ಮೇ 20ರಿಂದ ಸಾರಿಗೆ ನೌಕರರ ಪ್ರಸ್ತಾಪಿತ ಮುಷ್ಕರ: ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ 18.05.2026 ರಿಂದ 25.05.2026ರವರೆಗೆ ನಡೆಯಲಿವೆ. ಗ್ರಾಮೀಣ & ಅರೆ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಸಾರ್ವಜನಿಕ ಬಸ್‌ ಅವಲಂಬಿಸಿದ್ದು, ಮುಷ್ಕರದಿಂದ ಅವರಿಗೆ ತೊಂದರೆಯಾಗಲಿದೆ ಎಂದು ಆಕ್ಷೇಪಿಸಲಾಗಿದೆ.
KSRTC
KSRTC
Published on

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಸಿಬ್ಬಂದಿ ಟ್ರೇಡ್‌ ಯೂನಿಯನ್‌ಗಳ ಜಂಟಿ ಕ್ರಿಯಾ ಸಮಿತಿ ಮೇ 20ರಿಂದ ಕರೆದಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಆಕ್ಷೇಪಿಸಿ ಕರ್ನಾಟಕ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಅದು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.‌

ಮನೆಕೆಲಸ ಮಾಡುತ್ತಿರುವ ಬೆಂಗಳೂರಿನ ಸಿ ವೇದಾವತಿ ಹಾಗೂ ಕಟ್ಟಡ ಕಾರ್ಮಿಕ ಎಚ್‌ ವಿ ಶ್ರೀಧರ ಎಂಬವರು ಸಲ್ಲಿಸಿರುವ ಅರ್ಜಿಯಲ್ಲಿ ಕೂಡಲೇ ಮುಷ್ಕರ ಹಿಂಪಡೆಯಲು ಜಂಟಿ ಕ್ರಿಯಾ ಸಮಿತಿಗೆ ನಿರ್ದೇಶಿಸಬೇಕು ಎಂದು ಕೋರಲಾಗಿದೆ.

ರಾಜ್ಯ ಸರ್ಕಾರವು ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ (ತಿದ್ದುಪಡಿ) ಕಾಯಿದೆ ಅಡಿ 01.01.2026 ರಿಂದ 30.06.2026ರವರೆಗೆ ಮುಷ್ಕರ ನಿಷೇಧಿಸಿದೆ. ಈ ಕಾಯಿದೆಯ ಸೆಕ್ಷನ್‌ 4 ಮತ್ತು 5ರ ಅಡಿ ಮುಷ್ಕರದಲ್ಲಿ ಭಾಗವಹಿಸಿದರೆ ಮತ್ತು ಭಾಗವಹಿಸುವಂತೆ ಪ್ರಚೋದಿಸುವ ವ್ಯಕ್ತಿಯನ್ನು ಆರು ತಿಂಗಳು ಜೈಲಿನಲ್ಲಿ ಇಡಬಹುದಾಗಿದೆ. ಕೈಗಾರಿಕಾ ವಿವಾದಗಳ ಕಾಯಿದೆ ಅಡಿಯಲ್ಲೂ ಸಾರಿಗೆ ಸಂಸ್ಥೆಗಳ ಸೇವೆಯನ್ನು ಸಾರ್ವಜನಿಕ ಬಳಕೆ ಸೇವೆ ಎಂದು ಘೋಷಿಸಲಾಗಿದೆ. ಈ ಸಂಬಂಧ ಸಂಧಾನ ಪ್ರಕ್ರಿಯೆ ನಡೆಯುತ್ತಿದ್ದು, ಇದರ ವಿಚಾರಣೆ ಮೇ 25ಕ್ಕೆ ನಿಗದಿಯಾಗಿದೆ. ಕೈಗಾರಿಕಾ ವಿವಾದ ಕಾಯಿದೆ ಸೆಕ್ಷನ್‌ 22(1)(a) ಅನ್ವಯ ಮುಷ್ಕರ ನಡೆಸುವ 14 ದಿನ ಮುಂಚಿತವಾಗಿ ಭಿತ್ತಪತ್ರ ಬಿಡುಗಡೆ ಮಾಡಬೇಕು. ಆದರೆ, ಇದನ್ನು ಐದಾರು ದಿನಗಳ ಮುಂಚಿತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಸಾರ್ವಜನಿಕ ಬಸ್‌ಗಳಲ್ಲಿ ಪ್ರತಿದಿನ 1.20 ಕೋಟಿ ಮಂದಿ ಸಂಚಾರ ಮಾಡುತ್ತಿದ್ದು, ಈ ಪೈಕಿ ಶೇ 60 ಮಂದಿ ಮಹಿಳೆಯರಾಗಿದ್ದಾರೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆ ಚಾಲ್ತಿಯಲ್ಲಿರುವುದರಿಂದ ಮಹಿಳೆಯರು ಉಚಿತವಾಗಿ ಓಡಾಡುತ್ತಿದ್ದಾರೆ. ಪ್ರಸ್ತಾಪಿತ ಮುಷ್ಕರವು ಮೇ 20ರಿಂದ ನಡೆಯುವ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು 18.05.2026 ರಿಂದ 25.05.2026ರವರೆಗೆ ನಡೆಯಲಿವೆ. ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಸಾರ್ವಜನಿಕ ಬಸ್‌ಗಳನ್ನೇ ಅವಲಂಬಿಸಿರುವುದರಿಂದ ಮುಷ್ಕರದಿಂದ ಅವರಿಗೆ ಸಮಸ್ಯೆಯಾಗಲಿದೆ. ದಿನಗೂಲಿ ಅವಲಂಬಿಸಿರುವವರು, ರೋಗಿಗಳು, ವಯಸ್ಸಾದವರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರು ಸಾರ್ವಜನಿಕ ಬಸ್‌ ಅವಲಂಬಿಸಿದ್ದು, ಮುಷ್ಕರದಿಂದ ಅವರಿಗೆ ಸಮಸ್ಯೆಯಾಗಲಿದೆ ಎಂದು ವಿವರಿಸಲಾಗಿದೆ.

