ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಗೆಳತಿ ವಿ ಕೆ ಶಶಿಕಲಾಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದ ತನಿಖೆ ವಿಳಂಬ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮನವಿಯನ್ನು ಗುರುವಾರ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಕೋಲಾರದ ಎ ಮುತ್ತು ಮಾಣಿಕ್ಯಂ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
“ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸುತ್ತಿರುವ ತನಿಖೆ ವಿಳಂಬವಾಗುತ್ತಿದೆ ಎಂದು ಆಕ್ಷೇಪಿಸಿ ತಮಿಳುನಾಡಿನ ಸಾಮಾಜಿಕ ಕಾರ್ಯಕರ್ತೆ ಕೆ.ಎಸ್. ಗೀತಾ ಸಲ್ಲಿಸಿದ್ದ ಅರ್ಜಿಯನ್ನು ಜುಲೈ 11ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, 2 ತಿಂಗಳಲ್ಲಿ ತನಿಖೆಯ ಅಂತಿಮ ವರದಿ ಸಲ್ಲಿಸುವಂತೆ ಎಸಿಬಿಗೆ ನಿರ್ದೇಶಿಸಿತ್ತು. ಇದೀಗ ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಪಿಐಎಲ್ ಸಲ್ಲಿಕೆಯಾಗಿದ್ದು, ಇದು ಕಾನೂನಿನ ದುರ್ಬಳಕೆಯಾಗಿದೆ” ಎಂದು ಅರ್ಜಿಯನ್ನು ವಜಾ ಮಾಡಿತು.
ವಿಚಾರಣೆಗೆ ಹಾಜರಿದ್ದ ಎಸಿಬಿ ಪರ ವಕೀಲ ಪಿ.ಎನ್. ಮನಮೋಹನ್ ಅವರು ಪ್ರಕರಣದ ತನಿಖೆಯ ಅಂತಿಮ ವರದಿ ಸಲ್ಲಿಸಲು ಜುಲೈ 11ರಂದು ಹೈಕೋರ್ಟ್ ಎಸಿಬಿಗೆ ಎರಡು ತಿಂಗಳು ಕಾಲಾವಕಾಶ ನೀಡಿತ್ತು. ಆ ಅವಧಿ ಪೂರ್ಣಗೊಂಡಿದ್ದು, ಕಾಲಾವಕಾಶ ವಿಸ್ತರಿಸಲು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ಜತೆಗೆ, ವರದಿ ಸಲ್ಲಿಸಲು ಸರ್ಕಾರದಿಂದ ಪೂರ್ವಾನುಮತಿ ಕೋರಲಾಗಿದ್ದು, ಸರ್ಕಾರದ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಎಸಿಬಿ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಮತ್ತೊಂದು ದಿನ ವಿಚಾರಣೆಗೆ ನಿಗದಿಪಡಿಸುವಂತೆ ನ್ಯಾಯಪೀಠ ರಿಜಿಸ್ಟ್ರಿಗೆ ಸೂಚಿಸಿತು.
ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಶಶಿಕಲಾ ಹಾಗೂ ಅವರ ಸಂಬಂಧಿ ಇಳವರಸಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಐಷಾರಾಮಿ ಸೌಲಭ್ಯಗಳನ್ನು ಒದಗಿಸಿದ ಆರೋಪ ಕೇಳಿಬಂದಿತ್ತು. ವಿಶೇಷ ಆತಿಥ್ಯ ಕಲ್ಪಿಸಲು ಜೈಲು ಅಧಿಕಾರಿಗಳು ಕೋಟ್ಯಂತರ ರೂಪಾಯಿ ಲಂಚ ಪಡೆದ ಆರೋಪವೂ ವ್ಯಕ್ತವಾಗಿತ್ತು. ಈ ಕುರಿತು ಹಿರಿಯ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಿ 295 ಪುಟಗಳ ಮಧ್ಯಂತರ ವರದಿ ಸಲ್ಲಿಸಿತ್ತು.