ಸಿಬಿಐ ನಿರ್ದೇಶಕ ಜೈಸ್ವಾಲ್ ಅಧಿಕಾರಾವಧಿ ವಿಸ್ತರಿಸುವ ಸುಗ್ರೀವಾಜ್ಞೆ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ

ಅರ್ಜಿಗೆ ಉತ್ತರಿಸಲು ಸಿಬಿಐ ಸಮಯಾವಕಾಶ ಕೇಳಿದ ಹಿನ್ನೆಲೆಯಲ್ಲಿ, ಹೈಕೋರ್ಟ್ ನವೆಂಬರ್ 22ಕ್ಕೆ ವಿಚಾರಣೆ ಮುಂದೂಡಿತು.
Subodh Kumar Jaiswal
Subodh Kumar Jaiswal

ಸಿಬಿಐ ಮಹಾನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಅವರ ಅಧಿಕಾರಾವಧಿ ವಿಸ್ತರಿಸಲು ಕೇಂದ್ರ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ . [ರಾಜೇಂದ್ರಕುಮಾರ್ ವಿ ತ್ರಿವೇದಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ.]

ಸಿಬಿಐ ನಿರ್ದೇಶಕರ ಅಧಿಕಾರಾವಧಿಯು ಮೇ 2023 ರಲ್ಲಿ ಮಾತ್ರ ಮುಕ್ತಾಯಗೊಳ್ಳುವುದರಿಂದ, ಅಧಿಕಾರಾವಧಿಯನ್ನು ವಿಸ್ತರಿಸುವ ಸುಗ್ರೀವಾಜ್ಞೆಯನ್ನು ಹೊರಡಿಸಲು ಕೇಂದ್ರ ಸರ್ಕಾರಕ್ಕೆ ಯಾವುದೇ ಸಂದರ್ಭಗಳಿಲ್ಲ ಎಂದು ನಿವೃತ್ತ ಐಪಿಎಸ್ ಅಧಿಕಾರಿ ರಾಜೇಂದ್ರಕುಮಾರ್ ತ್ರಿವೇದಿ ಸಲ್ಲಿಸಿರುವ ಮನವಿ ತಿಳಿಸಿದೆ.

Also Read
ಸಿಬಿಐ ನಿರ್ದೇಶಕ ಹುದ್ದೆಯಿಂದ ಎಸ್ ಕೆ ಜೈಸ್ವಾಲ್‌ ವಜಾ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ

ಸಾಮಾನ್ಯ ಕಾನೂನು ರೂಪಿಸುವ ಕಾರ್ಯವಿಧಾನಕ್ಕೆ ಸುಗೀವಾಜ್ಞೆ ಹೊರಡಿಸದೆ ಅದನ್ನು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಬಳಸಬೇಕಿದೆ ಎಂದು ಕೂಡ ಅರ್ಜಿ ವಿವರಿಸಿದೆ.

ಅನುಮತಿಸಲಾಗದ ಶಾಸಕಾಂಗ ಅತಿಕ್ರಮಣಕ್ಕೆ 2021ರ ಸುಗ್ರೀವಾಜ್ಞೆ ಶ್ರೇಷ್ಟ ಉದಾಹರಣೆಯಾಗಿದ್ದು ಆ ಮೂಲಕ ಸಂವಿಧಾನದ 14ನೇ ವಿಧಿ ಮತ್ತು ಕಾನೂನು ಆಡಳಿತದ ಸಿದ್ಧಾಂತವನ್ನು ಅದು ಉಲ್ಲಂಘಿಸಿದೆ. 2021ರ ನವೆಂಬರ್‌ನಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗುತ್ತಿದ್ದರೂ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಿತ್ತು ಎಂಬ ಅಂಶಗಳನ್ನೂ ನ್ಯಾಯಾಲಯದ ಗಮನಕ್ಕೆ ತರಲಾಗಿದೆ.

