ಚುನಾವಣಾ ಬಾಂಡ್ ಸಿಬಿಐ ತನಿಖೆ ಕೋರಿದ್ದ ಅರ್ಜಿ: ಮಾಧ್ಯಮ ವರದಿ ಆಧರಿಸಿ ಪಿಐಎಲ್ ಸಲ್ಲಿಸುವಂತಿಲ್ಲ ಎಂದ ದೆಹಲಿ ಹೈಕೋರ್ಟ್

ಅರ್ಜಿ ನಿರ್ದಿಷ್ಟ ವಿಷಯ ಮಂಡಿಸದೆ ಚುನಾವಣಾ ಆಯೋಗದ ಜಾಲತಾಣದಲ್ಲಿ ಲಭ್ಯವಿರುವ ದತ್ತಾಂಶ ಮತ್ತು ಕೆಲ ಪತ್ರಿಕಾ ವರದಿಗಳನ್ನು ಆಧರಿಸಿದೆ ಎಂದು ನ್ಯಾಯಾಲಯ ಹೇಳಿದೆ.
Electoral Bonds
Electoral Bonds
Published on

ವಿವಿಧ ರಾಜಕೀಯ ಪಕ್ಷಗಳು ಪಡೆದ ಚುನಾವಣಾ ಬಾಂಡ್‌ಗಳ ದೇಣಿಗೆಗಳಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಬಗ್ಗೆ ದೆಹಲಿ ಹೈಕೋರ್ಟ್ ಬುಧವಾರ ಅಸಮಾಧಾನ ವ್ಯಕ್ತಪಡಿಸಿತು [ಸುದೀಪ್ ನಾರಾಯಣ್ ತಮನ್‌ಕರ್‌ ಮತ್ತು ಸಿಬಿಐ ಕೇಂದ್ರ ತನಿಖಾ ದಳ ಇನ್ನಿತರರ ನಡುವಣ ಪ್ರಕರಣ].

ಅರ್ಜಿ ಯಾವುದೇ ನಿರ್ದಿಷ್ಟ ವಿಷಯ ಮಂಡಿಸದೆ ಚುನಾವಣಾ ಆಯೋಗದ ಜಾಲತಾಣದಲ್ಲಿ ಲಭ್ಯವಿರುವ ದತ್ತಾಂಶ ಮತ್ತು ಕೆಲ ಪತ್ರಿಕಾ ವರದಿಗಳನ್ನು ಆಧರಿಸಿದೆ ಎಂದು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

Also Read
ಚುನಾವಣಾ ಬಾಂಡ್‌ ಮೂಲಕ ಸುಲಿಗೆ ಆರೋಪ: ಕೇಂದ್ರ ಸಚಿವರಾದ ನಿರ್ಮಲಾ, ನಡ್ಡಾ ವಿರುದ್ಧದ ಎಫ್‌ಐಆರ್‌ ರದ್ದು

"ನೀವು ನಿಮ್ಮ ಅರ್ಜಿಯಲ್ಲಿ ಯಾವುದೇ ಆರೋಪ ಮಾಡಿಲ್ಲ. ಅರ್ಜಿ ಭಾರತೀಯ ಚುನಾವಣಾ ಆಯೋಗದ ಜಾಲತಾಣದಲ್ಲಿ ಪ್ರಕಟವಾದ ಮಾಹಿತಿ ಮತ್ತು ಮಾಧ್ಯಮಗಳ ಕೆಲ ವರದಿಗಳನ್ನು ಆಧರಿಸಿದೆ.  ಸಿಬಿಐ ತನಿಖೆ ನಡೆಸಬೇಕು ಎಂದು ನೀವು ಬಯಸುತ್ತಿದ್ದೀರಿ. ಮಾಹಿತಿ ಪಡೆಯಲು ನೀವು ಅರಾಜಕ ವಿಚಾರಣೆ ಬಯಸುತ್ತೀರಿ. ಹೀಗೆ ಮಾಡಬಹುದೇ?" ಎಂದು ನ್ಯಾಯಾಲಯ ಕೇಳಿತು.

