[ಲೋಕಸಭೆ ಚುನಾವಣೆ] ಡೀಪ್‌ಫೇಕ್‌ ವಿಡಿಯೋಗೆ ತಡೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್: ಗುರುವಾರ ವಿಚಾರಣೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಡೀಪ್‌ಫೇಕ್‌ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು. ಇಂತಹ ವಿಡಿಯೋಗಳ ವಿರುದ್ಧದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನಾಳೆ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ನುಡಿದಿದೆ.
Delhi High Court, Deepfake
Delhi High Court, Deepfake

ಲೋಕಸಭೆ ಚುನಾವಣೆ ನಡುವೆ ಡೀಪ್‌ಫೇಕ್ ವೀಡಿಯೊ ಪ್ರಸಾರವಾಗುವುದನ್ನು ತಡೆಯುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶನ ನೀಡಬೇಕೆಂದು ಕೋರಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್‌ಮೀತ್‌ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ಪೀಠದೆದುರು ಹಿರಿಯ ವಕೀಲ ಜಯಂತ್ ಮೆಹ್ತಾ ಮನವಿ ಪ್ರಸ್ತಾಪಿಸಿದರು. ನಾಳೆ (ಗುರುವಾರ) ಪ್ರಕರಣದ ವಿಚಾರಣೆ ನಡೆಸಲು ನ್ಯಾಯಾಲಯ ಸಮ್ಮತಿಸಿದೆ.

ಚುನಾವಣಾ ಸಮಯದಲ್ಲಿ ಪ್ರಸಾರವಾಗುತ್ತಿರುವ ಡೀಪ್‌ಫೇಕ್ ವೀಡಿಯೊಗಳು ಬಹಳ ಕಳವಳಕಾರಿ. ಈ ವೀಡಿಯೋಗಳನ್ನು ತೆಗೆದುಹಾಕಲು ಹಲವಾರು ಗಂಟೆಗಳ ಸಮಯ ಬೇಕು ಅಷ್ಟರೊಳಗೆ ಹಾನಿ ಉಂಟಾಗಿರುತ್ತದೆ ಎಂದು ಮೆಹ್ತಾ ಹೇಳಿದರು.

ವಿಡಿಯೋಗಳು ತಪ್ಪು ಮಾಹಿತಿಯನ್ನು ನಿರೂಪಿಸುತ್ತವೆ. ಇಂತಹ ಅಪರಾಧಗಳನ್ನು ನಿಭಾಯಿಸಲು ಮಾಹಿತಿ ತಂತ್ರಜ್ಞಾನ ಕಾಯಿದೆಯಡಿಯಲ್ಲಿ ಶಿಕ್ಷಿಸುವ ಚೌಕಟ್ಟು ಇದ್ದರೂ ಹಾಗೆ ಕ್ರಮ ಕೈಗೊಳ್ಳಲು  ಸಮಯ ಹಿಡಿಯುತ್ತದೆ ಎಂದರು. “ಅದುವೇ ತಂತ್ರಜ್ಞಾನ” ಎಂದು ನ್ಯಾ. ಮನಮೋಹನ್‌ ಇದಜ್ಜೆ ಪೂರಕವಾಗಿ ನುಡಿದರು.  

 ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಡೀಪ್‌ಫೇಕ್ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ವಿವಿಧ ರಾಜ್ಯಗಳ ಪೊಲೀಸ್ ಅಧಿಕಾರಿಗಳು ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದು ಹಲವಾರು ರಾಜಕಾರಣಿಗಳಿಗೆ ನೋಟಿಸ್‌ಗಳನ್ನೂ ನೀಡಿದ್ದಾರೆ.

Kannada Bar & Bench
kannada.barandbench.com