ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನೀಡಿರುವ ಮಧ್ಯಂತರ ಜಾಮೀನನ್ನು ಒಂದು ವಾರ ಕಾಲ ವಿಸ್ತರಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ರಜಾಕಾಲೀನ ಪೀಠ ಮಂಗಳವಾರ ನಿರಾಕರಿಸಿದೆ.
ಈಗಾಗಲೇ ತೀರ್ಪು ಕಾಯ್ದಿರಿಸಿರುವ ಪ್ರಕರಣದಲ್ಲಿ ಜಾಮೀನು ವಿಸ್ತರಣೆಗೆ ಅರ್ಜಿ ಸಲ್ಲಿಸಿರುವುದರಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೇ (ಸಿಜೆಐ) ಈ ಬಗ್ಗೆ ನಿರ್ಧರಿಸಬೇಕು ಎಂದು ನ್ಯಾಯಮೂರ್ತಿ ಜೆ ಕೆ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ಅವರಿದ್ದ ಪೀಠ ಹೇಳಿದೆ.
ಜಾರಿ ನಿರ್ದೇಶನಾಲಯ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಕೇಜ್ರಿವಾಲ್ ಅವರು ಸಲ್ಲಿಸಿದ ಮನವಿಯ ತೀರ್ಪನ್ನು ಮೇ 17ರಂದು ಸುಪ್ರೀಂ ಕೋರ್ಟ್ ಕಾಯ್ದಿರಿಸಿತ್ತು.
“ಇದು ವಾದಗಳನ್ನು ಆಲಿಸಿ ತೀರ್ಪು ಕಾಯ್ದಿರಿಸಿದ ಪ್ರಕರಣವಾಗಿದ್ದು ನಾವು ಏನನ್ನೂ ಮಾಡಲಾಗದು. ಪ್ರಕರಣವನ್ನು ಮೇ 17 ರಂದು ಆಲಿಸಿ ತೀರ್ಪು ಕಾಯ್ದಿರಿಸಲಾಗಿದೆ. ಸೂಕ್ತ ಆದೇಶ ಪಡೆಯಲು ಸಿಜೆಐ ಎದುರು ಪ್ರಕರಣ ಇರಿಸಿ” ಎಂದು ನ್ಯಾಯಾಲಯ ಇಂದು ನುಡಿಯಿತು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರು ಜೂನ್ 1ರಂದು ಶರಣಾಗಬೇಕಿರುವುದರಿಂದ ತುರ್ತಾಗಿ ಪ್ರಕರಣದ ವಿಚಾರಣೆ ನಡೆಸುವಂತೆ ಕೇಜ್ರಿವಾಲ್ ಅವರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಕೇಳಿದ್ದರು.
ಕೇವಲ 7 ದಿನ ಜಾಮೀನು ವಿಸ್ತರಿಸುವಂತೆ ಕೋರಲಾಗಿದ್ದು ವೈದ್ಯಕೀಯ ಕಾರಣಗಳಿಗಾಗಿ ವಿಸ್ತರಣೆ ಕೋರುತ್ತಿದ್ದೇವೆ. ಸ್ವಾತಂತ್ರ್ಯದ ದುರುಪಯೋಗವಲ್ಲ ಎಂದು ಸಿಂಘ್ವಿ ಹೇಳಿದರು. ಆದರೆ ಈ ಬಗ್ಗೆ ಸಿಜೆಐ ಮಾತ್ರ ನಿರ್ಧಾರ ಕೈಗೊಳ್ಳಬಹುದು ಎಂದು ನ್ಯಾಯಾಲಯ ನುಡಿಯಿತು.
ಕಳೆದ ವಾರ ರಜಾಕಾಲೀನ ಪೀಠದ ನೇತೃತ್ವ ವಹಿಸಿದ್ದ ನ್ಯಾ. ದೀಪಂಕರ್ ದತ್ತಾ ಅವರೆದುರು ಅರ್ಜಿಯನ್ನು ಏಕೆ ಪ್ರಸ್ತಾಪಿಸಲಿಲ್ಲ ಎಂದು ಅದು ಪ್ರಶ್ನಿಸಿತು. ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದತ್ತಾ ಅವರಿದ್ದ ಪೀಠ ಕೇಜ್ರಿವಾಲ್ ಅವರಿಗೆ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿ ಮೇ 10ರಂದು ಆದೇಶಿಸಿತ್ತು.
ಆದರೆ ನಿನ್ನೆಯಷ್ಟೇ ವೈದ್ಯಕೀಯ ತಪಾಸಣೆಗೆ ವೈದ್ಯರು ಸಲಹೆ ನೀಡಿದ್ದಾರೆ ಆದ್ದರಿಂದ ಕಳೆದ ವಾರ ಮನವಿ ಮಾಡಲಾಗಲಿಲ್ಲ ಎಂದು ಸಿಂಘ್ವಿ ಉತ್ತರಿಸಿದರು.
ತುರ್ತು ವಿಚಾರಣೆ ಕುರಿತು ನಿರ್ಧರಿಸಲಾಗದು ಎಂದು ಪುನರುಚ್ಚರಿಸಿದ ಪೀಠ ಸೂಕ್ತ ಆದೇಶಕ್ಕಾಗಿ ಪ್ರಕರಣವನ್ನು ಸಿಜೆಐ ಅವರಿಗೆ ವರ್ಗಾಯಿಸಿತು.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ತಮಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯಕ್ಕೆಂದು ನೀಡಿರುವ ಮಧ್ಯಂತರ ಜಾಮೀನನ್ನು ವೈದ್ಯಕೀಯ ಕಾರಣಗಳಿಗಾಗಿ ಒಂದು ವಾರ ಕಾಲ ವಿಸ್ತರಿಸಬೇಕು ಎಂದು ಕೇಜ್ರಿವಾಲ್ ಈ ಹಿಂದೆ ಕೋರಿದ್ದರು.