ಪ್ರಭಾರಿ ಡಿಜಿ-ಐಜಿಪಿಯಾಗಿ ಡಾ. ಸಲೀಂ ನೇಮಕ ಆದೇಶ ರದ್ದತಿ ಕೋರಿ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ

ಸುಪ್ರಿಂ ಕೋರ್ಟ್‌ ಆದೇಶ ಉಲ್ಲಂಘನೆಯಾಗಿದ್ದು, ಪ್ರಭಾರ ಡಿಜಿಪಿಯಾಗಿ ಸಲೀಂ ಅವರನ್ನು ನೇಮಿಸಿರುವ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
DG IGP Dr. M A Saleem & Karnataka HC
DG IGP Dr. M A Saleem & Karnataka HC
Published on

ರಾಜ್ಯ ಪ್ರಭಾರ ಪೊಲೀಸ್‌ ಮಹಾ ನಿರ್ದೇಶಕರಾಗಿ (ಡಿಜಿ-ಐಜಿಪಿ) ಹಿರಿಯ ಐಪಿಎಸ್‌ ಅಧಿಕಾರಿ ಡಾ.ಎಂ ಎ ಸಲೀಂ ಅವರನ್ನು ನೇಮಕ ಮಾಡಿ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಕೋರಿ ವಕೀಲೆ ಸುಧಾ ಕಾಟ್ವಾ ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ, ಕೇಂದ್ರ ಲೋಕಸೇವಾ ಆಯೋಗ ಮತ್ತು ಪ್ರಭಾರ ಡಿಜಿಪಿ ಡಾ.ಎಂ ಎ ಸಲೀಂ ಅವರನ್ನು ಪ್ರತಿವಾದಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಕಾಯಂ ಡಿಜಿಪಿಯನ್ನು ನೇಮಕ ಮಾಡುವಾಗ ಅನುಸರಿಸಬೇಕಾದ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸುಪ್ರಿಂ ಕೋರ್ಟ್‌ ಆದೇಶಿಸಿದೆ. ಯಾವುದೇ ಕಾರಣಕ್ಕೂ ಕಾರ್ಯಕಾರಿ ಅಥವಾ ಪ್ರಭಾರ ಡಿಜಿಪಿಯನ್ನು ನೇಮಿಸಬಾರದು. ಪ್ರಭಾರ ಡಿಜಿಪಿ ಎಂಬ ಪರಿಕಲ್ಪನೆಯೇ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಈ ಆದೇಶ ಉಲ್ಲಂಘಿಸಿ ಡಾ.ಎಂ ಎ ಸಲೀಂ ಅವರನ್ನು ಪ್ರಭಾರ ಡಿಜಿ-ಐಜಿಪಿಯಾಗಿ ನೇಮಿಸಿ 2025ರ ಮೇ 21ರಂದು ಸರ್ಕಾರ ಆದೇಶ ಮಾಡಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಅಲ್ಲದೆ, ಡಿಜಿಪಿ ನೇಮಕಾತಿಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‍ಸಿ) ಉನ್ನತ ಮಟ್ಟದ ಸಮಿತಿ ರಚಿಸಬೇಕು. ಆ ಸಮಿತಿ ರಾಜ್ಯದಲ್ಲಿನ ಸೇವಾ ಹಿರಿತನ ಹೊಂದಿರುವ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ಸೇವೆ ಹಾಗೂ ನಡಾವಳಿ ಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಶಿಫಾರಸ್ಸುಗೊಂಡವರಲ್ಲಿ ಒಬ್ಬರನ್ನು ಮುಖ್ಯಮಂತ್ರಿಗಳು ಡಿಜಿಪಿಯಾಗಿ ನೇಮಿಸಬೇಕು. ಆದರೆ, ಯುಪಿಎಸ್‌ಸಿಯಿಂದ ಆರ್‌ಟಿಐ ಮೂಲಕ ಪಡೆದ ಉತ್ತರದಿಂದ ಮೇ 21ರಿಂದ ಖಾಲಿಯಾಗಲಿರುವ ಡಿಜಿಪಿ ನೇಮಕಕ್ಕೆ ಉನ್ನತ ಸಮಿತಿ ರಚನೆ ಮಾಡಲು ಸರ್ಕಾರ ಪ್ರಸ್ತಾವನೆ ಕಳುಹಿಸಿದೆ. ಆ ಪ್ರಕ್ರಿಯೆಯಲ್ಲಿ ಕೆಲ ಲೋಪ ಉಂಟಾಗಿದೆ. ಆ ಕುರಿತು ಸರ್ಕಾರದಿಂದ ಸ್ಪಷ್ಟೀಕರಣಕ್ಕಾಗಿ ಕಾಯುತ್ತಿರುವುದಾಗಿ ಯುಪಿಎಸ್‌ಸಿ ತಿಳಿಸಿದೆ. ಇದರಿಂದ ಉನ್ನತ ಸಮಿತಿ ರಚನೆಯೇ ಆಗಿಲ್ಲ ಎಂಬುದನ್ನು ದೃಢಪಡಿಸುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಇನ್ನೂ ಮೇ 21 ಮತ್ತು ಅದಕ್ಕೂ ಮುಂಚಿತವಾಗಿ ಡಾ.ಎಂ ಎ ಸಲೀಂ ಅವರನ್ನು ಡಿಜಿಪಿ ಈ ಹುದ್ದೆಗೆ ನೇಮಕ ಮಾಡಲು ಉನ್ನತ ಮಟ್ಟದ ಸಮಿತಿ ಯಾವುದೇ ಶಿಫಾರಸು ಮಾಡಿರಲಿಲ್ಲ ಎಂದು ಆರ್‌ಟಿಐ ಉತ್ತರದಲ್ಲಿ ಯುಪಿಎಸ್‌ಸಿ ದೃಢಪಡಿಸುತ್ತದೆ. ಇದರಿಂದ ಯುಪಿಎಸ್‌ಸಿ ಉನ್ನತ ಮಟ್ಟದ ಸಮಿತಿಯ ರಚನೆ ಮಾಡದೆಯೇ ಮತ್ತು ಅದರಿಂದ ಡಿಜಿಪಿ ಹುದ್ದೆಗಳನ್ನು ಶಿಫಾರಸು ಮಾಡುವ ಪ್ರಕ್ರಿಯೆ ನಡೆಸದೆ, ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಮಾಡಿ, ಪ್ರಭಾರ ಡಿಜಿಪಿಯಾಗಿ ಡಾ.ಎಂ ಎ ಸಲೀಂ ಅವರನ್ನು ನೇಮಿಸಲಾಗಿದೆ. ಇದು ಸುಪ್ರಿಂ ಕೋರ್ಟ್‌ ಆದೇಶ ಉಲ್ಲಂಘನೆಯಾಗಿದ್ದು, ಪ್ರಭಾರ ಡಿಜಿಪಿಯಾಗಿ ಸಲೀಂ ಅವರನ್ನು ನೇಮಿಸಿರುವ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Kannada Bar & Bench
kannada.barandbench.com