ಕೋವಿಶೀಲ್ಡ್ ಲಸಿಕೆಯಿಂದ ಮಗಳ ಸಾವು: ₹10 ಕೋಟಿ ಪರಿಹಾರ ಕೋರಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ದಂಪತಿ

ಕೋವಿಶೀಲ್ಡ್‌ ತಯಾರಕ ಸಂಸ್ಥೆ ಸಿರಂ ಇನ್‌ಸ್ಟಿಟ್ಯೂಟ್‌, ಅದರ ಪಾಲುದಾರರಾದ ಬಿಲ್‌ಗೇಟ್ಸ್‌, ಕೇಂದ್ರ ಹಾಗೂ ಕೇರಳ ಸರ್ಕಾರ ಅದರಲ್ಲಿಯೂ ಆರೋಗ್ಯ ಇಲಾಖೆ, ಲಸಿಕೆ ನೀಡಿದ ಆಸ್ಪತ್ರೆಯನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ.
ಕೋವಿಶೀಲ್ಡ್ ಲಸಿಕೆಯಿಂದ ಮಗಳ ಸಾವು: ₹10 ಕೋಟಿ ಪರಿಹಾರ ಕೋರಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ದಂಪತಿ
A1

ಅಪರೂಪದ ಇಮ್ಯುನೋಜೆನಿಕ್‌ (ಲಸಿಕೆಗೆ ದೇಹವು ತೋರುವ ಪ್ರತಿರೋಧ) ಪರಿಣಾಮದಿಂದಾಗಿ ಕೋವಿಶೀಲ್ಡ್‌ ಲಸಿಕೆ ಪಡೆದು ಸಾವನ್ನಪ್ಪಿದ್ದ 19ರ ಹರೆಯದ ಹುಡುಗಿಯ ಪೋಷಕರು ₹ 10 ಕೋಟಿ ಪರಿಹಾರ ಕೋರಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ [ಜೀನ್‌ ಜಾರ್ಜ್‌ ಮತ್ತಿತರರು ಹಾಗೂ ಸಿರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಇನ್ನಿತರರ ನಡುವಣ ಪ್ರಕರಣ].

ಇತ್ತೀಚೆಗೆ ಅರ್ಜಿ ಅಂಗೀಕರಿಸಿದ ನ್ಯಾ. ಎನ್‌ ನಗರೇಶ್ ಈ ಸಂಬಂಧ ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದ್ದಾರೆ.

ಕೋವಿಶೀಲ್ಡ್ ಲಸಿಕೆ ಪಡೆದ ಒಂದು ದಿನದ ನಂತರ ತಮ್ಮ ಮಗಳು, 19 ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಅಸ್ವಸ್ಥಳಾಗಿದ್ದಳು. ಒಂದು ವಾರದ ನಂತರ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆಗೆ ಚಿಕಿತ್ಸೆ ನೀಡಿ ಅದೇ ದಿನ ಡಿಸ್ಚಾರ್ಜ್ ಮಾಡಲಾಯಿತು. ಆದರೂ ಆಕೆಯ ಸ್ಥಿತಿ ಕ್ಷೀಣಿಸುತ್ತಲೇ ಇತ್ತು. ಕೂಡಲೇ ಆಕೆಯನ್ನು ಬೇರೊಂದು ಆಸ್ಪತ್ರೆಗೆ ಕರೆದೊಯ್ದು ಇಂಟ್ಯೂಬೇಟ್ ಹಾಕಿ, ವೆಂಟಿಲೇಟರ್‌ನ ಆಸರೆಯಲ್ಲಿ ಇರಿಸಲಾಯಿತು. ಕೋವಿಶೀಲ್ಡ್ ಲಸಿಕೆಯನ್ನು ನೀಡಿದ ಎರಡು ವಾರಗಳ ನಂತರ ಅಂದರೆ ಆಗಸ್ಟ್ 12, 2021 ರಂದು ಆಕೆ ಮೃತಪಟ್ಟಳು.

