ಐದು ವರ್ಷಗಳ ಎಲ್‌ಎಲ್‌ಬಿ ಕೊರ್ಸ್‌ ಅವಧಿ ಇಳಿಕೆ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್

ವಿದ್ಯಾರ್ಥಿಗಳು 3 ವರ್ಷಗಳಲ್ಲಿ 15-20 ವಿಷಯಗಳನ್ನು ಸುಲಭವಾಗಿ ಅಧ್ಯಯನ ಮಾಡಬಹುದಾಗಿದ್ದು ಅಸ್ತಿತ್ವದಲ್ಲಿರುವ 5 ವರ್ಷಗಳ ಅವಧಿಯು ಅಸಮಂಜಸವೂ, ಅತಾರ್ಕಿಕವೂ ಆಗಿದೆ ಎಂದು ಆಕ್ಷೇಪ.
ಐದು ವರ್ಷಗಳ ಎಲ್‌ಎಲ್‌ಬಿ ಕೊರ್ಸ್‌ ಅವಧಿ ಇಳಿಕೆ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್

ಪದವಿಪೂರ್ವ ಶಿಕ್ಷಣದ ನಂತರದ ಎಲ್‌ಎಲ್‌ಬಿ ಕೋರ್ಸ್‌ ಅಧ್ಯಯನದ ಅವಧಿಯನ್ನು ಪ್ರಸಕ್ತ ಇರುವ ಐದು ವರ್ಷಗಳ ಬದಲಿಗೆ ಮೂರು ವರ್ಷಗಳಿಗೆ ಇಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಲಾಗಿದೆ.

 ಪದವಿ ಪೂರ್ವ ಶಿಕ್ಷಣ ಪಡೆದ ಬಳಿಕ ನೇರವಾಗಿ ಎಲ್‌ಎಲ್‌ಬಿ ಪದವಿ ಬಯಸುವವರು ಪ್ರಸ್ತುತ ಐದು ವರ್ಷ ಅಧ್ಯಯನ ಮಾಡಬೇಕಾಗುತ್ತದೆ. ಆದರೆ ಪದವಿ ಪಡೆದು ಎಲ್‌ಎಲ್‌ಬಿಗೆ ಸೇರ್ಪಡೆಯಾದವರು ಮೂರು ವರ್ಷಗಳಲ್ಲಿ ಕೋರ್ಸ್‌ ಪೂರ್ಣಗೊಳಿಸಬಹುದಾಗಿದೆ.  

 ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಮೂರು ವರ್ಷಗಳ ಕೋರ್ಸ್‌ಗೆ ತಕ್ಷಣ ಅನುಮತಿ ನೀಡುವ ಕಾರ್ಯಸಾಧ್ಯತೆ ಕುರಿತು ನಿರ್ಣಯಿಸಲು ತಜ್ಞರ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ವಕೀಲರ ಪರಿಷತ್‌ಗೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯವನ್ನು ಕೋರಲಾಗಿದೆ.

"ವಿದ್ಯಾರ್ಥಿಗಳು 03 ವರ್ಷಗಳಲ್ಲಿ ಅಂದರೆ 06 ಸೆಮಿಸ್ಟರ್‌ಗಳಲ್ಲಿ 15-20 ವಿಷಯಗಳನ್ನು ಸುಲಭವಾಗಿ ಅಧ್ಯಯನ ಮಾಡಬಹುದು. ಆದ್ದರಿಂದ, ಬ್ಯಾಚುಲರ್ ಆಫ್ ಲಾ ಕೋರ್ಸ್‌ಗಾಗಿ ಪ್ರಸ್ತುತ 05 ವರ್ಷಗಳ ಅಂದರೆ 10 ಸೆಮಿಸ್ಟರ್‌ಗಳ ಅವಧಿಯು ಅಸಮಂಜಸವಾದುದಾಗಿದ್ದು ಈ ಅತಿಯಾದ ಅವಧಿ ಅನಿಯಂತ್ರಿತವೂ ಅತಾರ್ಕಿಕವೂ ಆಗಿದೆ. ಇದು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತದೆ” ಎಂದು ಅರ್ಜಿ ತಿಳಿಸಿದೆ. ಐದು ವರ್ಷಗಳ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಸೂಕ್ತವಲ್ಲ ಎಂದು ಅದು ಹೇಳಿದೆ.

