ಕುತುಬ್‌ ಮಿನಾರ್‌ ಸಂಕೀರ್ಣದಲ್ಲಿ 27 ಹಿಂದೂ, ಜೈನ ದೇವಾಲಯ; ದೇವರ ಮರು ಪ್ರತಿಷ್ಠಾಪನೆ, ಪೂಜೆಗೆ ಮನವಿ ಸಲ್ಲಿಕೆ

ಟ್ರಸ್ಟ್‌ ಸ್ಥಾಪಿಸಿ, ದೇವಾಲಯ ಸಂಕೀರ್ಣದ ನಿರ್ವಹಣೆ ಮತ್ತು ಆಡಳಿತವನ್ನು ಆ ಟ್ರಸ್ಟ್‌ಗೆ ವರ್ಗಾಯಿಸುವಂತೆ ದೆಹಲಿ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಮನವಿಯಲ್ಲಿ ಕೋರಲಾಗಿದೆ.
ಕುತುಬ್‌ ಮಿನಾರ್‌ ಸಂಕೀರ್ಣದಲ್ಲಿ 27 ಹಿಂದೂ, ಜೈನ ದೇವಾಲಯ; ದೇವರ ಮರು ಪ್ರತಿಷ್ಠಾಪನೆ, ಪೂಜೆಗೆ ಮನವಿ ಸಲ್ಲಿಕೆ
Qutub Minar

ಪ್ರಖ್ಯಾತ ಕುತುಬ್‌ ಮಿನಾರ್‌ ಅನ್ನು ಒಳಗೊಳ್ಳುವ ದಕ್ಷಿಣ ದೆಹಲಿಯ ಕುತುಬ್‌ ಸಂಕೀರ್ಣವು ಮೂಲತಃ ಅತ್ಯುನ್ನತವಾದ ಇಪ್ಪತ್ತೇಳು ಪ್ರತಿಷ್ಠಿತ ಹಿಂದೂ ಮತ್ತು ಜೈನ ದೇವಾಲಯಗಳನ್ನು ಒಳಗೊಂಡಿತ್ತು. ಕುತ್ಬ್‌-ಉದ್‌-ದಿನ್‌-ಐಬಕ್‌ 12ನೇ ಶತಮಾನದಲ್ಲಿ ಅವುಗಳನ್ನು ನಾಶಪಡಿಸಿ, ಹಾಲಿ ಇರುವ ರಚನೆಗಳನ್ನು ನಿರ್ಮಿಸಿದ್ದಾನೆ ಎಂದು ದೆಹಲಿಯ ಸಿವಿಲ್‌ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.

ವಿಷ್ಣು ಮತ್ತು ರಿಷಭ್‌ ದೇವರ ಪರವಾಗಿ ವಾದಮಿತ್ರ ವಕೀಲರಾದ ಹರಿಶಂಕರ್‌ ಜೈನ್‌ ಮತ್ತು ರಂಜನಾ ಅಗ್ನಿಹೋತ್ರಿ ಅವರು ದೈವಗಳ ಮರುಪ್ರತಿಷ್ಠಾಪನೆ, ಪೂಜಾ ಕೈಂಕರ್ಯ ಮತ್ತು ದೇವರ ದರ್ಶನ ಪಡೆಯುವ ಹಕ್ಕು ಕೋರಿ ಮನವಿ ಸಲ್ಲಿಸಿದ್ದಾರೆ.

