1975ರ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಿಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಜೂನ್ 25ನ್ನು ಸಂವಿಧಾನ ಹತ್ಯೆಯ ದಿನ ಎಂದು ಘೋಷಿಸುವ ಕೇಂದ್ರ ಸರ್ಕಾರದ ಇತ್ತೀಚಿನ ಅಧಿಸೂಚನೆ ಪ್ರಶ್ನಿಸಿ ಉತ್ತರ ಪ್ರದೇಶದ ಝಾನ್ಸಿ ಮೂಲದ ವಕೀಲರೊಬ್ಬರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ.
ವಕೀಲ ಸಂತೋಷ್ ಕುಮಾರ್ ದೋಹ್ರೆ ಅವರು ವಕೀಲ ಬ್ರಜ್ ಮೋಹನ್ ಸಿಂಗ್ ಮೂಲಕ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅರುಣ್ ಬನ್ಸಾಲಿ ಮತ್ತು ನ್ಯಾಯಮೂರ್ತಿ ವಿಕಾಸ್ ಬುಧ್ವರ್ ಅವರಿದ್ದ ವಿಭಾಗೀಯ ಪೀಠದೆದುರು ಸೋಮವಾರ ಪಟ್ಟಿ ಮಾಡಲಾಗಿತ್ತು.
ಪಿಐಎಲ್‌ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ನ್ಯಾಯಾಲಯ ನೋಟಿಸ್ ನೀಡಿದೆ ಎಂದು ಸಿಂಗ್ ಬಾರ್ & ಬೆಂಚ್‌ಗೆ ತಿಳಿಸಿದರು. ಪ್ರಕರಣದ ಮುಂದಿನ ವಿಚಾರಣೆ ಜುಲೈ 31ರಂದು ನಡೆಯಲಿದೆ.
ಅರ್ಜಿಯ ಪ್ರಮುಖಾಂಶಗಳು
ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿಯ ಮೂಲಕ ಹೊರಡಿಸಲಾದ ಅಧಿಸೂಚನೆ ಸಂವಿಧಾನಕ್ಕೆ ಅವಮಾನ ಮಾಡುವಂತಹ ಮತ್ತು ಆಕ್ಷೇಪಾರ್ಹ ಭಾಷೆಯನ್ನು ಒಳಗೊಂಡಿದೆ.
ಸಂವಿಧಾನದ ಹತ್ಯೆ ಎಂಬ ಪದ ಬಳಸಿರುವುದು ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ಕಾಯಿದೆಯನ್ನು ಉಲ್ಲಂಘಿಸಿದೆ.
ಸಂವಿಧಾನದ ನಿಯಮಗಳನುಸಾರವಾಗಿಯೇ ತುರ್ತು ಪರಿಸ್ಥಿತಿ ಘೋಷಿಸಿರುವುದರಿಂದ ಕೇಂದ್ರ ಅಂತಹ ಘೋಷಣೆ ಹೊರಡಿಸುವಂತಿಲ್ಲ.
ಸಂವಿಧಾನವು ಜೀವಂತ ದಾಖಲೆಯಾಗಿದ್ದು, ಅದು ಎಂದಿಗೂ ಸಾಯಲು ಅಥವಾ ನಾಶವಾಗಲು ಅವಕಾಶ ನೀಡಲಾಗದು.
ಇಂತಹ ಅಧಿಸೂಚನೆ ಹೊರಡಿಸಲು ಜಂಟಿ ಕಾರ್ಯದರ್ಶಿಗೆ ಅಧಿಕಾರ ಇದೆಯೇ?
ಯಾವ ಕಾಯಿದೆ ಅಥವಾ ನಿಯಮಾವಳಿಯಡಿ ಈ ಅಧಿಸೂಚನೆ ಹೊರಡಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.