೆ.
“ಅಡ್ವೊಕೇಟ್ ಜನರಲ್ ಅವರೇ, ಜಾನುವಾರುಗಳ ಹಾವಳಿ ಮಿತಿ ಮೀರಿದೆ. ನೀವು (ಸರ್ಕಾರ) ಇದರ ಬಗ್ಗೆ ಏನಾದರೂ ಮಾಡಬೇಕಿದೆ” ಎಂದು ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಹೇಳಿದರು.
ಈ ಹಿನ್ನೆಲೆಯಲ್ಲಿ ಕಾಲಾವಕಾಶ ನೀಡಬೇಕೆಂಬ ಅಡ್ವೊಕೇಟ್ ಜನರಲ್ ಕಮಲ್ ತ್ರಿವೇದಿ ಅವರ ಮನವಿಗೆ ಸ್ಪಂದಿಸಿದ ನ್ಯಾಯಾಲಯ ಸಮಸ್ಯೆ ನಿಭಾಯಿಸಲು ಸಮಗ್ರ ಕ್ರಿಯಾ ಯೋಜನೆ ರೂಪಿಸುವುದಕ್ಕಾಗಿ ರಾಜ್ಯ ಸರ್ಕಾರಕ್ಕೆ ಜನವರಿ 9, 2023ರವರೆಗೆ ಸಮಯಾವಕಾಶ ನೀಡಿತು.
ಅಹಮದಾಬಾದ್ ಅಲ್ಲದೆ ಗುಜರಾತ್‌ನ ಪ್ರಮುಖ ನಗರಗಳಲ್ಲಿ ಬೀಡಾಡಿ ದನಗಳ ಹಾವಳಿ ಇರುವುದನ್ನು ಎತ್ತಿ ತೋರಿಸುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, ರಾಜ್‌ಕೋಟ್‌ನಲ್ಲಿ ಭದ್ರತಾ ಸಿಬ್ಬಂದಿಯೊಬ್ಬರ ಮೇಲೆ ಬೀಡಾಡಿ ದನಗಳು ದಾಳಿ ಮಾಡಿದ ದುರಂತ ಘಟನೆಯನ್ನು ಪ್ರಸ್ತಾಪಿಸಿತು.
ಬೀಡಾಡಿ ದನಗಳ ಹಾವಳಿಯಿಂದ 35 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದ ಘಟನೆ ಹಿನ್ನೆಲೆಯಲ್ಲಿ ಪೀಠ ಈ ಹಿಂದೆ ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಆರಂಭಿಸಿತ್ತು. ಸಮಸ್ಯೆಯನ್ನು ನಿಭಾಯಿಸಲು ದೃಢ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನ್ಯಾಯಾಲಯ ಪದೇ ಪದೇ ಸೂಚಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೈಗೊಂಡ ಕ್ರಮಗಳನ್ನು ವಿವರಿಸುವುದಕ್ಕಾಗಿ ಅಧಿಕಾರಿಗಳು ಖುದ್ದು ಹಾಜರಾಗಬೇಕೆಂದು ಕಳೆದ ಅಕ್ಟೋಬರ್‌ನಲ್ಲಿ ಪೀಠ ಆದೇಶಿಸಿತ್ತು.