ಪೂಜಾ ಕೈಂಕರ್ಯ ಕೈಗೊಳ್ಳಲು, ಆರಾಧನೆ ಮತ್ತು ಆಸ್ತಿಯ ನಿರ್ವಹಣೆಗಾಗಿ ಟ್ರಸ್ಟ್‌ ಸ್ಥಾಪಿಸುವಂತೆ ಫಿರ್ಯಾದುದಾರರು ಕೋರಿದ್ದಾರೆ. “ಪ್ರಮುಖ ದೇವರುಗಳಾದ ತೀರ್ಥಂಕರ, ರಿಷಭ್‌ ದೇವ್‌, ವಿಷ್ಣು, ಗಣೇಶ, ಶಿವ, ಗೌರಿ, ಸೂರ್ಯದೇವ, ಹನುಮ ಸೇರಿದಂತೆ 27 ದೇವಾಲಯಗಳನ್ನು ನಿರ್ದಿಷ್ಟ ಸ್ಥಳ ಹೊಂದಿದ್ದು, ಅವುಗಳನ್ನು ಮರುಪ್ರತಿಷ್ಠಾಪಿಸುವುದು, ವಿಧಿ-ವಿಧಾನಗಳ ಮೂಲಕ ದಿನನಿತ್ಯ ಪೂಜೆ ನಡೆಸಲು ದಕ್ಷಿಣ ದೆಹಲಿ ಜಿಲ್ಲೆಯ ಮೆಹ್ರೂಲಿ ವ್ಯಾಪ್ತಿಯ ಕುತುಬ್‌ ಸಂಕೀರ್ಣದಲ್ಲಿ ನಡೆಸಲು ಆದೇಶಿಸಬೇಕು” ಎಂದು ಕೋರಲಾಗಿದೆ.

ಅಗತ್ಯ ದುರಸ್ತಿ ಕೆಲಸ, ನಿರ್ಮಾಣ ಕಾಮಗಾರಿಗಳಲ್ಲಿ ಹಾಗೂ ಪೂಜೆ, ದರ್ಶನ ಮತ್ತು ದೇವರ ಅರ್ಚನೆ ಮಾಡುವ ಸಿದ್ಧತೆಗಳಲ್ಲಿ ಶಾಶ್ವತವಾಗಿ ಮಧ್ಯಪ್ರವೇಶಿಸದಂತೆ ಕೇಂದ್ರ ಸರ್ಕಾರ (ಸಂಸ್ಕೃತಿ ಇಲಾಖೆ) ಮತ್ತು ಭಾರತೀಯ ಪ್ರಾಚ್ಯವಸ್ತು ಇಲಾಖೆಯನ್ನು ಶಾಶ್ವತವಾಗಿ ನಿರ್ಬಂಧಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಕ್ರಿ.ಶ. 1192ರಲ್ಲಿ ಹಿಂದೂ ದೊರೆ ಪೃಥ್ವಿರಾಜ್‌ ಚೌಹಾಣ್‌ ಅವರನ್ನು ಮೊಹಮ್ಮದ್‌ ಘೋರಿ ಸೋಲಿಸುವವರೆಗೆ ಜನಪ್ರಿಯ ಹಿಂದೂ ದೊರೆಗಳು ದೆಹಲಿಯಲ್ಲಿ ಆಳ್ವಿಕೆ ನಡೆಸಿದ್ದರು ಎಂದು ಸಾಕೇತ್‌ ಜಿಲ್ಲೆಯ ಹಿರಿಯ ವಿಭಾಗದ ಸಿವಿಲ್‌ ನ್ಯಾಯಾಧೀಶರ ಮುಂದೆ ವಕೀಲರಾದ ಹರಿ ಶಂಕರ್‌ ಜೈನ್‌ ಮತ್ತು ರಂಜನಾ‌ ಅಗ್ನಿಹೋತ್ರಿ ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

“ಮೊಹಮ್ಮದ್‌ ಘೋರಿಯ ಕಮಾಂಡರ್‌ ಆದ ಕುತುಬ್‌ದಿನ್‌ ಐಬಕ್‌ ವಿಷ್ಣು ಹರಿ ದೇವಾಲಯ ಸೇರಿದಂತೆ 27 ಜೈನ ಮತ್ತು ಹಿಂದೂ ದೇವಾಲಯಗಳನ್ನು ನಾಶಪಡಿಸಿದ್ದ. ಅಲ್ಲದೇ ದೇವಾಲಯದ ಸಂಕೀರ್ಣದ ಒಳಗೆ ಕೆಲವು ಕಟ್ಟಡಗಳನ್ನು ನಿರ್ಮಿಸಿದ್ದಾನೆ. ದೇವಸ್ಥಾನ ಸಂಕೀರ್ಣವನ್ನು ಅರೇಬಿಕ್‌ ಭಾಷೆಯಲ್ಲಿ ಕುವ್ವತ್‌ ಉಲ್‌ ಇಸ್ಲಾಮ್‌ ಮಸೀದಿ ಎಂದು ಮರುನಾಮಕರಣ ಮಾಡಿದ್ದು, ಇದರ ಅರ್ಥ ʼಇಸ್ಲಾಂ ಶಕ್ತಿʼ ಎಂಬುದಾಗಿದೆ ಎಂದು ವಿವರಿಸಲಾಗಿದೆ.