ಶುಕ್ರವಾರ ಪ್ರಕರಣ ವಿಚಾರಣೆ ನಡೆದಾಗ, ಸಿಬಿಐ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ಮನವಿಗೆ ಪ್ರತಿಕ್ರಿಯೆ ನೀಡಲು ಸಮಯ ಕೋರಿದರು. ನ್ಯಾಯಮೂರ್ತಿಗಳಾದ ಎಸ್‌ ವಿ ಗಂಗಾಪುರವಾಲಾ ಮತ್ತು ಎಸ್‌ ಜಿ ದಿಗೆ ಅವರಿದ್ದ ಪೀಠ ಇದಕ್ಕೆ ಸಮ್ಮತಿಸಿ  ನವೆಂಬರ್ 22ಕ್ಕೆ ವಿಚಾರಣೆ ಮುಂದೂಡಿತು.

Also Read
ವೈಯಕ್ತಿಕ ದ್ವೇಷದಿಂದ ತಮ್ಮ ವಿರುದ್ಧ ದೂರು: ಬಾಂಬೆ ಹೈಕೋರ್ಟ್‌ಗೆ ಸಿಬಿಐ ನಿರ್ದೇಶಕ ಸುಬೋಧ್ ಜೈಸ್ವಾಲ್

ಸುಬೋಧ್ ಕುಮಾರ್ ಜೈಸ್ವಾಲ್ ಅವರನ್ನು ಸಿಬಿಐ ಮುಖ್ಯಸ್ಥರನ್ನಾಗಿ ನೇಮಿಸಿರುವುದನ್ನು ಪ್ರಶ್ನಿಸಿ ತ್ರಿವೇದಿ ಅವರು ಈ ಹಿಂದೆ ಸಲ್ಲಿಸಿದ್ದ ಮೂಲ ಅರ್ಜಿಗೆ ಸಂಬಂಧಿಸಿದಂತೆ ಅವರು ಈ ಮನವಿ ಸಲ್ಲಿಸಿದ್ದರು.

ಜೈಸ್ವಾಲ್‌ ಅವರಿಗೆ ಭ್ರಷ್ಟಾಚಾರ ನಿಗ್ರಹ ಪ್ರಕರಣಗಳ ತನಿಖೆಯಲ್ಲಿ ಅನುಭವವಿಲ್ಲ ಮತ್ತು ಅವರ ವಿಶ್ವಾಸಾರ್ಹತೆ ಅನುಮಾನಾಸ್ಪದವಾಗಿದೆ ಎಂಬ ಕಾರಣಕ್ಕಾಗಿ ಸಿಬಿಐ ಮುಖ್ಯಸ್ಥರಾಗಿ ಅವರು ಮುಂದುಯವರೆಯದಂತೆ ಮೂಲ ಅರ್ಜಿಯಲ್ಲಿ ಕೋರಲಾಗಿತ್ತು.

ಆದರೆ ಜೈಸ್ವಾಲ್ ಅವರು ಭ್ರಷ್ಟಾಚಾರ-ವಿರೋಧಿ ಪ್ರಕರಣಗಳನ್ನು ವ್ಯವಹರಿಸುವ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ ಮತ್ತು ಅವರ ವಿರುದ್ಧ ಯಾವುದೇ ದೂರು ಅಥವಾ ನ್ಯಾಯಾಲಯ ಪ್ರಕರಣಗಳು ಇಲ್ಲ ಎಂದು ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆಗಳ ಸಚಿವಾಲಯ ಮನವಿ ವಿರೋಧಿಸಿ ಅಫಿಡವಿಟ್ ಸಲ್ಲಿಸಿತ್ತು. ಮತ್ತೊಂದೆಡೆ ವೈಯಕ್ತಿಕ ದ್ವೇಷದಿಂದ ತಮ್ಮ ವಿರುದ್ಧ ತ್ರಿವೇದಿ ಅವರು ದೂರು ಸಲ್ಲಿಸಿದ್ದಾರೆ ಎಂದು ಜೈಸ್ವಾಲ್‌ ನ್ಯಾಯಾಲಯಕ್ಕೆ ತಿಳಿಸಿದ್ದರು.

Related Stories

No stories found.
Kannada Bar & Bench
kannada.barandbench.com