ಕರ್ನಾಟಕ ಹೈಕೋರ್ಟ್‌ನ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಅಶ್ಲೀಲ ವಿಡಿಯೊ ಹರಿಯಬಿಟ್ಟು ಕಲಾಪಕ್ಕೆ ಅಡ್ಡಿಪಡಿಸಿದ ಮಾದರಿಯಲ್ಲಿಯೇ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣದ (ಕೆಎಸ್‌ಎಟಿ) ವಿಡಿಯೊ ಕಾನ್ಫರೆನ್ಸ್‌ಗೂ ಅಡಚಣೆ ಉಂಟು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕಳೆದ ಶನಿವಾರ ಕೆಎಸ್‌ಎಟಿ ಕಲಾಪ ನಡೆಯುತ್ತಿದ್ದಾಗ ಆಕ್ಷೇಪಾರ್ಹ ವಿಡಿಯೊ ಮತ್ತು ಫೋಟೊಗಳು ಕಂಡು ಬಂದಿವೆ. ಈ ಕುರಿತು ಕೆಎಸ್‌ಎಟಿಯ ನ್ಯಾಯಾಂಗ ಅಧಿಕಾರಿ ವಿನೀತಾ ಪಿ.ಶೆಟ್ಟಿ ಅವರು ಸೆಂಟ್ರಲ್ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅನಾಮಧೇಯ ವ್ಯಕ್ತಿಯೊಬ್ಬರು ವಿಡಿಯೊ ಕಾನ್ಫರೆನ್ಸ್‌ಗೆ ಲಾಗಿನ್ ಆಗಿ ಆಕ್ಷೇಪಾರ್ಹ ವಿಡಿಯೊ ಹಾಗೂ ಫೋಟೊಗಳನ್ನು ಅಪ್‌ಲೋಡ್ ಮಾಡಿದ್ದರು. ಇದರಿಂದಾಗಿ ಆನ್ ಲೈನ್ ಕಲಾಪದಲ್ಲಿ ವ್ಯತ್ಯಯವಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಅನಾಮಧೇಯರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದರಿಂದಾಗಿ ವಿಡಿಯೊ ಕಾನ್ಫರೆನ್ಸ್ ವ್ಯವಸ್ಥೆ ಮತ್ತೆ ಆರಂಭಿಸುವವರೆಗೆ ವಕೀಲರು ಭೌತಿಕವಾಗಿಯೇ ನ್ಯಾಯಾಧಿಕರಣದ ಕಲಾಪಕ್ಕೆ ಆಗಮಿಸುವಂತೆ ವಕೀಲರಿಗೆ ಸೂಚಿಸಲಾಗಿದೆ.
ಡಿಸೆಂಬರ್ 5ರಂದು ಹೈಕೋರ್ಟ್‌ನ ಹಲವು ಪೀಠಗಳ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಅಶ್ಲೀಲ ಚಿತ್ರ ಪ್ರದರ್ಶಿಸುವ ಮೂಲಕ ಕಲಾಪಕ್ಕೆ ಅಡ್ಡಿ ಉಂಟು ಮಾಡಲಾಗಿತ್ತು. ಸೈಬರ್ ಸುರಕ್ಷತಾ ಕ್ರಮಕೈಗೊಂಡು ಡಿಸೆಂಬರ್ 11ರಿಂದ ವಿಡಿಯೊ ಕಾನ್ಫರೆನ್ಸ್ ಪುನಾರಂಭಿಸಲಾಗಿದೆ.