ಅರವಿಂದ್‌ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಕೆ

ತನಗೆ ಪ್ರಚಾರದ ಅಗತ್ಯವಿಲ್ಲ ಎಂಬ ಕಾರಣದಿಂದ 'ನಾವು ಭಾರತೀಯರು' ಎಂಬ ಹೆಸರಿನಲ್ಲಿ ಪಿಐಎಲ್‌ ಸಲ್ಲಿಸಿರುವುದಾಗಿ ಅರ್ಜಿದಾರರು ತಿಳಿಸಿದ್ದಾರೆ.
Arvind Kejriwal
Arvind KejriwalFacebook

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ತಮ್ಮ ಅವಧಿ ಮುಗಿಸುವವರೆಗೆ ಅಥವಾ ಅವರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳಲ್ಲಿನ ವಿಚಾರಣೆ ಮುಗಿಯುವವರೆಗೆ ಅವರಿಗೆ ಅಸಾಧಾರಣ ಮಧ್ಯಂತರ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ತನಗೆ ಪ್ರಚಾರದ ಅಗತ್ಯವಿಲ್ಲ ಎಂಬ ಕಾರಣದಿಂದ ನಾವು ಭಾರತೀಯರು ಎಂಬ ಹೆಸರಿನಲ್ಲಿ ಪಿಐಎಲ್‌ ಸಲ್ಲಿಸಿರುವುದಾಗಿ ಅರ್ಜಿದಾರರು ತಿಳಿಸಿದ್ದು, ದೆಹಲಿ ನಿವಾಸಿಗಳನ್ನು ಪ್ರತಿನಿಧಿಸುತ್ತಿರುವುದಾಗಿ ಅರ್ಜಿದಾರರು ಹೇಳಿಕೊಂಡಿದ್ದಾರೆ.

ಕೇಜ್ರಿವಾಲ್‌ ಅವರ ಬಂಧನವಾದಾಗಿನಿಂದ ಸಾಮಾಜಿಕ ಮಾಧ್ಯಮದಲ್ಲಿ ಅವರ ವರ್ಚಸ್ಸಿಗೆ ಹಾನಿ ಮಾಡುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಅಲ್ಲದೇ, ಕೇಜ್ರಿವಾಲ್‌ ಬಂಧನವಾದಾಗಿನಿಂದ ದೆಹಲಿ ಸರ್ಕಾರದ ಆಡಳಿತ ನಿಶ್ಚಲವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

“ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರನ್ನು ಬಂಧಿಯನ್ನಾಗಿಸಿರುವುದರಿಂದ ದೆಹಲಿಯ ಎನ್‌ಸಿಟಿ ಸರ್ಕಾರ ಮತ್ತು ಇಡೀ ದೆಹಲಿಯ ವರ್ಚಸ್ಸಿಗೆ ಜಗತ್ತಿನ ದೃಷ್ಟಿಯಲ್ಲಿ ಹಾನಿಯಾಗಿದೆ” ಎಂದು ಹೇಳಲಾಗಿದೆ.

“ಆರೋಪಿತ ಅಪರಾಧಗಳಲ್ಲಿ ಕೇಜ್ರಿವಾಲ್‌ ಅವರು ದೋಷಿಯಾಗಬಹುದು ಅಥವಾ ದೋಷಿಯಾಗದೇ ಇರಬಹುದು. ಭಾರತೀಯ ದಂಡ ಸಂಹಿತೆ ಅಪರಾಧ ಎದುರಿಸುತ್ತಿರುವ ಪ್ರತಿಯೊಬ್ಬರೂ ಅವರು ದೋಷಿಯೆಂದು ಘೋಷಿತವಾಗುವವರೆಗೆ ಸಾರ್ವಜನಿಕ ದೃಷಿಯಲ್ಲಿ ಮುಗ್ಧರಾಗಿರುತ್ತಾರೆ. ತಮ್ಮನ್ನು ಮುಗ್ಧ ಎಂದು ಸಾಬೀತುಪಡಿಸಲು ಅವರಿಗೆ ಎಲ್ಲಾ ಅಗತ್ಯ ಗ್ಯಾರಂಟಿ ಇದೆ” ಎಂದು ಹೇಳಲಾಗಿದೆ.

“ಈಚೆಗೆ ಪ್ರಯಾಗ್‌ರಾಜ್‌ನಲ್ಲಿ ಪೊಲೀಸ್‌ ಸುಪರ್ದಿನದಲ್ಲಿದ್ದ ಹಾಲಿ ಸಂಸದ ಅತೀಕ್‌ ಅಹ್ಮದ್‌ ಅವರನ್ನು ಮೂವರು ಆರೋಪಿಗಳು ಗುಂಡಿಟ್ಟು ಕೊಂದಿದ್ದರು. ಜೊತೆಗಿದ್ದ ಪೊಲೀಸರು ತಮ್ಮನ್ನು ರಕ್ಷಣೆ ಮಾಡಿಕೊಳ್ಳುವುದನ್ನು ಬಿಟ್ಟು ಬೇರೇನೂ ಮಾಡಲಾಗಿಲ್ಲ. ತಮ್ಮನ್ನು ರಕ್ಷಿಸಿಕೊಳ್ಳಲು ಪೊಲೀಸರು ಎರಡು ಹೆಜ್ಜೆ ಹಿಂದಿಟ್ಟಿದ್ದರು” ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಉದಾಹರಣೆಯನ್ನೂ ನೀಡಿದ್ದಾರೆ.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಜಾರಿ ನಿರ್ದೇಶನಾಲಯವು ಮಾರ್ಚ್‌ 28ರಂದು ವಶಕ್ಕೆ ಪಡೆದಿದ್ದು, ಏಪ್ರಿಲ್‌ 1ರಿಂದ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

Related Stories

No stories found.
Kannada Bar & Bench
kannada.barandbench.com