ಮೆಹ್ರೂಲಿಯಲ್ಲಿರುವ ಸಂಕೀರ್ಣವನ್ನು ʼಸಂರಕ್ಷಿತ ಸ್ಮಾರಕʼ ಎಂದು ಸರ್ಕಾರವು ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯಿದೆ-1904ರ ಸೆಕ್ಷನ್‌ 3 ರ ಅಡಿ ಘೋಷಿಸಿದೆ. “ದೇಶದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಸಂರಕ್ಷಿಸುವ ಉದ್ದೇಶದಿಂದ ಹಾಗೂ ಸಂವಿಧಾನದ 25 ಮತ್ತು 26ನೇ ವಿಧಿಯ ಅಡಿ ಖಾತರಿಪಡಿಸಲಾಗಿರುವ ಧಾರ್ಮಿಕ ಹಕ್ಕನ್ನು ಚಲಾಯಿಸಬೇಕು” ಎಂದು 27 ಹಿಂದೂ ಮತ್ತು ಜೈನ ದೇವಾಲಯಗಳ ಮರು ಸ್ಥಾಪಿಸುವಂತೆ ಫಿರ್ಯಾದುದಾರರು ಕೋರಿದ್ದಾರೆ.

Qutub Minar
[ಬ್ರೇಕಿಂಗ್] ಕೃಷ್ಣ ಜನ್ಮಭೂಮಿಯಲ್ಲಿ ಈದ್ಗಾ ಮಸೀದಿ ತೆರವು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಳಿಸಿದ ಮಥುರಾ ನ್ಯಾಯಾಲಯ

“ಕಟ್ಟಡದ ಹೊರ ಮತ್ತು ಒಳಗಿನ ಸಂರಚನೆಯು ಹಿಂದೂ ಮತ್ತು ಜೈನ ದೇವಾಲಯಕ್ಕೆ ಹೋಲುವಂತಿದೆ. ಕಾರಿಡಾರ್ ಸಂಪೂರ್ಣವಾಗಿ ಪವಿತ್ರವಾದ ಕೆತ್ತಿದ ಕಂಬಗಳನ್ನು ಒಳಗೊಂಡಿದ್ದು, ಆಯತಾಕಾರದ ಗ್ಯಾಲರಿಗಳನ್ನು ಹೊಂದಿರುವ ವೈದಿಕ ಶೈಲಿಯಲ್ಲಿದೆ. ಆಕ್ರಮಣಕಾರರು ಹಿಂದೂ ದೇವತೆಗಳನ್ನು ತುಚ್ಛೀಕರಿಸಲು ಮತ್ತು ಭಕ್ತರನ್ನು ಕಂಗೆಡಿಸಲು ಮೂರ್ತಿಯನ್ನು ವಿರೂಪಗೊಳಿಸಿದ್ದಾರೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.

ದೇವರ ಆಸ್ತಿಯನ್ನು ಮರುಪಡೆಯಲು ಆರಾಧಕರಿಗೆ ಮೊಕದ್ದಮೆ ಹೂಡುವ ಹಕ್ಕಿದೆ ಎಂದು ಅಯೋಧ್ಯೆ ತೀರ್ಪು ನೀಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ ಎಂದೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

No stories found.
Kannada Bar & Bench
kannada.barandbench.com