ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾರ್ವಜನಿಕ ಉಪದ್ರವಕ್ಕೆ ಕಾರಣವಾದ ಕುರಿತು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಅವರ ಪುತ್ರ, ಸಚಿವ ಆದಿತ್ಯ ಠಾಕ್ರೆ, ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಿಕೊಳ್ಳಲು ಹಾಗೂ ತನಿಖೆಗೆ ಸೂಚಿಸಲು ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ಏಕನಾಥ್ ಶಿಂಧೆ ಗುಂಪಿನ ಶಾಸಕರ ಬಂಡಾಯದ ವಿಚಾರವಾಗಿ ರಾಜ್ಯದಲ್ಲಿ ಯಾವುದೇ ಪತ್ರಿಕಾಗೋಷ್ಠಿ, ಪ್ರವಾಸ ಮತ್ತು ಭೇಟಿಗಳನ್ನು ಆಯೋಜಿಸದಂತೆ ಮೂವರಿಗೂ ನಿರ್ದೇಶನ ನೀಡಬೇಕೆಂದೂ ಸಾಮಾಜಿಕ ಕಾರ್ಯಕರ್ತ ಹೇಮಂತ್ ಪಾಟೀಲ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿದೆ.
ಠಾಕ್ರೆ ಕುಟುಂಬ ಮತ್ತು ರಾವುತ್ ಅವರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಬಂಡಾಯ ಶಾಸಕರು ಗುವಾಹಟಿಗೆ ಪಲಾಯನ ಮಾಡಿದರು. ಬಂಡಾಯವೆದ್ದ ಶಾಸಕರ ವಿರುದ್ಧ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಶಿವಸೇನಾ ಕಾರ್ಯಕರ್ತರು ಪ್ರತಿಭಟನೆ ಆರಂಭಿಸುತ್ತಿದ್ದಂತೆಯೇ ಅಧಿಕಾರಕ್ಕಾಗಿ ಕಾದಾಟ ತೀವ್ರಗೊಂಡಿತು ಎಂದು ಪಾಟೀಲ್ ಆರೋಪಿಸಿದ್ದಾರೆ.
ಇದೆಲ್ಲವೂ ರಾಜ್ಯದಲ್ಲಿ ಗಲಭೆ ಮತ್ತು ಹಿಂಸಾಚಾರದ ಪರಿಸ್ಥಿತಿಯನ್ನು ಎದುರಿಸುತ್ತಿರುವ ನಾಗರಿಕರ ಮನಸ್ಸಿನಲ್ಲಿ ಭಯ ಸೃಷ್ಟಿಸುತ್ತಿದೆ. ಬಂಡಾಯ ಶಾಸಕರಿಗೆ ಕೇಂದ್ರ ಸರ್ಕಾರ ವೈ ಪ್ಲಸ್ ರಕ್ಷಣೆ ನೀಡಿರುವುದು ಮಹಾರಾಷ್ಟ್ರದಲ್ಲಿ ಶಾಂತಿ ಕದಡಿರುವುದರ ಸಂಕೇತವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.