ಮಕ್ಕಳ ಸುನ್ನತಿ ನಿಷೇಧಿಸಲು ಕೋರಿ ಕೇರಳ ಹೈಕೋರ್ಟ್‌ಗೆ ಅರ್ಜಿ: ಜಾಮೀನು ರಹಿತ ಅಪರಾಧ ಎಂದು ಘೋಷಿಸಲು ಮನವಿ

ಸುನ್ನತಿ ಅಗತ್ಯ ಧಾರ್ಮಿಕ ಆಚರಣೆಯಲ್ಲ ಹಾಗೂ ಇದು ಹಲವು ಬಗೆಯ ದೈಹಿಕ, ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವಾದಿಸಿರುವ ಅರ್ಜಿದಾರರು.
Kerala High Court
Kerala High Court
Published on

ಪೋಷಕರ ಇಚ್ಛೆಯಂತೆ ಮಕ್ಕಳಿಗೆ ಮಾಡಲಾಗುವ ಚಿಕಿತ್ಸಕವಲ್ಲದ ಸುನ್ನತಿ ಆಚರಣೆಯನ್ನು ನಿಷೇಧಿಸಲು ಹಾಗೂ ಅದನ್ನು ಕಾನೂನುಬಾಹಿರವೆಂದೂ ಜಾಮೀನುರಹಿತ ಅಪರಾಧವೆಂದೂ ಘೋಷಿಸುವಂತೆ ಕೋರಿ ಫೆಬ್ರವರಿ 6 ರಂದು ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ [ನಾನ್‌ ರಿಲಿಜಯಸ್‌ ಸಿಟಿಜನ್ಸ್‌ ಮತ್ತಿತರರು ಹಾಗೂ ಭಾರತ ಒಕ್ಕೂಟ ನಡುವಣ ಪ್ರಕರಣ].

ಮಕ್ಕಳಿಗೆ 18 ವರ್ಷಕ್ಕಿಂತ ಮುಂಚೆಯೇ ಸುನ್ನತಿ ಮಾಡಿಸುವುದು ಅವರ ಮೂಲಭೂತ ಹಕ್ಕುಗಳ ಮತ್ತು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ನೋಂದಾಯಿತ ಸಾಂಸ್ಕೃತಿಕ ಸಂಘಟನೆಯಾದ ನಾನ್‌ ರಿಲಿಜಯಸ್‌ ಸಿಟಿಜನ್ಸ್‌ ತಿಳಿಸಿದೆ.

ಶಿಶ್ನದ ತುದಿ ಭಾಗದಲ್ಲಿರುವ ಮುಂದೊಗಲನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕುವುದಕ್ಕೆ ಸುನ್ನತಿ ಎನ್ನುತ್ತಾರೆ. ಇದು ಧಾರ್ಮಿಕ ವಿಧಿಗಳಲ್ಲಿ ಬೇರುಗಳನ್ನು ಒಳಗೊಂಡ ಪುರಾತನ ಆಚರಣೆಯಾಗಿದೆ. ಇಸ್ಲಾಂ,  ಸೇರಿದಂತೆ ವಿವಿಧ ಸೆಮೆಟಿಕ್‌* ಧರ್ಮಗಳ ಅನುಯಾಯಿಗಳು ಕಡ್ಡಾಯವಾಗಿ ಇದನ್ನು ಪಾಲಿಸುತ್ತಾರೆ.

ಅರ್ಜಿಯ ಪ್ರಮುಖಾಂಶಗಳು

  • ಮಕ್ಕಳಿಗೆ ಸುನ್ನತಿ ಮಾಡುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಅವರಿಗೆ ಆಘಾತ ಉಂಟಾಗುತ್ತದೆ.

  • ಚಿಕ್ಕಂದಿನಲ್ಲಿ ಉಂಟಾಗುವ ಈ ಆಘಾತದಿಂದಾಗಿ ಬಾಂಧವ್ಯದಲ್ಲಿ ಸಮಸ್ಯೆಗಳು ಮೂಡಬಹುದು, ಅರಿವು, ಗ್ರಹಿಕೆಗಳ ವಿಸ್ತರಣೆಯಲ್ಲಿ ವಿಳಂಬಕ್ಕೆ ಹಾಗೂ ಭಾವನಾತ್ಮಕ ನಿಯಂತ್ರಣದ ಕೊರತೆಗೆ ಕಾರಣವಾಗಬಹುದು.

  • ವಿಶ್ವಸಂಸ್ಥೆಯ ಅಧಿವೇಶನಗಳು ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಅಧಿವೇಶನಗಳಲ್ಲಿ ಮಕ್ಕಳ ಹಕ್ಕುಗಳ ಕುರಿತಾಗಿ ಭಾರತವು ಸಹಿ ಹಾಕಿರುವ ಸಾಮಾಜಿಕ ಮತ್ತು ರಾಜಕೀಯ ಒಪ್ಪಂದಗಳಿಗೆ ಇದು ವಿರುದ್ಧ.

