ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ)ಗೆ ಚುನಾವಣೆ ನಡೆಸುವುದು ಬೇಡ, ಸರ್ಕಾರ, ರಾಜ್ಯ ಚುನಾವಣಾ ಆಯೋಗ ಹಾಗೂ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಸೇರಿ ತಮ್ಮನ್ನೇ ಮಧ್ಯಂತರ ಮೇಯರ್ ಆಗಿ ಕಾರ್ಯನಿರ್ವಹಿಸಲು ಒಪ್ಪುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ವ್ಯಕ್ತಿಯೊಬ್ಬ ಕರ್ನಾಟಕ ಹೈಕೋರ್ಟ್‌ಗೆ ವಿಚಿತ್ರವಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಬಿಬಿಎಂಪಿಯ ತಂದೆ ಎಂದು ಘೋಷಿಸಿಕೊಂಡಿರುವ ನಗರದ ಲ್ಯಾವೆಲ್ಲೆ ರಸ್ತೆಯ ನಿವಾಸಿ 66 ವರ್ಷದ ಮುರಳಿ ಕೃಷ್ಣ ಬ್ರಹ್ಮಾನಂದಂ 2022ರಲ್ಲಿ ಸಲ್ಲಿಸಿರುವ ಪಿಐಎಲ್ ಇಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಅರ್ಜಿಯನ್ನು ವಿಚಾರಣೆಗೆ ಕರೆದಾಗ ಅರ್ಜಿದಾರರು ಹಾಜರಿರಲಿಲ್ಲ. ಅಂತೆಯೇ ಹಿಂದಿನ ಯಾವ ವಿಚಾರಣೆಗೂ ಅರ್ಜಿದಾರ ಹಾಜರಾಗಿರಲಿಲ್ಲ. ಮಂಗಳವಾರ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಅರ್ಜಿಯಲ್ಲಿನ ಅಂಶಗಳು ಮತ್ತು ಮನವಿ ಅಸಂಬಂದ್ಧವಾಗಿದ್ದು, ಅರ್ಜಿಯನ್ನು ವಿಚಾರಣೆಗೆ ಪರಿಗಣಿಸದೆ ವಜಾಗೊಳಿಸಬೇಕು ಎಂದು ಮನವಿ ಮಾಡಿದರು.
ಅದಕ್ಕೆ ಪೀಠವು “ಇಲ್ಲ, ಅರ್ಜಿ ವಜಾ ಮಾಡುವುದಿಲ್ಲ, ಅರ್ಜಿ ಸಲ್ಲಿಸಿದ ಮಹಾನುಭಾವ ಯಾರು ಎಂದು ನೋಡಬೇಕಿದೆ” ಎಂದು ಹೇಳಿ ವಿಚಾರಣೆ ಮುಂದೂಡಿತು.
ಬಿಬಿಎಂಪಿ ಚುನಾವಣೆ ವಿಳಂಬವಾಗಿರುವುದು, ವಾರ್ಡ್ ಮರುವಿಂಗಡಣೆ, ಬಿಬಿಎಂಪಿ ಕಾಯಿದೆ 2020 ಇದೆಲ್ಲವೂ ಅವೈಜ್ಞಾನಿಕವಾಗಿದೆ ಎಂದು ದೂರಿರುವ ಅರ್ಜಿದಾರರು ಅರ್ಜಿಯಲ್ಲಿನ ಅಂಶಗಳನ್ನು ಗಮನಿಸಿದರೆ ಬಿಬಿಎಂಪಿಯನ್ನು ಮಹಿಳೆ ಎಂದು ಪರಿಗಣಿಸಿ ಆಕೆಗೆ ನ್ಯಾಯ ಸಿಗಬೇಕು ಎಂದಿದ್ದಾರೆ.
ಬಿಬಿಎಂಪಿಗೆ ನೇರವಾಗಿ ಜನರಿಂದ ಮೇಯರ್ ಆಯ್ಕೆ ಮಾಡಬೇಕು ಎಂಬ ಬೇಡಿಕೆ 2018ರಲ್ಲಿ ಸಾರ್ವಜನಿಕರಿಂದ ಬಂದಿತ್ತು. ಬಿಬಿಎಂಪಿ, ಬಿಎಂಟಿಸಿ, ಬಿಎಂಆರ್‌ಸಿಎಲ್, ಬಿಡಬ್ಲ್ಯುಎಸ್‌ಎಸ್‌ಬಿ ಮತ್ತಿತರ ಸಂಸ್ಥೆಗಳ ಕಾರ್ಯವ್ಯಾಪ್ತಿಯನ್ನು ಮೇಯರ್ ಹೊಂದಿರಬೇಕು. ಬೆಂಗಳೂರು ಅಭಿವೃದ್ಧಿ ಸಚಿವ ಅನ್ನುವುದು ಅಸಾಂವಿಧಾನಿಕ. ಅದು ಒಂದು ರೀತಿಯಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ʼಕರ್ನಾಟಕದ ಸಚಿವʼ ಎಂಬಂತಾಗಲಿದೆ. ನನ್ನ ಮನವಿ ಅಸ್ಪಷ್ಟವೂ ಅಲ್ಲ, ಅವೈಜ್ಞಾನಿಕವೂ ಅಲ್ಲ, ಕಾನೂನುಬಾಹಿರವೂ ಅಲ್ಲ, ದುರದ್ದೇಶಪೂರಿತವೂ ಅಲ್ಲ. ಆದ್ದರಿಂದ, ಬಿಬಿಎಂಪಿಗೆ ಚುನಾವಣೆ ನಡೆಸಬಾರದು ಎಂದು ಸರ್ಕಾರ, ಚುನಾವಣಾ ಆಯೋಗ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡಬೇಕು. ಸರ್ಕಾರ ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಸೇರಿ ತಮ್ಮನ್ನು ಮಧ್ಯಂತರ ಮೇಯರ್ ಆಗಿ ಕಾರ್ಯನಿರ್ವಹಿಸುವಂತೆ ಮಾಡಲು ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
2023ರ ವಿಧಾನಸಭೆ ಚುನಾವಣೆ ವೇಳೆ ಇಂತಹದ್ದೇ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು ವಿಧಾನಸಭೆ ಚುನಾವಣೆ ನಡೆಸದೆ, ತಮ್ಮನ್ನೇ ಕರ್ನಾಟಕ ಪ್ರತಿನಿಧಿಯನ್ನಾಗಿ ನೇಮಕ ಮಾಡುವಂತೆ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದರು. ಆ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.