ಮರಾಠರಿಗೆ ಕುಣಬಿ ಜಾತಿ ಪ್ರಮಾಣಪತ್ರ ನೀಡಿರುವುದನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಪಿಐಎಲ್

ಸಾಮಾಜಿಕ ಸೌಲಭ್ಯ ಪಡೆಯಲು ಮಹಾರಾಷ್ಟ್ರದ ಮರಾಠರಿಗೆ ಕುಣಬಿ ಪ್ರಮಾಣಪತ್ರಗಳನ್ನು ಒದಗಿಸಲು 2004ರಿಂದ ಹೊರಡಿಸಲಾದ ವಿವಿಧ ಸರ್ಕಾರಿ ಆದೇಶಗಳನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ಬಾಂಬೆ ಹೈಕೋರ್ಟ್, ಮರಾಠಾ ಮೀಸಲಾತಿ
ಬಾಂಬೆ ಹೈಕೋರ್ಟ್, ಮರಾಠಾ ಮೀಸಲಾತಿ
Published on

ಮಹಾರಾಷ್ಟ್ರದ ಮರಾಠ ಸಮುದಾಯಕ್ಕೆ ಸೇರಿದವರಿಗೆ ಕುಣಬಿ ಜಾತಿ ಪ್ರಮಾಣಪತ್ರ ನೀಡಲು ಜನವರಿ 26ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ [ಮಂಗೇಶ್‌ ಸಸಾನೆ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಮಹಾರಾಷ್ಟ್ರ ಪರಿಶಿಷ್ಟ ಜಾತಿಗಳು, ವಿಮುಕ್ತ ಜಾತಿಗಳು (ಡಿನೋಟಿಫೈಡ್ ಟ್ರೈಬ್ಸ್‌) , ಅಲೆಮಾರಿ ಬುಡಕಟ್ಟುಗಳು, ಇತರ ಹಿಂದುಳಿದ ವರ್ಗಗಳು ಹಾಗೂ ವಿಶೇಷ ಹಿಂದುಳಿದ ವರ್ಗ (ಜಾತಿ ಪ್ರಮಾಣಪತ್ರ ವಿತರಣೆ ಮತ್ತು ಪರಿಶೀಲನೆ ನಿಯಂತ್ರಣ) ನಿಯಮಾವಳಿ- 2012ಅನ್ನು ಜನವರಿ 26ರ ಗೆಜೆಟ್ ಅಧಿಸೂಚನೆ ಮೂಲಕ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿತ್ತು.

ಈ ಅಧಿಸೂಚನೆಯ ಮೂಲಕ ಮಹಾರಾಷ್ಟ್ರ ಸರ್ಕಾರವು ಮರಾಠರನ್ನು ಒಬಿಸಿಗೆ ಸೇರಿಸುವ ಮೂಲಕ ಒಬಿಸಿಗಳಿಗೆ ಮೀಸಲಿದ್ದ ಸೌಲಭ್ಯವನ್ನು ಕಸಿದುಕೊಳ್ಳುತ್ತಿದೆ ಎಂದು ಅರ್ಜಿದಾರರಾದ ಇತರೆ ಹಿಂದುಳಿದ ವರ್ಗ (ಒಬಿಸಿ) ಕಲ್ಯಾಣ ಸಮುದಾಯ ಸಂಘಟನೆಯ ಅಧ್ಯಕ್ಷ ಮಂಗೇಶ್ ಸಸಾನೆ ಹೇಳಿದ್ದಾರೆ.

ಮರಾಠರಿಗೆ ಕುಣಬಿ ಪ್ರಮಾಣಪತ್ರಗಳನ್ನು ಪಡೆಯಲು ಅವಕಾಶ ನೀಡುವ 2004ರಿಂದ ಹೊರಡಿಸಲಾದ ಹಲವಾರು ಸರ್ಕಾರಿ ಆದೇಶಗಳನ್ನು ಪಿಐಎಲ್ ಪ್ರಶ್ನಿಸಿದೆ.

ಅರ್ಜಿಯ ಪ್ರಮುಖಾಂಶಗಳು

  • ಒಬಿಸಿ ವರ್ಗದಲ್ಲಿ ಸೇರಿಸಲಾದ ಜಾತಿ ಪಟ್ಟಿ ಯಾವುದೇ ಸಮರ್ಥನೆ ಇಲ್ಲದೆ ಪದೇ ಪದೇ ಸಾಕಷ್ಟು ಬದಲಾವಣೆಗಳಿಗೆ ತುತ್ತಾಗಿದೆ. ಹೀಗಾಗಿ ಈ ಪಟ್ಟಿ ಹೆಚ್ಚು ಅನಾನುಕೂಲಕರವಾಗಿದೆ.

  • ಕುಣಬಿ ವರ್ಗದಲ್ಲಿ ಸೇರಿಸಲಾದ ಮರಾಠಾ ಸಮುದಾಯಗಳು ದೂರದ ಕುಗ್ರಾಮದ ಪ್ರದೇಶಗಳಲ್ಲಿಲ್ಲ. ಇಲ್ಲವೇ ಮುಖ್ಯವಾಹಿನಿಯಿಂದ ಹೊರಗಿಲ್ಲ.

  • ಕುಣಬಿ ಜನಾಂಗಕ್ಕೇ ವಿಶಿಷ್ಟವಾದ ಪರಿಸ್ಥಿತಿ ಮೀಸಲಾತಿ ಪಡೆಯಲು ಮುಂದಾದವರಿಗೆ ಇಲ್ಲ.

  • ಮರಾಠರಿಗೆ ಕುಣಬಿ (ಒಬಿಸಿ) ಪ್ರಮಾಣಪತ್ರಗಳನ್ನು ನೀಡುವ ಬಗ್ಗೆ ಬಾಂಬೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಸಂದೀಪ್ ಶಿಂಧೆ ನೇತೃತ್ವದ ಸಮಿತಿ ಸಲ್ಲಿಸಿದ ವರದಿ ಪ್ರಶ್ನಾರ್ಹ.

  • ಇದಲ್ಲದೆ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ (ಎಸ್ಇಬಿಸಿ) ಕಾಯಿದೆ- 2018 ರ ಮೂಲಕ ಶಿಕ್ಷಣ ಮತ್ತು ಸಾರ್ವಜನಿಕ ಉದ್ಯೋಗದಲ್ಲಿ ಮರಾಠರಿಗೆ ಮೀಸಲಾತಿ ನೀಡಿದ್ದನ್ನು ಸುಪ್ರೀಂ ಕೋರ್ಟ್ 2021ರಲ್ಲಿ ರದ್ದುಗೊಳಿಸಿದೆ.

Kannada Bar & Bench
kannada.barandbench.com