Also Read
ಸಾರಿಗೆ ನೌಕರರ ಮುಷ್ಕರ ವಾಪಸ್: ಪಿಐಎಲ್ ಇತ್ಯರ್ಥಪಡಿಸಿದ ಹೈಕೋರ್ಟ್

2023 ಮತ್ತು 2025ರಲ್ಲಿ ಹೈಕೋರ್ಟ್‌ ಮಧ್ಯಪ್ರವೇಶದಿಂದ ಮುಷ್ಕರ ಹಿಂಪಡೆಯಲಾಗಿತ್ತು. 2025ರಲ್ಲಿ ಹೈಕೋರ್ಟ್‌ ಆದೇಶದ ಹೊರತಾಗಿಯೂ ಸಾರ್ವಜನಿಕ ಬಸ್‌ ಸೇವೆಯಲ್ಲಿ ವ್ಯತ್ಯಯವಾಗಿದ್ದು, 17,200 ಷೋಕಾಸ್‌ ನೋಟಿಸ್‌ಗಳನ್ನು ಜಾರಿ ಮಾಡಬೇಕಿದೆ. 01.04.2025ರಂದು ರಾಜ್ಯ ಸರ್ಕಾರವು ಸಾರಿಗೆ ಸಿಬ್ಬಂದಿಯ ವೇತನದಲ್ಲಿ ಶೇ 12.5ರಷ್ಟು ಪರಿಷ್ಕರಿಸಿದ್ದು, 1,271.92 ಕೋಟಿ ರೂಪಾಯಿ ಹಂಚಿ ಮಾಡಿದೆ. ಮೊದಲ ವಂತಿಗೆ ರೂಪದಲ್ಲಿ 450 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಸಂಧಾನ ಸಂಬಂಧಿತ ವಿಚಾರಣೆಯು ಐದು ದಿನ ಇರುವ ಸಂದರ್ಭದಲ್ಲಿ ಪ್ರಸ್ತಾವಿತ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಆಕ್ಷೇಪಿಸಲಾಗಿದೆ.

ಹೀಗಾಗಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಟ್ರೇಡ್‌ ಯೂನಿಯನ್‌ಗಳ ಜಂಟಿ ಕ್ರಿಯಾ ಸಮಿತಿಗೆ ಮುಷ್ಕರ ನಡೆಸದಂತೆ ನಿರ್ದೇಶಿಸಬೇಕು. ರಾಜ್ಯ ಸರ್ಕಾರ ಮತ್ತು ಕಾರ್ಪೊರೇಶನ್‌ ಯಾವುದೇ ಮುಷ್ಕರ ನಡೆಯದಂತೆ ಅಗತ್ಯ ಕ್ರಮಕೈಗೊಳ್ಳಲು ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Kannada Bar & Bench
kannada.barandbench.com