ಸಚಿವೆ ಜೊಲ್ಲೆ ಝೀರೋ ಟ್ರಾಫಿಕ್ ಪ್ರಕರಣ: ಪಿಐಎಲ್ ವಜಾಗೊಳಿಸಿದ ಹೈಕೋರ್ಟ್‌

ಆಡಳಿತಾತ್ಮಕ ಅಧಿಕಾರದ ದುರ್ಬಳಕೆ ಅಥವಾ ನಿಯಮ ಉಲ್ಲಂಘನೆಯಾಗಿರುವ ಬಗ್ಗೆ ಅರ್ಜಿದಾರರು ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ ಸರ್ಕಾರ.
ಸಚಿವೆ ಜೊಲ್ಲೆ ಝೀರೋ ಟ್ರಾಫಿಕ್ ಪ್ರಕರಣ: ಪಿಐಎಲ್ ವಜಾಗೊಳಿಸಿದ ಹೈಕೋರ್ಟ್‌
Shashikala Jolle and Karnataka HC

ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿಯಮ ಉಲ್ಲಂಘಿಸಿ ಹಾಲಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಝೀರೋ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್‌) ಕರ್ನಾಟಕ ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನದವರೆಗೆ ‘ಝೀರೋ ಟ್ರಾಫಿಕ್’ ವ್ಯವಸ್ಥೆ ಕಲ್ಪಿಸುವ ಮೂಲಕ ಸಚಿವೆ ಜೊಲ್ಲೆ ಅವರಿಗೆ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಅನುವು ಮಾಡಲಾಗಿತ್ತು ಎಂದು ಅಕ್ಷೇಪಿಸಿ ವಕೀಲ ಜಿ. ಬಾಲಾಜಿ ನಾಯ್ಡು ಎನ್ನುವರು ಸಲ್ಲಿಸಿದ್ದ ಪಿಐಎಲ್‌ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸುವುದಕ್ಕೂ ಮುನ್ನ ಅರ್ಜಿದಾರರು ಕ್ರಮಕ್ಕೆ ಕೋರಿ ಸಕ್ಷಮ ಪ್ರಾಧಿಕಾರವನ್ನು ಎಡತಾಕದ ಹಿನ್ನೆಲೆಯಲ್ಲಿ ಪಿಐಎಲ್‌ಅನ್ನೇ ಮನವಿಯೆಂದು ಪರಿಗಣಿಸುವಂತೆ ಈ ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ಅಲ್ಲದೆ, ಮನವಿಯ ಕುರಿತಾಗಿ ಕೈಗೊಂಡ ಕ್ರಮದ ಬಗ್ಗೆ ಮುಂದಿನ ವಿಚಾರಣೆ ಸಂದರ್ಭದಲ್ಲಿ ಮಾಹಿತಿ ನೀಡಲು ಸೂಚಿಸಿತ್ತು.

ಆಡಳಿತಾತ್ಮಕ ಅಧಿಕಾರ ದುರ್ಬಳಕೆಯ ಬಗ್ಗೆಯಾಗಲಿ, ಯಾವುದೇ ನಿಯಮ ಉಲ್ಲಂಘನೆಯಾಗಿರುವ ಬಗ್ಗೆಯಾಗಲಿ ಅರ್ಜಿದಾರರು ಸಾಕ್ಷ್ಯಾಧಾರಗಳನ್ನು ಒದಗಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಸರ್ಕಾರದ ಹೇಳಿಕೆಯನ್ನು ದಾಖಿಸಿಕೊಂಡ ಪೀಠವು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.

Related Stories

No stories found.
Kannada Bar & Bench
kannada.barandbench.com