ಭಾರತೀಯ ಸೇನೆಯ ನ್ಯಾಯಾಧೀಶರ ಅಡ್ವೊಕೇಟ್ ಜನರಲ್ (ಜೆಎಜಿ) ವಿಭಾಗದ ಅಧಿಕಾರಿ ಹುದ್ದೆಗೆ ಆಯ್ಕೆಯಾಗಲು ಸಾಮಾನ್ಯ ಕಾನೂನು ಪ್ರವೇಶಾತಿ ಪರೀಕ್ಷೆ (ಸಿಎಲ್‌ಎಟಿ) ಕಡ್ಡಾಯವಾಗಿ ಬರೆದಿರಬೇಕು ಎಂಬ ಅಧಿಸೂಚನೆ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಈಚೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಅಭ್ಯರ್ಥಿಗಳು ಸಿಎಲ್‌ಎಟಿ ಸ್ನಾತಕೋತ್ತರ ಪ್ರವೇಶಾತಿ ಪರೀಕ್ಷೆ ಬರೆದಿರಬೇಕು ಎಂಬ ಷರತ್ತು ವಿಧಿಸಿರುವುದು ಸಂವಿಧಾನದ 16ನೇ ವಿಧಿಯ ಅನ್ವಯ ಸಾರ್ವಜನಿಕ ಔದ್ಯೋಗಿಕ ಸಮಾನ ಅವಕಾಶದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಆಕ್ಷೇಪಿಸಿ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಯಾದ ಪುರ್ಬಯಾನ್ ಚಕ್ರಬೊರ್ತಿ ಮನವಿ ಸಲ್ಲಿಸಿದ್ದಾರೆ.
ಇತರೆ ಕಾನೂನು ಕಾಲೇಜುಗಳಿಗೆ ಹೋಲಿಕೆ ಮಾಡಿದರೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ (ಎನ್‌ಎಲ್‌ಯು) ಪ್ರವೇಶ ಪರೀಕ್ಷೆ ಶುಲ್ಕವು ಹೆಚ್ಚಾಗಿದೆ. ಆರ್ಥಿಕವಾಗಿ ಸಬಲವಾಗಿರುವವರು ರಾಷ್ಟ್ರೀಯ ಕಾನೂನು ಶಾಲೆಗಳಲ್ಲಿ ಉನ್ನತ ವ್ಯಾಸಾಂಗ ಮಾಡಲಿದ್ದು, ಕಡಿಮೆ ಶುಲ್ಕದ ಹಿನ್ನೆಲೆಯಲ್ಲಿ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವವರ ನಡುವೆ ಅಧಿಸೂಚನೆಯು ತಾರತಮ್ಯ ಉಂಟು ಮಾಡಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
“ಸಿಎಲ್‌ಎಟಿ ಪ್ರವೇಶ ಪರೀಕ್ಷೆಯ ಶುಲ್ಕವು ₹4,000. ಜೆಎಜಿ ಪ್ರವೇಶಕ್ಕೆ ಕಾನೂನು ವಿದ್ಯಾರ್ಥಿಯು ಸರಿ ಸುಮಾರು 8 ಅವಕಾಶಗಳನ್ನು ಹೊಂದಿರುತ್ತಾರೆ. ಈಗ ಅಭ್ಯರ್ಥಿಯು ಸಿಎಲ್‌ಎಟಿ ಪ್ರವೇಶ ಪರೀಕ್ಷೆ ಬರೆದಿರಬೇಕು ಎಂಬ ಷರತ್ತು ವಿಧಿಸಿದರೆ, ಒಂದೊಮ್ಮೆ ಅಭ್ಯರ್ಥಿಯು ಜೆಎಜಿ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪಾಸಾಗದಿದ್ದರೆ ಅವರು ಮತ್ತೊಮ್ಮೆ ಸಿಎಲ್‌ಎಟಿಗೆ ಅರ್ಜಿ ಸಲ್ಲಿಸಬೇಕು. ಅಂದರೆ ಅವರು ಮತ್ತೊಮ್ಮೆ ₹4,000 ಪಾವತಿಸಬೇಕು” ಎಂದು ವಿವರಿಸಲಾಗಿದೆ.
ಎನ್‌ಎಲ್‌ಯುನಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಬಯಸುವವರ ಶೈಕ್ಷಣಿಕ ಜ್ಞಾನ ಪರಿಶೀಲಿಸಲು ಸಿಎಲ್‌ಎಟಿ ಪಿಜಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಇದನ್ನು ಅರ್ಹತಾ ಅಗತ್ಯವನ್ನಾಗಿ ಅಳವಡಿಸಿಕೊಳ್ಳುವುದು ಅಸಮರ್ಥನೀಯ ಮತ್ತು ಸ್ವೇಚ್ಛೆಯಾಗಿದೆ ಎಂದು ಹೇಳಲಾಗಿದೆ. ಸರ್ಕಾರವೇ ಸಂಸ್ಥೆಗಳಿಗೆ ಮಾನ್ಯತೆ ನೀಡಿರುವಾಗ ಎನ್‌ಎಲ್‌ಯು ಮತ್ತು ಎನ್‌ಎಲ್‌ಯುಯೇತರ ಎಂದು ತಾರತಮ್ಯ ಮಾಡಲಾಗದು ಎಂದು ವಿವರಿಸಲಾಗಿದೆ.
ಹೀಗಾಗಿ, ಆಕ್ಷೇಪಾರ್ಹ ಅಧಿಸೂಚನೆಯನ್ನು ವಜಾ ಮಾಡಿ, ಶೈಕ್ಷಣಿಕ ಶ್ರೇಷ್ಠತೆಯಂತಹ ಮಾನದಂಡದ ಆಧಾರದಲ್ಲಿ ಜೆಎಜಿ ಪರೀಕ್ಷೆ ನಡೆಸಲು ನಿರ್ದೇಶಿಸಬೇಕು ಎಂದು ಕೋರಲಾಗಿದೆ.