ಸಾಮಾಜಿಕ ಜಾಲತಾಣದಲ್ಲಿ ವಿಚಾರಣೆಯ ವಿಡಿಯೋ ಪ್ರಸಾರ: ಸುನೀತಾ ಕೇಜ್ರಿವಾಲ್ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಪಿಐಎಲ್

ಕೇಜ್ರಿವಾಲ್ ಅವರು ನ್ಯಾಯಾಲಯವನ್ನು ಉದ್ದೇಶಿಸಿ ಮಾತನಾಡುತ್ತಿರುವ ಆಡಿಯೋ ವಿಡಿಯೊ ತುಣುಕುಗಳನ್ನು ಪ್ರಸಾರ ಮಾಡಿದ ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳನ್ನೂ ವಕೀಲ ವೈಭವ್ ಸಿಂಗ್ ಹೆಸರಿಸಿದ್ದಾರೆ.
Sunita Kejriwal, Delhi High Court
Sunita Kejriwal, Delhi High Court
Published on

ನ್ಯಾಯಾಲಯ ವಿಚಾರಣೆಯ ವೀಡಿಯೊ ತುಣುಕುಗಳನ್ನುಸಾಮಾಜಿಕ ತಾಣದಲ್ಲಿ ಪ್ರಸಾರ ಮಾಡಿದ್ದಕ್ಕಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಅರ್ಜಿ ಸಲ್ಲಿಸಲಾಗಿದೆ.

 ಕೇಜ್ರಿವಾಲ್ ಅವರು ನ್ಯಾಯಾಲಯವನ್ನು ಉದ್ದೇಶಿಸಿ ಮಾತನಾಡುತ್ತಿರುವ ಆಡಿಯೋ ವಿಡಿಯೋ ತುಣುಕುಗಳನ್ನು ಪ್ರಸಾರ ಮಾಡಿದ ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳನ್ನೂ ಪಿಐಎಲ್‌ ಸಲ್ಲಿಸಿರುವ ವಕೀಲ ವೈಭವ್‌ ಸಿಂಗ್‌ ಹೆಸರಿಸಿದ್ದಾರೆ.  

ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 28 ರಂದು ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಕೇಜ್ರಿವಾಲ್ ಅವರು ನ್ಯಾಯಾಲಯವನ್ನು ಉದ್ದೇಶಿಸಿ ಮಾತನಾಡುತ್ತಾ, ಇ ಡಿ ಬಿಜೆಪಿಗಾಗಿ ಸುಲಿಗೆ ದಂಧೆ ನಡೆಸುತ್ತಿದೆ ಎಂದು ಹೇಳಿದ್ದರು. ಇದರ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದಕ್ಕೆ ಸಿಂಗ್‌ ಆಕ್ಷೇಪಿಸಿದ್ದಾರೆ.

ಪಿಐಎಲ್‌ನಲ್ಲಿ ಏನಿದೆ?

  • ಘಟನೆಯ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಬೇಕು.

  • ಮಾರ್ಚ್ 28 ರಂದು ಕೇಜ್ರಿವಾಲ್ ರೌಸ್ ಅವೆನ್ಯೂ ನ್ಯಾಯಾಲಯವನ್ನು ಉದ್ದೇಶಿಸಿ ಮಾತನಾಡಿದ ನಂತರ, ಆಮ್ ಆದ್ಮಿ ಪಕ್ಷ (ಎಎಪಿ) ಮತ್ತಿತರ ವಿರೋಧ ಪಕ್ಷಗಳಿಗೆ ಸಂಬಂಧಿಸಿದ ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳು ನ್ಯಾಯಾಲಯದ ಕಲಾಪಗಳ ವಿಡಿಯೋ/ಆಡಿಯೋ ರೆಕಾರ್ಡ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿವೆ.

  • ಸುನಿತಾ ಕೇಜ್ರಿವಾಲ್ ಅವರು ಅಕ್ಷಯ್ ಹೆಸರಿನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪ್ರಸಾರವಾದ ಆಡಿಯೊ ರೆಕಾರ್ಡಿಂಗ್ ಅನ್ನು ಮರುಹಂಚಿಕೊಂಡಿದ್ದಾರೆ.

  • ʼನ್ಯಾಯಾಲಯಗಳ ವೀಡಿಯೋ ಕಾನ್ಫರೆನ್ಸಿಂಗ್ ದೆಹಲಿಯ ಹೈಕೋರ್ಟ್ ನಿಯಮಾವಳಿ2021ʼರ ಪ್ರಕಾರ ನ್ಯಾಯಾಲಯದ ವಿಚಾರಣೆ ರೆಕಾರ್ಡ್ ಮಾಡುವುದನ್ನು ನಿಷೇಧಿಸಲಾಗಿದ್ದು ಈ ವೀಡಿಯೊಗಳನ್ನು ವೈರಲ್ ಮಾಡುವುದು ನ್ಯಾಯಾಂಗ ಮತ್ತು ನ್ಯಾಯಾಧೀಶರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಯತ್ನವಾಗಿದೆ.

  • ಇಂತಹ ವಿಡಿಯೋಗಳ ಪ್ರಸಾರ ಅರವಿಂದ್ ಕೇಜ್ರಿವಾಲ್ ಮತ್ತು ಎಎಪಿ ರೂಪಿಸಿರುವ ಪಿತೂರಿಯ ಭಾಗ.

Kannada Bar & Bench
kannada.barandbench.com