ಜೈಲಿನಿಂದಲೇ ಕಾರ್ಯ ನಿರ್ವಹಿಸಲು ಕೇಜ್ರಿವಾಲ್ ಅವರಿಗೆ ಅನುವು ಮಾಡಿಕೊಡಿ: ದೆಹಲಿ ಹೈಕೋರ್ಟ್‌ಗೆ ಪಿಐಎಲ್

ಕೇಜ್ರಿವಾಲ್ ಅವರನ್ನು ದೆಹಲಿ ಮುಖ್ಯಮಂತ್ರಿ ಹುದ್ದೆಯಿಂದ ವಜಾಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಈ ಹಿಂದೆ ಮೂರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಪ್ರಸ್ತುತ ಅರ್ಜಿ ಆ ಮನವಿಗಳಿಗೆ ವ್ಯತಿರಿಕ್ತವಾಗಿದೆ.
Arvind Kejriwal and Delhi High Court
Arvind Kejriwal and Delhi High Court

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿನಿಂದ ಸರ್ಕಾರ ನಡೆಸಲು ಸೂಕ್ತ ಸೌಲಭ್ಯ ಕಲ್ಪಿಸಬೇಕೆಂದು ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ಮಾರ್ಚ್ 21ರಂದು ಬಂಧಿತರಾಗಿದ್ದ ಕೇಜ್ರಿವಾಲ್ ಅವರನ್ನು ಏಪ್ರಿಲ್ 1 ರಂದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಶ್ರೀಕಾಂತ್ ಪ್ರಸಾದ್ ಎಂಬುವರು ಪಿಐಎಲ್ ಸಲ್ಲಿಸಿದ್ದಾರೆ.

ದೆಹಲಿ ಸರ್ಕಾರದ ಸಮರ್ಥ ಕಾರ್ಯನಿರ್ವಹಣೆಗಾಗಿ ದೆಹಲಿ ವಿಧಾನಸಭೆ ಸದಸ್ಯರು ಮತ್ತು ಕ್ಯಾಬಿನೆಟ್ ಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲು ವ್ಯವಸ್ಥೆ ಮಾಡಿಕೊಳ್ಳುವಂತೆ ಕೇಜ್ರಿವಾಲ್‌ ಅವರಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ದೆಹಲಿ ಸರ್ಕಾರದ ಯೋಜನೆಗಳು ನಾಗರಿಕರಿಗೆ ಒದಗಿಸಿರುವ ಸೌಲಭ್ಯಗಳನ್ನು ಜಾಗತಿಕ ಮಾಧ್ಯಮಗಳು ಮತ್ತು ಹಲವಾರು ಪ್ರತಿಷ್ಠಿತ ಸಂಸ್ಥೆಗಳು ಪ್ರಶಂಸಿಸಿವೆ ಎಂದು ಪ್ರಸಾದ್‌ ತಿಳಿಸಿದ್ದಾರೆ.

ಕೇಜ್ರಿವಾಲ್ ರಾಜೀನಾಮೆ ಮತ್ತು ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಗೆ ಸಂಬಂಧಿಸಿದಂತೆ ಸುದ್ದಿ ವಾಹಿನಿಗಳು ಒತ್ತಡ ಸೃಷ್ಟಿಸುತ್ತಿರುವುದರಿಂದ ರೋಚಕ ಶೀರ್ಷಿಕೆಗಳನ್ನು ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಬೇಕೆಂದು ಕೂಡ ಅರ್ಜಿಯಲ್ಲಿ ಕೋರಲಾಗಿದೆ.

ಮಾಧ್ಯಮಗಳ ಈ ನಡೆ ದೆಹಲಿಯ ನಾಗರಿಕರು ಮತ್ತು ಸಾರ್ವಜನಿಕರು ಪೂರ್ವಾಗ್ರಹಪೀಡಿತರಾಗುವಂತೆ ಮಾಡುತ್ತಿದ್ದು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಉಂಟಾಗುತ್ತಿದೆ. 2020 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 62 ಸ್ಥಾನಗಳ ಅಭೂತಪೂರ್ವ ಬಹುಮತದಿಂದ ಮುಖ್ಯಮಂತ್ರಿ ಚುನಾಯಿತರಾಗಿದ್ದಾರೆ ಎಂದು ಮನವಿ ವಿವರಿಸಿದೆ.

 ದೆಹಲಿಯ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಕೇಜ್ರಿವಾಲ್‌ ರಾಜೀನಾಮೆಗಾಗಿ ಅಕ್ರಮವಾಗಿ ಪ್ರತಿಭಟನೆ ನಡೆಸುವುದು ಇಲ್ಲವೇ ಹೇಳಿಕೆ ನೀಡಿ ಅನಗತ್ಯ ಒತ್ತಡ ಸೃಷ್ಟಿಸದಂತೆ ತಡೆ ನೀಡಬೇಕು ಎಂದು ಪ್ರಸಾದ್‌ ವಿನಂತಿಸಿದ್ದಾರೆ.

ಕೇಜ್ರಿವಾಲ್ ಅವರನ್ನು ದೆಹಲಿ ಮುಖ್ಯಮಂತ್ರಿ ಹುದ್ದೆಯಿಂದ ವಜಾಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಈ ಹಿಂದೆ ಮೂರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಸುರ್ಜಿತ್ ಸಿಂಗ್ ಯಾದವ್‌, ವಿಷ್ಣು ಗುಪ್ತಾ ಎಂಬುವವರು ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿತ್ತು. ನಂತರ ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ಶಾಸಕ ಸಂದೀಪ್ ಕುಮಾರ್ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ  ₹50,000 ದಂಡ ವಿಧಿಸಿತ್ತು.

ಪ್ರಸಾದ್‌ ಅವರು ಸಲ್ಲಿಸಿರುವ ಪ್ರಸ್ತುತ ಅರ್ಜಿ ಈ ಮನವಿಗಳಿಗೆ ವ್ಯತಿರಿಕ್ತವಾಗಿ ಇದೆ.

Related Stories

No stories found.
Kannada Bar & Bench
kannada.barandbench.com