ಕೇರಳದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ನಿಯಂತ್ರಣ ಹೇರುವಂತೆ ಕೋರಿ ಕೇರಳ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಕೆಯಾಗಿದೆ [ವಕೀಲ ವಿಜಯನ್ ಕೆ ವಿ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].
ರಾಹುಲ್ ಮತ್ತು ಕಾಂಗ್ರೆಸ್ ನೇತಾರರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶದೆಲ್ಲೆಡೆ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಗೆ ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಚಾಲನೆ ನೀಡಲಾಗಿತ್ತು. ಯಾತ್ರೆ ಮಾರ್ಚ್ 10ರಂದು ಕೇರಳ ಪ್ರವೇಶಿಸಿದ್ದು ಉತ್ತರಾಭಿಮುಖವಾಗಿ ಸಾಗುತ್ತಿದೆ.
ಯಾತ್ರೆಯಿಂದಾಗಿ ಟ್ರಾಫಿಕ್ ಜಾಮ್ ಮತ್ತು ಪ್ರಮುಖ ರಸ್ತೆಗಳಲ್ಲಿ ಉಂಟಾಗುವ ಅನಾನುಕೂಲತೆಯ ಕಾರಣಕ್ಕೆ ಮೆರವಣಿಗೆಯನ್ನು ನಿಯಂತ್ರಿಸುವಂತೆ ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೂ ಆಗಿರುವ ವಕೀಲ ವಿಜಯನ್ ಕೆ ಮನವಿ ಮಾಡಿದ್ದಾರೆ.
ಯಾತ್ರೆ ಪೂರ್ಣ ರಸ್ತೆಯನ್ನು ಆಕ್ರಮಿಸಿಕೊಳ್ಳುತ್ತಿದ್ದು ಗಂಟೆಗಳ ಕಾಲ ಸಂಚಾರ ನಿರ್ಬಂಧಿಸಲಾಗುತ್ತಿದೆ. ಪಾದಚಾರಿಗಳಿಗೂ ಇದರಿಂದ ತೊಂದರೆ ಉಂಟಾಗಿದೆ ಎಂದು ಮನವಿ ವಿವರಿಸಿದೆ.
ಹೀಗಾಗಿ ಯಾತ್ರೆಯಲ್ಲಿ ಭಾಗವಹಿಸುವವರು ಅರ್ಧದಷ್ಟು ರಸ್ತೆಯನ್ನು ಬಳಸಿ ಉಳಿದರ್ಧವನ್ನು ವಾಹನ ಹಾಗೂ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಬಿಟ್ಟುಕೊಡುವಂತೆ ನ್ಯಾಯಾಲಯ ಆದೇಶಿಸಬೇಕಿದೆ ಎಂಬುದಾಗಿ ಅರ್ಜಿ ಕೋರಿದೆ.
ಯಾತ್ರೆಯಿಂದ ಉಂಟಾಗುತ್ತಿರುವ ತೊಂದರೆಯ ಬಗ್ಗೆ ತಾವು ಇದಾಗಲೇ ರಾಜ್ಯ ಪೊಲೀಸ್‌ನ ಕೇಂದ್ರ ಕಚೇರಿಗೆ ಪತ್ರ ಬರೆದಿದ್ದು ಸಾಮಾನ್ಯ ಜನತೆ ಇದರಿಂದ ಎದುರಿಸುತ್ತಿರುವ ತೊಂದರೆಯನ್ನು ನೀಗಿಸಲು ಕೋರಿದ್ದಾಗಿ ಅರ್ಜಿದಾರರು ಹೇಳಿದ್ದಾರೆ. ಮುಂದುವರೆದು, ಯಾತ್ರೆಗೆ ಬಂದೋಬಸ್ತ್ ನೀಡಲು ಪೊಲೀಸರನ್ನು ಒದಗಿಸಿರುವುದಕ್ಕೆ ಶುಲ್ಕವನ್ನು ಪಡೆಯಬೇಕಾಗುತ್ತದೆ ಎಂದೂ ಮನವಿಯಲ್ಲಿ ಹೇಳಲಾಗಿದೆ.