ನ್ಯಾಯಾಂಗ ವಿರೋಧಿ ಹೇಳಿಕೆ: ಉಪರಾಷ್ಟ್ರಪತಿ, ಕಾನೂನು ಸಚಿವರ ವಿರುದ್ಧ ಬಾಂಬೆ ಹೈಕೋರ್ಟ್‌ಗೆ ಪಿಐಎಲ್

"ಕೊಲಿಜಿಯಂ ಮತ್ತು ಸಂವಿಧಾನ ಮೂಲರಚನಾ ಸಿದ್ಧಾಂತದ ಬಗ್ಗೆ ಈ ಇಬ್ಬರೂ ಸಾರ್ವಜನಿಕವಾಗಿ ಬಹಿರಂಗ ದಾಳಿ ನಡೆಸಿದ್ದು ಇದು ಸಾಂವಿಧಾನಿಕ ಹುದ್ದೆ ಅಲಂಕರಿಸಿರುವವರ ಅನುಚಿತ ವರ್ತನೆಯಾಗಿದೆ" ಎಂದು ಮನವಿ ಆರೋಪಿಸಿದೆ.
Vice President Jagdeep Dhankhar and Law Minister Kiren Rijiju with Bombay High Court
Vice President Jagdeep Dhankhar and Law Minister Kiren Rijiju with Bombay High Court

ಕೊಲಿಜಿಯಂ, ನ್ಯಾಯಾಂಗ ಹಾಗೂ ಸುಪ್ರೀಂ ಕೋರ್ಟ್‌ ವಿರುದ್ಧ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಹಾಗೂ ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ದಾಖಲಾಗಿದೆ.

ಈ ಇಬ್ಬರು ಸಂವಿಧಾನದ ಅಡಿಯಲ್ಲಿ ಲಭ್ಯವಿರುವ ಯಾವುದೇ ಆಸರೆಯನ್ನು ಬಳಸದೆ ʼಅತಿ ಅಪಮಾನಕರ ಮತ್ತು ಅವಹೇಳನಕಾರಿ ಭಾಷೆಯಲ್ಲಿʼ ನ್ಯಾಯಾಂಗದ ಮೇಲೆ ತೀವ್ರ ಆಕ್ರಮಣ ನಡೆಸಿರುವುದಾಗಿ ಬಾಂಬೆ ವಕೀಲರ ಸಂಘದ ಅಧ್ಯಕ್ಷ ಅಹ್ಮದ್ ಅಬ್ದಿ ಅವರ ಹೆಸರಿನಲ್ಲಿ ವಕೀಲ ಏಕನಾಥ್ ಧೋಕಲೆ ಅವರ ಮೂಲಕ ಅರ್ಜಿ ಸಲ್ಲಿಕೆಯಾಗಿದೆ.

ಪಿಐಎಲ್‌ನ ಪ್ರಮುಖ ಅಂಶಗಳು

  • ಕಾರ್ಯಾಂಗದ ಇಬ್ಬರು ಅಧಿಕಾರಸ್ಥರ ಇಂತಹ ನಡೆ ಸಾರ್ವಜನಿಕವಾಗಿ ಸುಪ್ರೀಂ ಕೋರ್ಟ್‌ ಪ್ರತಿಷ್ಠೆಯನ್ನು ಕುಂದಿಸಿದೆ.  

  • ಉಪರಾಷ್ಟ್ರಪತಿ ಮತ್ತು ಕಾನೂನು ಸಚಿವರು ಸಾರ್ವಜನಿಕ ವೇದಿಕೆಯಲ್ಲಿ ಬಹಿರಂಗವಾಗಿ ಕೊಲಿಜಿಯಂ ವ್ಯವಸ್ಥೆ ಹಾಗೂ ಸಂವಿಧಾನದ ಮೂಲರಚನಾ ಸಿದ್ಧಾಂತದ ಮೇಲೆ ದಾಳಿ ಮಾಡುತ್ತಿದ್ದಾರೆ.

  • ಕೊಲಿಜಿಯಂ ಮತ್ತು ಸಂವಿಧಾನ ಮೂಲರಚನಾ ಸಿದ್ಧಾಂತದ ಬಗ್ಗೆ ಈ ಇಬ್ಬರೂ ಸಾರ್ವಜನಿಕವಾಗಿ ಬಹಿರಂಗ ದಾಳಿ ನಡೆಸಿರುವುದು ಸಾಂವಿಧಾನಿಕ ಹುದ್ದೆ ಅಲಂಕರಿಸಿರುವವರ ಅನುಚಿತ ವರ್ತನೆಯಾಗಿದೆ

  • (ಧನಕರ್‌ ಮತ್ತು ರಿಜಿಜು ಅವರು ನ್ಯಾಯಾಂಗದ ವಿರುದ್ಧವಾಗಿ ನೀಡಿದ ವಿವಿಧ ಹೇಳಿಕೆಗಳನ್ನು ಉಲ್ಲೇಖಿಸುತ್ತಾ) ಶಿಕ್ಷೆಯ ಭಯವಿಲ್ಲದೆ ಇವರಿಬ್ಬರೂ ಸಂವಿಧಾನದ ಮೇಲೆ ಆಕ್ರಮಣ ಮಾಡಿದ್ದಾರೆ.

  • ಸಂವಿಧಾನದ ಮೇಲೆ ನಂಬಿಕೆ ಕಳೆದುಕೊಂಡಿರುವುದರಿಂದ ಈ ಇಬ್ಬರೂ ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಮುಂದುವರೆಯುವ ಅರ್ಹತೆಯನ್ನು ಸ್ವಯಂ ಕಳೆದುಕೊಂಡಿದ್ದಾರೆ.  

  • ಉಪರಾಷ್ಟ್ರಪತಿಯಾಗಿ ಧನಕರ್‌ ಮತ್ತು ಕೇಂದ್ರ ಸಂಪುಟ ಸಚಿವರಾಗಿ ರಿಜಿಜು ಅವರು ಕರ್ತವ್ಯ ನಿರ್ವಹಿಸದಂತೆ ಆದೇಶ ನೀಡಬೇಕು.

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಇನ್ನೂ ವಿಚಾರಣೆಗೆ ಪಟ್ಟಿ ಮಾಡಲಾಗಿಲ್ಲ.

Related Stories

No stories found.
Kannada Bar & Bench
kannada.barandbench.com