ಅಧಿಕೃತ ಮರಣೋತ್ತರ ವರದಿಯಲ್ಲಿ ಆಕೆಯ ಸಾವಿಗೆ ತಲೆಬುರಡೆಯೊಳಗಿನ ಸಂಭವಿಸಿದ ರಕ್ತಸ್ರಾವ ಕಾರಣ ಎಂದು ತಿಳಿದುಬಂದಿತು ಎಂದು ಅರ್ಜಿದಾರ ಪೋಷಕರು ವಿವರಿಸಿದ್ದಾರೆ. ನಂತರ ಅರ್ಜಿದಾರರು ಪರಿಹಾರ ಒದಗಿಸುವಂತೆ ಕೋರಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದರು.

Also Read
“ಲಸಿಕೆ ಪಡೆಯಲು ಜನರನ್ನು ಒತ್ತಾಯಿಸುವುದು ಅಸಾಂವಿಧಾನಿಕ:” ಕೋವಿಡ್‌ ಲಸಿಕಾ ಪ್ರಯೋಗ ದತ್ತಾಂಶಕ್ಕೆ ಸುಪ್ರೀಂನಲ್ಲಿ ಮನವಿ

ಪತ್ತನಂತಿಟ್ಟ ಜಿಲ್ಲಾ ವೈದ್ಯಾಧಿಕಾರಿಗಳು ನಡೆಸಿದ ತಪಾಸಣೆ ವೇಳೆ ತಮ್ಮ ಮಗಳಿಗೆ ಈ ಹಿಂದೆ ಯಾವುದೇ ನರಸಂಬಂಧಿ ಕಾಯಿಲೆಗಳಿರಲಿಲ್ಲ. ಕೋವಿಶೀಲ್ಡ್‌ ಲಸಿಕೆಯ ಮೊದಲ ಡೋಸ್‌ ಪಡೆದ ನಂತರವಷ್ಟೇ ಆಕೆಗೆ ರೋಗಲಕ್ಷಣಗಳು ಕಂಡುಬಂದಿದ್ದವು. ಅಲ್ಲದೆ ಥ್ರಂಬೋಸೈಟೋಪೆನಿಯಾ, ಥ್ರಂಬೋಸಿಸ್ ಸಿಂಡ್ರೋಮ್‌ನಿಂದ ಬಳಲಿರುವ ಸಾಧ್ಯತೆಗಳಿದ್ದು ಇದು ಕೋವಿಡ್‌ ಲಸಿಕೆಗಳಿಗೆ ಅಪರೂಪದ ಇಮ್ಯುನೋಜೆನಿಕ್‌ ಪ್ರತಿರೋಧವಾಗಿದೆ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ಕೋವಿಶೀಲ್ಡ್‌ ಲಸಿಕೆ ನೀಡಿದ್ದರಿಂದಲೇ ತಮ್ಮ ಮಗಳು ಸಾವನ್ನಪ್ಪಿದ್ದಾರೆ ಎಂದು ಅರ್ಜಿದಾರರು ಅಳಲು ತೋಡಿಕೊಂಡಿದ್ದಾರೆ.

ಆದ್ದರಿಂದ ಕೋವಿಶೀಲ್ಡ್‌ ತಯಾರಕ ಸಂಸ್ಥೆ ಸಿರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಅದರ ಪಾಲುದಾರ ಬಿಲ್‌ಗೇಟ್ಸ್‌, ಕೇಂದ್ರ ಹಾಗೂ ಕೇರಳ ಸರ್ಕಾರ ಅದರಲ್ಲಿಯೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಲಸಿಕೆ ನೀಡಿದ ಆಸ್ಪತ್ರೆ ಮತ್ತು ಅಡ್ಡಪರಿಣಾಮಗಳು ಕಂಡು ಬಂದ ನಂತರ ದಾಖಲಿಸಲಾದ ಆಸ್ಪತ್ರೆಗಳನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಕಡ್ಡಾಯವಾಗಿ ಕೋವಿಡ್‌ ಲಸಿಕೆ ನೀಡುವುದು ಅಸಾಂವಿಧಾನಿಕ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಆಕ್ಷೇಪಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪು ಕಾಯ್ದಿರಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

Related Stories

No stories found.