ಗೂಗಲ್ ಪೇ ಆಧಾರ್ ಮಾಹಿತಿಗೆ ಅಕ್ರಮವಾಗಿ ಪ್ರವೇಶಿಸಿ, ಮಾಹಿತಿ ಬಳಸಿ, ದತ್ತಾಂಶ ಶೇಖರಣೆ ಮಾಡುತ್ತಿದೆ ಎಂದು ಆರೋಪಿಸಿ ದೆಹಲಿ ಹೈಕೋರ್ಟ್‌ನಲ್ಲಿ ʼಹಣಕಾಸು ಅರ್ಥಶಾಸ್ತ್ರಜ್ಞʼ ಅಭಿಜಿತ್ ಮಿಶ್ರಾ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಭಾರತ ವಿಶಿಷ್ಟ ಗುರುತಿನ ಚೀಟಿ (ಯುಐಎಡಿಐ) ಪ್ರಾಧಿಕಾರವನ್ನು ಪ್ರತಿವಾದಿಯನ್ನಾಗಿಸಲಾಗಿದೆ.
ಗೂಗಲ್ ಪೇ ತನ್ನ ಷರತ್ತು ಮತ್ತು ನಿಯಮಾವಳಿಗಳಲ್ಲಿ ತಾನು ಆಧಾರ್ ಮಾಹಿತಿ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಸಂಗ್ರಹಿಸಿ, ಶೇಖರಿಸಿ ಅದನ್ನು ಹಂಚಿಕೊಳ್ಳುವುದಾಗಿ ಸ್ಪಷ್ಟವಾಗಿ ನಮೂದಿಸಿದೆ. ಆದರೆ ಯುಐಎಡಿಐಯಿಂದ ಯಾವುದೇ ಅನುಮತಿ ಪಡೆಯದೇ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಇದು 2016ರ ಆಧಾರ್ ಕಾಯಿದೆ, 2007ರ ಪಾವತಿ ಮತ್ತು ಸಂದಾಯ ವ್ಯವಸ್ಥೆ ಕಾಯಿದೆ, 1949ರ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ ಹಾಗೂ ಸಂವಿಧಾನದ 21 ನೇ ವಿಧಿಯ ಉಲ್ಲಂಘನೆ ಎಂದು ಪಿಐಎಲ್‌ನಲ್ಲಿ ಹೇಳಲಾಗಿದೆ.
ಅಲ್ಲದೆ ಗೂಗಲ್ ಪೇ ಪಾವತಿ ಮತ್ತು ವಹಿವಾಟು ನಡೆಸಲು 2007ರ ಪಾವತಿ ಮತ್ತು ಸೆಟಲ್‌ಮೆಂಟ್ ವ್ಯವಸ್ಥೆ ಕಾಯಿದೆಯಡಿ ತಾನು ಬ್ಯಾಂಕ್ / ಸಹಕಾರಿ ಬ್ಯಾಂಕ್ / ಆರ್ಥಿಕ ಸಂಸ್ಥೆ / ಬ್ಯಾಂಕೇತರ ಹಣಕಾಸು ಕಂಪೆನಿ ಎಂದು ನೋಂದಾಯಿಸಿಕೊಂಡಿಲ್ಲ. ಹೀಗಾಗಿ 2016ರ ಆಧಾರ್ ಕಾಯಿದೆಯ 23 ಎ, 28, 29, 38 ಮತ್ತು 43ನೇ ಸೆಕ್ಷನ್ ಅಡಿಯಲ್ಲಿ ಗೂಗಲ್ ಪೇ ವಿರುದ್ಧ ಕ್ರಮ ಕೂಗೊಳ್ಳಲು, ಜೊತೆಗೆ ಇಂತಹ ಅನಧಿಕೃತ ಮಾಹಿತಿ ಬಳಕೆ ತಡೆಯಲು ಯುಐಎಡಿಐಗೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.
ನ್ಯಾಯವಾದಿ ಪಾಯಲ್ ಬಹ್ಲ್ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ. ಡಿ 31ರಂದು ಅರ್ಜಿಯು ನ್ಯಾಯಮೂರ್ತಿಗಳಾದ ವಿಭು ಬಖ್ರು ಮತ್ತು ಪ್ರತೀಕ್ ಜಲನ್ ಅವರಿದ್ದ ರಜಾಕಾಲೀನ ಪೀಠ ಪ್ರಕರಣದ ವಿಚಾರಣೆಗೆ ಬಂದಿತ್ತು. ಇದುವರೆಗೆ ಅರ್ಜಿದಾರರು ಸಲ್ಲಿಸಿರುವ ಎಲ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮಾಹಿತಿ ನೀಡುವಂತೆ ಸೂಚಿಸಿರುವ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಜ. 14ಕ್ಕೆ ಮುಂದೂಡಿದೆ.