'ಹಿಂದೂ ಫ್ಯಾಸಿಸ್ಟ್ ಉದ್ಯಮ' ಬಣ್ಣನೆ: ಪ್ರಕಾಶ್ ರೈ, ಅರುಂಧತಿ ರಾಯ್ ವಿರುದ್ಧ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಪಿಐಎಲ್

ಅರುಂಧತಿ ರಾಯ್ ಅವರು ಅಂತರರಾಷ್ಟ್ರೀಯ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನ ಮತ್ತು ಪ್ರಕಾಶ್ ಅವರ ಟ್ವಿಟರ್ ಹೇಳಿಕೆಗೆ ವಕೀಲೆ ಮಿತಾ ಬ್ಯಾನರ್ಜಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಕಾಶ್ ರೈ, ಅರುಂಧತಿ ರಾಯ್ ಮತ್ತು ಕಲ್ಕತ್ತಾ ಹೈಕೋರ್ಟ್
ಪ್ರಕಾಶ್ ರೈ, ಅರುಂಧತಿ ರಾಯ್ ಮತ್ತು ಕಲ್ಕತ್ತಾ ಹೈಕೋರ್ಟ್ ಪ್ರಕಾಶ್ ರೈ, ಅರುಂಧತಿ ರಾಯ್ (ಫೇಸ್ ಬುಕ್)
Published on

ನಟ ಪ್ರಕಾಶ್ ರೈ ಮತ್ತು ಲೇಖಕಿ ಅರುಂಧತಿ ರಾಯ್ ಅವರು ಹಿಂದೂ ಸಮುದಾಯದ ವಿರುದ್ಧ ನೀಡಿದ ಹೇಳಿಕೆಗಳಿಗೆ ಮತ್ತು ಕೇಂದ್ರ ಸರ್ಕಾರವನ್ನು 'ಹಿಂದೂ ಫ್ಯಾಸಿಸ್ಟ್ ಉದ್ಯಮ' ಎಂದು ಕರೆದಿರುವುದಕ್ಕೆ ಆಕ್ಷೇಪಿಸಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ಜೂನ್ 2023ರಲ್ಲಿ ಅಂತರರಾಷ್ಟ್ರೀಯ ಸುದ್ದಿ ಚಾನೆಲ್ ಗೆ ಅರುಂಧತಿ ನೀಡಿದ್ದ‌ ಸಂದರ್ಶನ ಕುರಿತು ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ಮತ್ತು ನ್ಯಾಯಮೂರ್ತಿ  ಹಿರಣ್ಮಯ್ ಭಟ್ಟಾಚಾರ್ಯ ಅವರಿದ್ದ ವಿಭಾಗೀಯ ಪೀಠದ ಎದುರು ವಕೀಲೆ ಮಿತಾ ಬ್ಯಾನರ್ಜಿ ಪ್ರಸ್ತಾಪಿಸಿದರು.

" ಕಳೆದ ಜೂನ್‌ನಲ್ಲಿ ಅಲ್ ಝಜೀರಾಗೆ ಸಂದರ್ಶನ ನೀಡಿದ್ದ ಲೇಖಕಿ ಅರಂಧತಿ ರಾಯ್ ಭಾರತವು ಹಿಂದೂ ಫ್ಯಾಸಿಸ್ಟ್ ಉದ್ಯಮವಾಗಿ ಮಾರ್ಪಟ್ಟಿದೆ ಎಂದು ಆಕ್ಷೇಪಿಸಿದ್ದರು. ಒಸಾಮಾ ಬಿನ್ ಲಾಡೆನ್ ನಡೆಸುತ್ತಿರುವ ಭಯೋತ್ಪಾದಕ ಸಂಘಟನೆ ಅಲ್ ಖೈದಾದ ಮುಖವಾಣಿಯಾಗಿರುವ ಅಲ್ ಝಜೀರಾದಂತಹ ಸುದ್ದಿ ವಾಹಿನಿಯಲ್ಲಿ ಅವರು ಇಂತಹ ವಿಷಯಗಳನ್ನು ಹೇಳಬಹುದೆ" ಎಂದು ವಕೀಲೆ ಬ್ಯಾನರ್ಜಿ ಪ್ರಶ್ನಿಸಿದರು.  

ನಟ ಪ್ರಕಾಶ್ ರೈ ಕೂಡ ಸಾಮಾಜಿಕ ಮಾಧ್ಯಮ ಟ್ವಿಟರ್‌ ನಲ್ಲಿ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆಕೆ ಗಮನಸೆಳೆದರು. 

"ದೇಶದ ಜವಾಬ್ದಾರಿಯುತ ಪ್ರಜೆಗಳಾಗಿದ್ದರೂ ಇವರು ಈ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಈ ಹೇಳಿಕೆಗಳು ನಮ್ಮ ಭಾವನೆಗಳಿಗೆ ನೋವುಂಟು ಮಾಡಿವೆ. ನಾವು ಹಿಂದೂಗಳು ಫ್ಯಾಸಿಸ್ಟರಲ್ಲ. ವಾಸ್ತವವಾಗಿ, ನಾವು ನಮ್ಮ ಧರ್ಮವನ್ನು ರಕ್ಷಿಸಿದರೆ, ರಾಮ, ಕೃಷ್ಣ ಮುಂತಾದವರಂತೆ ನಮ್ಮ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ಬಾಲ್ಯದಿಂದಲೂ ನಮಗೆ ಕಲಿಸಲಾಗಿದೆ. ಹೀಗಾಗಿ, ಟ್ವಿಟರ್ ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಅವರ ಹೇಳಿಕೆಗಳನ್ನು ತೆಗೆದುಹಾಕಲು ನಾವು ನಿರ್ದೇಶನವನ್ನು ಕೋರುತ್ತೇವೆ" ಎಂದು ವಕೀಲೆ ಹೇಳಿದ್‌ದಾರೆ. 

ರಾಯ್ ಮತ್ತು ಪ್ರಕಾಶ್ ಇಬ್ಬರೂ ಭಾರತ ಸರ್ಕಾರವನ್ನು ಹಿಂದೂ ಫ್ಯಾಸಿಸ್ಟ್ ಉದ್ಯಮ ಎಂದು ಕರೆಯಲು ಸಾಧ್ಯವಿಲ್ಲ, ಏಕೆಂದರೆ ಅದು ಬಹುಪಾಲು ಜನಾದೇಶವನ್ನು ಪಡೆದಿದೆ ಎಂದು ಹೇಳಿದರು. 

ವಾದಗಳನ್ನು ಆಲಿಸಿದ ನ್ಯಾಯಾಲಯ , ಅರ್ಜಿಯಲ್ಲಿ ತಾಂತ್ರಿಕ ಸಮಸ್ಯೆ ಇರುವುದನ್ನು ಗುರುತಿಸಿ ಅದನ್ನು ಸರಿಪಡಿಸುವಂತೆ ಅರ್ಜಿದಾರರಿಗೆ ಸೂಚಿಸಿತು. ಬಳಿಕ ಪ್ರಕರಣವನ್ನು ಮುಂದೂಡಿತು.

Kannada Bar & Bench
kannada.barandbench.com