ಅರ್ಜಿಯ ಪ್ರಮುಖಾಂಶಗಳು

  • ಕಾನೂನು ಅಧ್ಯಯನಕ್ಕೆ ಐದು ವರ್ಷಗಳ ಅವಧಿ ಸೂಕ್ತವಲ್ಲ.

  • ಈ ಸುದೀರ್ಘ ಅವಧಿಯಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ.

  • ಮೂರು ವರ್ಷಗಳಿಗೆ ಕಲಿಕೆ ಸೀಮಿತಗೊಳಿಸಿದರೆ ವಿದ್ಯಾರ್ಥಿ ಉಳಿದ ಎರಡು ವರ್ಷಗಳನ್ನು ನ್ಯಾಯಾಲಯ ಅಥವಾ ಕಾನೂನು ಸಂಸ್ಥೆಯಲ್ಲಿ ಪ್ರಾಯೋಗಿಕ ಜ್ಞಾನ ಪಡೆಯಲು ಇಲ್ಲವೇ ಸ್ನಾತಕೋತ್ತರ ಪದವಿ ಪಡೆಯಲು ಅಥವಾ ನ್ಯಾಯಾಂಗ ಪರೀಕ್ಷೆಗೆ ತಯಾರಾಗಲು ಮೀಸಲಿಡಬಹುದು.

  • ವಿದ್ಯಾರ್ಥಿಗಳಿಗೆ 21 ವರ್ಷ ಆಗುವಷ್ಟರಲ್ಲಿ ಅವರು ವಕೀಲ ವೃತ್ತಿ  ಪ್ರಾರಂಭಿಸಲು ಅವಕಾಶ ನೀಡಬೇಕು ಎಂದು ನ್ಯಾಯಶಾಸ್ತ್ರಜ್ಞರಾದ ಫಾಲಿ ಎಸ್ ನಾರಿಮನ್ ಮತ್ತು ರಾಮ್ ಜೇಠ್ಮಲಾನಿ ಅವರು ಹೇಳಿದ್ದರು.

  • ವ್ಯಕ್ತಿಯೊಬ್ಬ ಕೇವಲ 17 ವರ್ಷಗಳಲ್ಲಿ ಕಾನೂನು ವೃತ್ತಿ ಆರಂಭಿಸಿ ನ್ಯಾಯಿಕ ಲೋಕದ ದಂತಕತೆ ಆಗಬಹುದು ಎನ್ನುವುದಾದರೆ ವಿದ್ಯಾರ್ಥಿಗಳು ಐದು ವರ್ಷಗಳ ಸಮಗ್ರ ಕೋರ್ಸ್‌ ತೆಗೆದುಕೊಂಡು ತಮ್ಮ ಎರಡು ವರ್ಷಗಳನ್ನು ಏಕೆ ವ್ಯರ್ಥ ಮಾಡಿಕೊಳ್ಳಬೇಕು?

  • ದುಬಾರಿ ಕಾಲೇಜುಗಳ ಇಚ್ಛಾನುಸಾರ ಐದು ವರ್ಷಗಳ ಕೋರ್ಸ್‌ ಹೆಣೆಯಲಾಗಿದೆ.

  • ಮೂರು ವರ್ಷಗಳ ಪದವಿ ಪಡೆದ ಕೂಡಲೇ ವೃತ್ತಿ ಆರಂಭಿಸುವ ಅವಕಾಶ ನಾಗರಿಕ ಸೇವಾ ಅಧಿಕಾರಿಗಳಿಗೆ ಇದೆ.

ಕಾನೂನು ಕ್ಷೇತ್ರದಲ್ಲಿನ ಅತ್ಯುತ್ತಮ ಪ್ರತಿಭೆಗಳನ್ನುಸೆಳೆಯುವುದಕ್ಕಾಗಿ ವಿವರವಾದ ಮಾರ್ಗಸೂಚಿಯನ್ನು ಸಿದ್ಧಪಡಿಸಲು ಕೇಂದ್ರ ಸರ್ಕಾರ ಭಾರತೀಯ ವಕೀಲರ ಪರಿಷತ್‌ ಹಾಗೂ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟಕ್ಕೆ ನಿರ್ದೇಶಿಸಬೇಕು ಎಂದು ಕೂಡ ಅರ್ಜಿಯಲ್ಲಿ ಕೋರಲಾಗಿದೆ.

Kannada Bar & Bench
kannada.barandbench.com