ಮಾಧ್ಯಮ ವರದಿಗಳ ಆಧಾರದ ಮೇಲೆ ಸಿಬಿಐ ತನಿಖೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆಯೂ ನ್ಯಾಯಾಲಯವು ಆಕ್ಷೇಪ ವ್ಯಕ್ತಪಡಿಸಿತು.

"ಪತ್ರಿಕೆಗಳನ್ನು ಎಷ್ಟರ ಮಟ್ಟಿಗೆ ಅವಲಂಬಿಸಬಹುದೆಂದು ನನಗೆ ತಿಳಿದಿಲ್ಲ. ಇದು ಊಹಾತ್ಮಕವಾಗಿದೆ. ದಾನಿಗಳ ಪಟ್ಟಿ ಇದೆ ಮತ್ತು ಮೊತ್ತವನ್ನು ದಾನ ಮಾಡಲಾಗಿದೆ ಎಂಬುದನ್ನು ಹೊರತುಪಡಿಸಿ ಯಾವುದೇ ವಿಷಯವಿಲ್ಲ, ಅಷ್ಟೆ" ಎಂದು ಪೀಠ ಟೀಕಿಸಿತು.

ಅಂತಿಮವಾಗಿ ಪೀಠ ಪ್ರಕರಣವನ್ನು ಮಾರ್ಚ್ 28ಕ್ಕೆ ಮುಂದೂಡಿತು. ಅರ್ಜಿಯನ್ನು ಪರಿಗಣಿಸಲು ಕೆಲವು ನಿರ್ದಿಷ್ಟ ದಾಖಲೆಗಳನ್ನು ಹಾಜರುಪಡಿಸುವಂತೆ ಅರ್ಜಿದಾರರಿಗೆ ಅದು ಸೂಚಿಸಿತು.

Also Read
ಕೇಂದ್ರ ಸಚಿವೆ ನಿರ್ಮಲಾ, ನಡ್ಡಾ ವಿರುದ್ಧದ ಚುನಾವಣಾ ಬಾಂಡ್‌ ಪ್ರಕರಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

"ಇದು ಒಂದು ಪಿಐಎಲ್. ಇತ್ತೀಚಿನ ದಿನಗಳಲ್ಲಿ ಕೆಲವು ಹಗರಣಗಳು ನಡೆದಿವೆ ಹೀಗಾಗಿ ಎಸ್‌ಐಟಿ ರಚಿಸಿ, ಇಲ್ಲವೇ ಸಿಬಿಐ, ಪೊಲೀಸ್‌ ತನಿಖೆಗೆ ಆದೇಶಿಸಿ ಎಂದು ಕೋರಿ ನ್ಯಾಯಾಲಯದ ಮೆಟ್ಟಿಲೇರುವ ಪ್ರವೃತ್ತಿ ಇದೆ. ಅದು ಪಿಐಎಲ್‌ ವ್ಯಾಪ್ತಿಗೆ ಬರುವುದಿಲ್ಲ. ನೀವು ಕೆಲವು ದಾಖಲೆಗಳನ್ನು ಸಲ್ಲಿಸಬೇಕು. ಆಗ ಮಾತ್ರ ನಾವು ಪರಿಗಣಿಸಬಹುದು" ಎಂದು ಪೀಠ ಹೇಳಿತು.

ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿತ್ತು. ಆ ಬಳಿಕ ಅರ್ಜಿದಾರರಾದ ಸುದೀಪ್ ನಾರಾಯಣ್ ತಮನ್‌ಕರ್‌, ಯೋಜನೆಗೆ ಸಂಬಂಧಿಸಿದ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಏಪ್ರಿಲ್ 2024ರಲ್ಲಿ ಸಿಬಿಐಗೆ ದೂರು ಸಲ್ಲಿಸಿದ್ದರು. ಇಷ್ಟಾದರೂ ಕಂಪೆನಿಗಳು ನೀಡಿದ ದೇಣಿಗೆ ಹಿಂದಿನ ಭ್ರಷ್ಟಾಚಾರ ಅಥವಾ ಲಂಚದ ನೆಲೆಯಲ್ಲಿ ಸಿಬಿಐ ತನಿಖೆ ನಡೆಸಿಲ್ಲ ಎಂದು ಅವರು ದೂರಿದ್ದರು.

Kannada Bar & Bench
kannada.barandbench.com