
ಆನ್‌ಲೈನ್ ವಸ್ತುವಿಷಯ ತೆಗೆದುಹಾಕುವ ನೋಟಿಸ್ ನೀಡಲು ದೆಹಲಿ ಪೊಲೀಸರಿಗೆ ಅಧಿಕಾರ ಒದಗಿಸಿದ್ದ ಅಧಿಸೂಚನೆ ಪ್ರಶ್ನಿಸಿದ್ದ ಅರ್ಜಿಯ ಕುರಿತು ದೆಹಲಿ ಹೈಕೋರ್ಟ್ ಬುಧವಾರ ದೆಹಲಿಯ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಕಚೇರಿ ಮತ್ತು ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದೆ [ಸಾಫ್ಟ್‌ವೇರ್ ಫ್ರೀಡಂ ಲಾ ಸೆಂಟರ್, ಇಂಡಿಯಾ ಮತ್ತುದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ] .
ಲಾಭರಹಿತ ಸಂಸ್ಥೆಯಾದ ಸಾಫ್ಟ್‌ವೇರ್ ಫ್ರೀಡಂ ಲಾ ಸೆಂಟರ್ (ಎಸ್‌ಎಫ್‌ಎಲ್‌ಸಿ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಪ್ರಕರಣದ ವಿಚಾರಣೆ ಮುಂದಿನ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ.
ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ ನಿಯಮಾಳಿ, 202ರ ಅಡಿಯಲ್ಲಿ ನೋಟಿಸ್ ನೀಡಲು ದೆಹಲಿ ಪೊಲೀಸರನ್ನು ನೋಡಲ್ ಏಜೆನ್ಸಿಯಾಗಿ ನೇಮಿಸಿ ಎಲ್‌ಜಿ ಹೊರಡಿಸಿದ ಅಧಿಸೂಚನೆಯ ಸಾಂವಿಧಾನಿಕ ಸಿಂಧುತ್ವವನ್ನು ಎಸ್ಎಫ್ಎಲ್‌ಸಿ ಪ್ರಶ್ನಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ ಸೆಕ್ಷನ್ 79 ಅಥವಾ ಐಟಿ ನಿಯಮಾವಳಿ- 2021 ಅಂತಹ ನೋಡಲ್ ಏಜೆನ್ಸಿ ನೇಮಿಸಲು ಅಧಿಕಾರವ ನೀಡದ ಕಾರಣ ಈ ಅಧಿಸೂಚನೆಗೆ ಕಾನೂನಿನಲ್ಲಿ ಆಧಾರ ಇಲ್ಲ ಎಂದು ವಾದಿಸಲಾಗಿದೆ.
ನ್ಯಾಯಾಂಗ ಅಥವಾ ಸ್ವತಂತ್ರ ಮೇಲ್ವಿಚಾರಣೆಯಿಲ್ಲದೆ ಪೊಲೀಸ್ ಅಧಿಕಾರಿಗಳಿಗೆ ಏಕಪಕ್ಷೀಯವಾಗಿ ವಸ್ತುವಿಷಯ ತೆಗೆದುಹಾಕುವ ನೋಟಿಸ್ ಹೊರಡಿಸಲು ಅವಕಾಶ ನೀಡುವುದರಿಂದ ಅನಿಯಂತ್ರಿತ ಸೆನ್ಸಾರ್‌ಶಿಪ್‌ಗೆ ಕಾರಣವಾಗುತ್ತದೆ. ಸಾಂವಿಧಾನಿಕವಾಗಿ ಸಂರಕ್ಷಿತವಾಗಿರುವ ಭಾಷಣವನ್ನು ಮನಸೋಇಚ್ಛೆಯಾಗಿ ನಿರ್ಬಂಧಿಸುವುದಕ್ಕೆ ಆಸ್ಪದ ನೀಡುತ್ತದೆ ಎಂದು ಅರ್ಜಿಯಲ್ಲಿ ಎಚ್ಚರಿಸಲಾಗಿದೆ.
ಎಸ್ಎಫ್ಎಲ್ ಸಿ ಪರವಾಗಿ ವಕೀಲ ತಲ್ಹಾ ಅಬ್ದುಲ್ ರೆಹಮಾನ್ ವಾದ ಮಂಡಿಸಿದರು. ಅವರಿಗೆ ವಕೀಲ ಫೈಜಾನ್ ಅಹ್ಮದ್ ಸಹಾಯ ಮಾಡಿದರು.