  • ಮಕ್ಕಳ ಪೋಷಕರು ತೆಗೆದುಕೊಳ್ಳುವ ಏಕಪಕ್ಷೀಯ ನಿರ್ಧಾರದಿಂದ ಬಾಲಕರಿಗೆ ಕಡ್ಡಾಯ ಸುನ್ನತಿ ಮಾಡಲಾಗುತ್ತದೆ.

  • ಸುನ್ನತಿ ಅಗತ್ಯ ಧಾರ್ಮಿಕ ಆಚರಣೆಯಲ್ಲ

  • ವಿವಿಧ ಹೆಸರಾಂತ ಅಂತರರಾಷ್ಟ್ರೀಯ ವೈದ್ಯಕೀಯ ನಿಯತಕಾಲಿಕಗಳು ಹೇಳಿರುವಂತೆ, ಸುನ್ನತಿಯು ಲೈಂಗಿಕ ಕ್ರಿಯಾ ಸಾಮರ್ಥ್ಯದ ನಷ್ಟಕ್ಕೆ ಕಾರಣವಾಗಬಹುದು. ಇದರಿಂದ ಲೈಂಗಿಕ ಉನ್ಮಾದದ ವಿಳಂಬ ಉಂಟಾಗುವ ಅಪಾಯ ಹೆಚ್ಚು. ಸಂಗಾತಿಯು ಲೈಂಗಿಕ ತೃಪ್ತಿ ಹೊಂದದಿರಬಹುದು.

  • ಕೇರಳದ ವದನಪಲ್ಲಿಯಲ್ಲಿ ಸುನ್ನತಿಯಿಂದಾಗಿ ಬಾಲಕನೊಬ್ಬ ಮೃತಪಟ್ಟಿದ್ದು ಇದು ಮಕ್ಕಳಿಗೆ ಅಪಾಯಕಾರಿಯಾದುದು.

  • ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಪ್ರತಿಪಾದಿಸಲಾದ ಮಕ್ಕಳ ಮೂಲಭೂತ ಹಕ್ಕನ್ನು ಅಂದರೆ "ಜೀವನದ ಹಕ್ಕನ್ನು" ಉಲ್ಲಂಘಿಸುವುದರಿಂದ ಬಾಲಕರಿಗೆ ಮಾಡುವ ಸುನ್ನತಿ ಕ್ರೂರವೂ, ಅಮಾನವೀಯ ಹಾಗೂ ಅನಾಗರಿಕವಾದುದು.

  • ಮಗು ಒಪ್ಪಿಗೆ ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳುವ ಮುನ್ನ ಪೋಷಕರು ಮಗುವಿಗೆ ಸುನ್ನತಿ ಮಾಡಿಸಿಕೊಳ್ಳುವಂತೆ ಧಾರ್ಮಿಕ ನಂಬಿಕೆ ಹೇರುವಂತಿಲ್ಲ.

  • ಚಿತ್ರಹಿಂಸೆಯನ್ನು ಮಾಡುವಂತಹ ಅಥವಾ ಜನನಾಂಗ ಊನಗೊಳಿಸುವಂತಹ ಅಮಾನವೀಯ ವರ್ತನೆಗಳನ್ನು ತಡೆಯುವ ತಮ್ಮ ಕರ್ತವ್ಯದಲ್ಲಿ ಪೋಷಕರು ವಿಫಲವಾದಾಗ ಸರ್ಕಾರ ಮಧ್ಯಪ್ರವೇಶಿಸುವುದು ಅನಿವಾರ್ಯವಾಗುತ್ತದೆ. ಸಂವಿಧಾನದ ರಕ್ಷಕರಾಗಿ ಮಕ್ಕಳ ಹಕ್ಕುಗಳಿಗೆ ರಕ್ಷಣೆ ನೀಡುವಲ್ಲಿ ಪ್ರಭುತ್ವ ವಿಫಲವಾದರೆ ಸಾಂವಿಧಾನಿಕ ನ್ಯಾಯಾಲಯಗಳು ಅಂತಹ ಪ್ರಕರಣಗಳಲ್ಲಿ ಮಧ್ಯಪ್ರವೇಶಿಸಲು ಬದ್ಧವಾಗಿರಬೇಕು.

  • ಆದ್ದರಿಂದ, ಚಿಕಿತ್ಸಕವಲ್ಲದ ಸುನ್ನತಿಯನ್ನು ಕಾನೂನುಬಾಹಿರ ಎಂದು ಘೋಷಿಸಲು ಅರ್ಜಿದಾರರು ನ್ಯಾಯಾಲಯಕ್ಕೆ ನಿರ್ದೇಶನ ನೀಡಬೇಕು.

  • ಮಕ್ಕಳ ಸುನ್ನತಿಯನ್ನು ನಿಷೇಧಿಸುವ ಕಾನೂನನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು.

Kannada Bar & Bench
kannada.barandbench.com