ಮರಾಠಾ ಮೀಸಲಾತಿ ಕಾಯಿದೆ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ

ಮುಂಬೈ ಮೂಲದ ವಕೀಲರು ಸಲ್ಲಿಸಿರುವ ಅರ್ಜಿಯಲ್ಲಿ ಕಾಯಿದೆ ಜಾರಿಯಾಗದಂತೆ ಮಧ್ಯಂತರ ತಡೆ ನೀಡಬೇಕೆಂದು ಕೋರಿದ್ದು, ಮಾರ್ಚ್ 8 ರಂದು ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆಯಿದೆ.
ಬಾಂಬೆ ಹೈಕೋರ್ಟ್, ಮರಾಠಾ ಮೀಸಲಾತಿ
ಬಾಂಬೆ ಹೈಕೋರ್ಟ್, ಮರಾಠಾ ಮೀಸಲಾತಿ
Published on

ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗದ (ಎಸ್ಇಬಿಸಿ) ಅಡಿಯಲ್ಲಿ ಮರಾಠಾ ಸಮುದಾಯಕ್ಕೆ ಶೇಕಡಾ 10ರಷ್ಟು ಮೀಸಲಾತಿ ನೀಡಿ ಮಹಾರಾಷ್ಟ್ರ ಶಾಸಕಾಂಗ ಜಾರಿಗೆ ತಂದಿರುವ ಕಾಯಿದೆ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಮಸೂದೆಯನ್ನು ಫೆಬ್ರವರಿ 20ರಂದು ರಾಜ್ಯ ವಿಧಾನಸಭೆ ಅಂಗೀಕರಿಸಿತ್ತು. ಫೆಬ್ರವರಿ 26ರಂದು ರಾಜ್ಯಪಾಲರು ಮಸೂದೆಗೆ ಒಪ್ಪಿಗೆ ನೀಡಿದ್ದರು.

ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಸುನಿಲ್ ಶುಕ್ರೆ ನೇತೃತ್ವದ ಮಹಾರಾಷ್ಟ್ರ ರಾಜ್ಯ ಹಿಂದುಳಿದ ವರ್ಗಗಳ ಆಯೋಗ (ಎಂಎಸ್‌ಬಿಸಿಸಿ) ಮಂಡಿಸಿದ ವರದಿಯ ಶಿಫಾರಸು ಆಧರಿಸಿ ಕಾಯಿದೆ ಜಾರಿಗೆ ತರಲಾಗಿತ್ತು.

ರಾಜ್ಯದಲ್ಲಿ ಮರಾಠರ ಜನಸಂಖ್ಯೆಯು ಶೇಕಡಾ 28ರಷ್ಟಿದೆ ಮತ್ತು ಸಮುದಾಯ ಅಸಾಮಾನ್ಯ ರೀತಿಯಲ್ಲಿ ಹಿಂದುಳಿದ ಪರಿಸ್ಥಿತಿಯಲ್ಲಿದೆ. ಹೀಗಾಗಿ ಶೇ 50ರಷ್ಟು ಮೀಸಲಾತಿ ಮಿತಿಯನ್ನು ಮೀರಿ ಮರಾಠ ಸಮುದಾಯಕ್ಕೆ ಮೀಸಲಾತಿ ಒದಗಿಸಬೇಕು ಎಂದು ಎಂಎಸ್‌ಬಿಸಿಸಿ ವರದಿ ಹೇಳಿತ್ತು.

ನ್ಯಾಯಮೂರ್ತಿ ಶುಕ್ರೆ ಅವರನ್ನು ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಕಾನೂನಿಗೆ ವಿರುದ್ಧವಾಗಿದ್ದು ಅವರ ನೇಮಕಾತಿಯನ್ನು ರದ್ದುಗೊಳಿಸಬೇಕು ಎಂದು ಪ್ರಸ್ತುತ ಅರ್ಜಿ ತಿಳಿಸಿದೆ.

ಕಾಯಿದೆ ಜಾರಿಯಾಗದಂತೆ ತಡೆಯಬೇಕು. ಎಸ್ಇಬಿಸಿ ವರ್ಗದ ಮೀಸಲಾತಿಯಡಿ ಉದ್ಯೋಗಗಳು ಮತ್ತು ಶೈಕ್ಷಣಿಕ ಕೋರ್ಸ್‌ಗಳಿಗೆ ಯಾವುದೇ ಜಾಹೀರಾತುಗಳನ್ನು ನೀಡದಂತೆ ಸೂಚಿಸಬೇಕು ಎಂದು ನ್ಯಾಯವಾದಿ ಜೈಶ್ರೀ ಲಕ್ಷ್ಮಣರಾವ್ ಪಾಟೀಲ್ ಮತ್ತಿತರ ವಕೀಲರು ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದ್ದಾರೆ.

ಹೈಕೋರ್ಟ್ ಜಾಲತಾಣದ ಮಾಹಿತಿ ಪ್ರಕಾರ ಪ್ರಕರಣದ ವಿಚಾರಣೆ ಮಾರ್ಚ್ 8ರಂದು ನಡೆಯುವ ಸಾಧ್ಯತೆಯಿದೆ. ಆದರೂ, ಅರ್ಜಿದಾರರು ತುರ್ತು ಪರಿಹಾರ ಕೋರಿ ಅದಕ್ಕೂ ಮೊದಲೇ ನ್ಯಾಯಾಲಯದಲ್ಲಿ ಪ್ರಕರಣ ಉಲ್ಲೇಖಿಸುವ ಸಾಧ್ಯತೆಯಿದೆ.

ಎಂಎಸ್‌ಬಿಸಿಸಿಗೆ ಮಾಡಿದ ನೇಮಕಾತಿಗಳನ್ನು ಪ್ರಶ್ನಿಸಿರುವ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ (ಪಿಐಎಲ್) ಹೈಕೋರ್ಟ್‌ನಲ್ಲಿ ವಿಚಾರಣೆ ಎದುರು ನೋಡುತ್ತಿದೆ.

Kannada Bar & Bench
kannada.barandbench.com