ಧರ್ಮದ ಹೆಸರಿನಲ್ಲಿ ಮತ ಯಾಚನೆ: ಮೋದಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಲು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ಫಿಲಿಬಿಟ್‌ನಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ನಾಯಕರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬುದು ಅರ್ಜಿದಾರರ ಆರೋಪ.
Prime Minister Narendra Modi
Prime Minister Narendra Modi

ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ದೇವರು ಮತ್ತು ಪೂಜಾ ಸ್ಥಳದ ಹೆಸರಿನಲ್ಲಿ ಮತ ಯಾಚಿಸುವ ಮೂಲಕ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಏಪ್ರಿಲ್ 9 ರಂದು ಉತ್ತರ ಪ್ರದೇಶದ ಪಿಲಿಭಿಟ್‌ನಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರೂ ಆಗಿರುವ ಪ್ರಧಾನಿ ಮೋದಿ ಅವರ ಭಾಷಣವನ್ನು ಉಲ್ಲೇಖಿಸಿ ಆನಂದ್ ಎಸ್ ಜೊಂಧಲೆ ಎಂಬ ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದಾರೆ.

ಪ್ರಧಾನಿ ಮೋದಿಯವರು "ಹಿಂದೂ ದೇವತೆಗಳು ಮತ್ತು ಹಿಂದೂ ಆರಾಧನಾ ಸ್ಥಳಗಳ ಜೊತೆಗೆ ಸಿಖ್ ದೇವತೆಗಳು ಮತ್ತು ಸಿಖ್ ಆರಾಧನಾ ಸ್ಥಳಗಳ" ಹೆಸರಿನಲ್ಲಿ ಬಿಜೆಪಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದ್ದರು ಎಂದು ಜೋಂಧಲೆ ತಿಳಿಸಿದ್ದಾರೆ.

ಹೀಗಾಗಿ ಆರು ವರ್ಷಗಳ ಅವಧಿಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಪ್ರಧಾನಿ ಮೋದಿಯವರನ್ನು ನಿರ್ಬಂಧಿಸಬೇಕು ಎಂದು ಅವರು ಕೋರಿದ್ದಾರೆ.

ತಾನು ರಾಮ ಮಂದಿರ ನಿರ್ಮಿಸಿದ್ದಾಗಿ ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಅಭಿವೃದ್ಧಿಪಡಿಸಿದ್ದಾಗಿ ಗುರುದ್ವಾರಗಳಿಗೆ ಸಂಬಂಧಿಸಿದ ವಸ್ತುಗಳ ಜಿಎಸ್‌ಟಿ ತೆಗೆದುಹಾಕಿದ್ದಾಗಿ ಜೊತೆಗೆ ಅಫ್ಘಾನಿಸ್ತಾನದಿಂದ ಗುರು ಗ್ರಂಥ ಸಾಹಿಬ್‌ನ ಪ್ರತಿಗಳನ್ನು ಮರಳಿ ತಂದಿದ್ದಾಗಿ ಹೇಳಿ ಮೋದಿಯವರು ಮತ ಯಾಚನೆ ಮಾಡಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.

ಅ ಮೂಲಕ ಮೋದಿಯವರು ನೀತಿ ಸಂಹಿತೆಯ ನಿಯಮಾವಳಿಗಳ ಸಂಪುಟ III ರ ಸಾಮಾನ್ಯ ನಡಾವಳಿ I(1) ಮತ್ತು (3)ನ್ನು ಉಲ್ಲಂಘಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಯಾವುದೇ ಪಕ್ಷ ಅಥವಾ ಅಭ್ಯರ್ಥಿ ಈಗಿರುವ ಭಿನ್ನಾಭಿಪ್ರಾಯಗಳನ್ನು ಉಲ್ಬಣಗೊಳಿಸುವಂತಹ ಇಲ್ಲವೇ ಪರಸ್ಪರ ದ್ವೇಷಕ್ಕೆ ಕುಮ್ಮಕ್ಕು ನೀಡುವ ಅಥವಾ ವಿವಿಧ ಜಾತಿ ಸಮುದಾಯಗಳ ನಡುವೆ ಧಾರ್ಮಿಕ ಅಥವಾ ಭಾಷಿಕ ಮನಸ್ತಾಪ ಉಂಟುಮಾಡುವಂತಹ ಚಟುವಟಿಕೆಯಲ್ಲಿ ತೊಡಗಿರಬಾರದು ಎನ್ನುತ್ತದೆ ನಿಬಂಧನೆ.

"ಜಾತಿ ಅಥವಾ ಸಮುದಾಯದ ಭಾವನೆಗಳ ಹೆಸರಿನಲ್ಲಿ ಮತ ಯಾಚನೆ ನಡೆಯಬಾರದು  ಎಂದು ಅದು ಹೇಳುತ್ತದೆ. ಮಸೀದಿ, ಚರ್ಚ್‌ಗಳು, ದೇವಾಲಯಗಳು ಅಥವಾ ಇತರ ಪೂಜಾ ಸ್ಥಳಗಳನ್ನು ಚುನಾವಣಾ ಪ್ರಚಾರಕ್ಕಾಗಿ ವೇದಿಕೆಯಾಗಿ ಬಳಸಬಾರದು" ಎಂದು ಜೊಂಧಲೆ ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.

ಪಿಎಂ ಮೋದಿ ಹಿಂದೂ ಮತ್ತು ಸಿಖ್ ದೇವತೆಗಳು ಮತ್ತು ಅವರ ಆರಾಧನಾ ಸ್ಥಳಗಳ ಹೆಸರಿನಲ್ಲಿ ಮತ ಕೇಳಿದ್ದಲ್ಲದೆ, ಮುಸ್ಲಿಮರ ಪರವಾಗಿ ರಾಜಕೀಯ ಪಕ್ಷಗಳು ಕೆಲಸ ಮಾಡುತ್ತಿವೆ ಎಂದಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.

Kannada Bar & Bench
kannada.barandbench.com