ಸಂಸತ್ ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ ಆಂಗ್ಲೊ ಇಂಡಿಯನ್ ಸಮುದಾಯಕ್ಕೆ ಮೀಸಲಾತಿ ರೂಪದಲ್ಲಿ ನೀಡಿರುವ ಪ್ರಾತಿನಿಧಿಕತ್ವವನ್ನು ಪುನರ್ ಸ್ಥಾಪಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.
ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಹತ್ತು ವರ್ಷಗಳ ಕಾಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ವಿಸ್ತರಿಸಿ, ಆಂಗ್ಲೊ ಇಂಡಿಯನ್ ಸಮುದಾಯಕ್ಕೆ ಮೀಸಲಾತಿ ಸ್ಥಗಿತಗೊಳಿಸಿರುವ ಸಂವಿಧಾನದ 104ನೇ ತಿದ್ದುಪಡಿ ಪ್ರಶ್ನಿಸಿ ಫೆಡರೇಶನ್ ಆಫ್ ಆಂಗ್ಲೋ ಇಂಡಿಯನ್ ಒಕ್ಕೂಟ ಮನವಿ ಸಲ್ಲಿಸಿದೆ.
ಸಂವಿಧಾನ ರಚನಾ ಸಭೆಯಲ್ಲಿ ಆರಂಭಿಕ ಹಂತದಲ್ಲಿ ಸಂವಿಧಾನ ನಿರ್ಮಾತೃಗಳ ಅಭಿಪ್ರಾಯ ಏನಿತ್ತು ಮತ್ತು ಅಂಥದ್ದೇ ಸನ್ನಿವೇಶ ಈಗಲೂ ಇದೆಯೇ ಎನ್ನುವುದನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಿಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ ನೇತೃತ್ವದ ವಿಭಾಗೀಯ ಪೀಠವು ಶುಕ್ರವಾರ ಹೇಳಿದೆ.
ಆರು ವಾರಗಳಲ್ಲಿ ಸಂಸದೀಯ ಸಮಿತಿಯ ಚರ್ಚೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿರುವ ನ್ಯಾಯಾಲಯವು ನವೆಂಬರ್ 18ಕ್ಕೆ ವಿಚಾರಣೆ ಮುಂದೂಡಿದೆ.
104ನೇ ತಿದ್ದುಪಡಿಯ ಮೂಲಕ ಸಂವಿಧಾನ ಸಭೆಯು ಆಂಗ್ಲೊ ಇಂಡಿಯನ್ ಸಮುದಾಯಕ್ಕೆ ನೀಡಲಾದ ರಾಜಕೀಯ ಪ್ರಾತಿನಿಧ್ಯವನ್ನು ಸಮಾನತೆಯ ತತ್ವಗಳು ಮತ್ತು ಸಂವಿಧಾನದ ಪೀಠಿಕೆಯಲ್ಲಿನ ಮೂಲ ತತ್ವಗಳನ್ನು ಉಲ್ಲಂಘಿಸಿ ನಿರಂಕುಶವಾಗಿ ತೆಗೆದುಹಾಕಲಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.