ಪೂಜಾ ಸ್ಥಳ ಕಾಯಿದೆ ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕವಷ್ಟೇ ಕೇಂದ್ರ ಸರ್ಕಾರ ನಿಲುವು ತಳೆಯಬಲ್ಲದು ಎಂದು ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.
ಸರ್ಕಾರದೊಂದಿಗೆ ವಿವರವಾದ ಸಮಾಲೋಚನೆ ನಡೆಸಲು ಸಾಧ್ಯವಾಗದ ಕಾರಣ ಡಿಸೆಂಬರ್ ಮೊದಲ ವಾರದಲ್ಲಿ ಪ್ರಕರಣವನ್ನು ಪಟ್ಟಿ ಮಾಡುವಂತೆ ಎಸ್‌ಜಿ ನ್ಯಾಯಾಲಯವನ್ನು ಕೋರಿದರು.
ಇದಕ್ಕೆ ಸಮ್ಮತಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠ ಪ್ರತಿ-ಅಫಿಡವಿಟನ್ನು ಡಿಸೆಂಬರ್ 12ರ ಮೊದಲು ಸಲ್ಲಿಸಬೇಕು ಎಂದು ಸೂಚಿಸಿ ಪ್ರಕರಣವನ್ನು 2023ರ ಜನವರಿ ಮೊದಲ ವಾರಕ್ಕೆ ಮುಂದೂಡಿತು. ಪ್ರಕರಣವನ್ನು ತ್ರಿಸದಸ್ಯ ಪೀಠದ ಮುಂದೆ ಮಂಡಿಸುವಂತೆಯೂ ನ್ಯಾಯಾಲಯ ಸೂಚಿಸಿದೆ.
ರಾಮ ಜನ್ಮಭೂಮಿ ಆಂದೋಲನ ಉತ್ತುಂಗದಲ್ಲಿದ್ದಾಗ ಜಾರಿಗೆ ಬಂದ ಪೂಜಾ ಸ್ಥಳಗಳ (ವಿಶೇಷ ನಿಯಮಾವಳಿಗಳು) ಕಾಯಿದೆಯು ದೇಶದ ಸ್ವಾತಂತ್ರ್ಯ ಬಂದ ದಿನ, ಅಂದರೆ 1947ರ ಆಗಸ್ಟ್ 15ರಂತೆ ಯಾವ ಧಾರ್ಮಿಕ ಸ್ಥಳದಲ್ಲಿ ಯಾವ ಧರ್ಮದ ಆಚರಣೆ ಇತ್ತೋ, ಅದೇ ಆಚರಣೆ ಮುಂದೆಯೂ ನಿರಂತರವಾಗಿ ಮುಂದುವರೆಯಬೇಕು. ಅಂತಹ ಪೂಜಾ ಸ್ಥಳಗಳ ಸ್ವರೂಪದ ಬಗ್ಗೆ ವಿವಾದ ಎಬ್ಬಿಸುವ ಪ್ರಕರಣಗಳನ್ನು ನ್ಯಾಯಾಲಯಗಳು ಪುರಸ್ಕರಿಸದಂತೆ ನಿರ್ಬಂಧ ವಿಧಿಸುತ್ತದೆ. ಅಲ್ಲದೆ ನ್ಯಾಯಾಲಯಗಳಲ್ಲಿ ಈಗಾಗಲೇ ಬಾಕಿ ಇರುವ ಅಂತಹ ಪ್ರಕರಣಗಳನ್ನು ಕೈಬಿಡುವಂತೆ ಅದು ಹೇಳುತ್ತದೆ.
ಆದರೆ ಈ ಕಾನೂನು ರಾಮ ಜನ್ಮಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ವಿನಾಯಿತಿ ನೀಡಿತ್ತು. ಅಯೋಧ್ಯೆ ಭೂಮಿಗೆ ವಿನಾಯಿತಿ ನೀಡಿದ್ದರಿಂದ, ಅಯೋಧ್ಯೆಯಲ್ಲಿ ವಿವಾದಿತ ಸ್ಥಳವನ್ನು ಬಾಲ ದೈವ ರಾಮ್ ಲಲ್ಲಾಗೆ ನೀಡುವಾಗ ಸುಪ್ರೀಂ ಕೋರ್ಟ್ 2019ರಲ್ಲಿ ಈ ಕಾನೂನನ್ನು ಜಾರಿಗೆ ತಂದಿತ್ತು. ಆದರೆ ಕಾಯಿದೆಯ ದೃಷ್ಟಿಯಿಂದಾಗಿ ಇತರ ಜಾಗಗಳಿಗೆ ಸಂಬಂಧಿಸಿದ ಇಂತಹದ್ದೇ ವ್ಯಾಜ್ಯಗಳನ್ನು ಪರಿಗಣಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇದೇ ವೇಳೆ ಸ್ಪಷ್ಟಪಡಿಸಿತ್ತು.
ಹಿಂದೂ, ಜೈನ, ಬೌದ್ಧ ಹಾಗೂ ಸಿಖ್ಖರಿಗೆ ಕಾನೂನು ಪರಿಹಾರಗಳನ್ನು ನಿರ್ಬಂಧಿಸುವ ಮೂಲಕ ಆಕ್ರಮಣಕಾರರ ಕಾನೂನುಬಾಹಿರ ಕೃತ್ಯಗಳನ್ನು ಶಾಶ್ವತವಾಗಿ ಮುಂದುವರೆಸಲು ಕಾಯಿದೆ ಅವಕಾಶ ನೀಡುತ್ತದೆ ಎಂದು ಬಿಜೆಪಿ ವಕ್ತಾರ ಅಶ್ವಿನಿ ಕುಮಾರ್ ಉಪಾಧ್ಯಾಯ ತಮ್ಮ ಅರ್ಜಿಯಲ್ಲಿ ದೂರಿದ್ದರು. ರಾಮಜನ್ಮ ಭೂಮಿಗೆ ಮಾತ್ರ ಏಕೆ ವಿನಾಯಿತಿ ನೀಡಲಾಗಿದೆ ಕೃಷ್ಣ ಜನ್ಮಸ್ಥಾನದ ಕುರಿತ ವ್ಯಾಜ್ಯಕ್ಕೆ ಈ ವಿನಾಯಿತಿ ಯಾಕೆ ನೀಡುತ್ತಿಲ್ಲ ಎಂದು ಕೂಡ ಅವರು ಪ್ರಶ್ನಿಸಿದ್ದರು.