ವಿಮಾನ ಪ್ರಯಾಣದ ವೇಳೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಹತ್ಯೆ ಮಾಡುವ ಯತ್ನಗಳು ನಡೆದಿವೆ ಎಂದು ಆರೋಪಿಸಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಲಾಗಿದೆ.
ಮಮತಾ ಅವರನ್ನು ಹತ್ಯೆ ಮಾಡಲು ಮತ್ತು ಸರ್ಕಾರವನ್ನು ಅಸ್ಥಿರಗೊಳಿಸಲು ಹಲವು ವರ್ಷಗಳಿಂದ ಸಂಚು ನಡೆಯುತ್ತಿದೆ ಎಂದು ಬಿಪ್ಲಾಬ್ ಕುಮಾರ್ ಚೌಧರಿ ಎಂಬುವವರು ಸಲ್ಲಿಸಿರುವ ಅರ್ಜಿಯಲ್ಲಿ ಆರೋಪಿಸಲಾಗಿದೆ.
ಈ ತಿಂಗಳ ಆರಂಭದಲ್ಲಿ ಅಂದರೆ ಮಾರ್ಚ್ 4, 2022ರಂದು ಲಕ್ನೋದಿಂದ ಕೋಲ್ಕತ್ತಾಗೆ ಮಮತಾ ಅವರು ಪ್ರಯಾಣಿಸುತ್ತಿದ್ದಾಗ ವಿಮಾನವೊಂದು ಮುಖಾಮುಖಿಯಾಯಿತು. ಸಿಎಂ ಇದ್ದ ವಿಮಾನವನ್ನು ಪೈಲಟ್ ಕೆಳಮುಖವಾಗಿ ಚಲಾಯಿಸಿದ್ದರಿಂದ ದುರಂತ ತಪ್ಪಿತು. ಘಟನೆಯಲ್ಲಿ ಸಿಎಂ ಗಾಯಗೊಂಡರು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಇದಕ್ಕೂ ಎರಡು ದಿನಗಳ ಮೊದಲು ಅಂದರೆ ಮಾರ್ಚ್ 2ರಂದು ರನ್ ವೇಯಲ್ಲಿ ಸಿಎಂ ಅವರ ಭದ್ರತಾ ವಾಹನಗಳು ಸಾಗುವ ವೇಳೆ ಹೆಲಿಕಾಪ್ಟರ್ ಒಂದು ಅವರ ಭದ್ರತಾ ವಾಹನಗಳಿಗೆ ಎದುರಾಗಿ ಬಂದು ಮಮತಾ ಅವರು ಇದ್ದ ವಾಹನಕ್ಕೆ ಇನ್ನೇನು ಢಿಕ್ಕಿ ಹೊಡೆಯುವುದರಲ್ಲಿತ್ತು. ವಾಯುಸಂಚಾರ ನಿಯಂತ್ರಣ ಪ್ರಾಧಿಕಾರದ ಸಮಯೋಚಿತ ಮಧ್ಯಪ್ರವೇಶದಿಂದಾಗಿ ಅವರು ಬದುಕುಳಿದರು ಎಂದಿರುವ ಅರ್ಜಿ 2016ರಲ್ಲಿ ಕೂಡ ಪಟ್ನಾದಿಂದ ಕೊಲ್ಕತ್ತಾಗೆ ಇಂಡಿಗೋ ವಿಮಾನದಲ್ಲಿ ಮಮತಾ ಅವರು ಪ್ರಯಣಿಸುವ ವೇಳೆ ಸಹ ಅವರ ಪ್ರಾಣಕ್ಕೆ ಎರವಾಗುವಂತಹ ಘಟನೆ ನಡೆದಿತ್ತು ಎಂದಿದೆ. ಹಾಗಾಗಿ ಈ ಎಲ್ಲ ಘಟನೆಗಳ ತನಿಖೆಯನ್ನು ಸ್ವತಂತ್ರವೂ, ಪರಿಣತವೂ ಆದ ತನಿಖಾ ಸಂಸ್ಥೆಯಿಂದ ನಡೆಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಸೋಮವಾರ ಪ್ರಕರಣದ ವಿಚಾರಣೆ ನಡೆದಾಗ ಪ್ರತಿಕ್ರಿಯೆಗಾಗಿ ತಮಗೆ ಕಾಲಾವಕಾಶದ ನೀಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋರಿದವು. ಇದಕ್ಕೆ ಸಮ್ಮತಿ ಸೂಚಿಸಿದ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ರಾಜರ್ಷಿ ಭಾರದ್ವಾಜ್ ಅವರಿದ್ದ ಪೀಠ ಏಪ್ರಿಲ್ 25ಕ್ಕೆ ವಿಚಾರಣೆ ಮುಂದೂಡಿತು.