High Court of Karnataka
High Court of Karnataka

ಪ್ರಾಥಮಿಕ ಶಾಲಾ ಮಕ್ಕಳ ಬ್ಯಾಗ್‌ ತೂಕ ಇಳಿಕೆ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ

ಕೇಂದ್ರ ಸರ್ಕಾರವು ಶಾಲಾ ಬ್ಯಾಗ್ ನೀತಿ 2020ರಲ್ಲಿ ಮಕ್ಕಳ ಬ್ಯಾಗ್ ತೂಕದ ಮಿತಿ ಇಷ್ಟೇ ಇರಬೇಕು ಎಂಬ ನಿಯಮವಿದೆ. ಆದರೆ, ಆದು ಪಾಲನೆಯಾಗುತ್ತಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖ.
Published on

ಪ್ರಾಥಮಿಕ ಶಾಲಾ ಮಕ್ಕಳ ಬ್ಯಾಗ್ ತೂಕ ಇಳಿಕೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ತುಮಕೂರಿನ ವಕೀಲ ರಮೇಶ್ ನಾಯಕ್ ಅವರು ಅರ್ಜಿ ಸಲ್ಲಿಸಿದ್ದು, ಅದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಶಾಲಾ ಆಡಳಿತಕ್ಕೆ ಸಂಬಂಧಿಸಿದಂತೆ ಹಲವು ಕಾನೂನು, ನಿಯಮಗಳನ್ನು ರೂಪಿಸಲಾಗಿದೆ. ರಾಜ್ಯ ಸರ್ಕಾರವೂ ಆಗಾಗ್ಗೆ ಸೂಚನೆ, ಸುತ್ತೋಲೆಗಳನ್ನು ಹೊರಡಿಸುತ್ತಲೇ ಇರುತ್ತದೆ. ಆದರೆ, ಶಾಲಾ ಬ್ಯಾಗ್ ಸಂಬಂಧ ಯಾವುದೇ ನಿರ್ದಿಷ್ಟ ನಿಯಮವಿಲ್ಲ. 2006ರಲ್ಲಿ ರಾಜ್ಯಸಭೆಯಲ್ಲಿ ಶಾಲಾ ಮಕ್ಕಳ ಬ್ಯಾಗ್ ತೂಕ ಮಿತಿಗೊಳಿಸುವ ಕುರಿತಂತೆ ವಿಧೇಯಕವನ್ನು ಮಂಡಿಸಲಾಗಿತ್ತು. ಆದರೆ, ನಂತರ ಅದನ್ನು ಅಲ್ಲಿಗೆ ಕೈಬಿಡಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಕೇಂದ್ರ ಸರ್ಕಾರದ ಶಾಲಾ ಬ್ಯಾಗ್ ನೀತಿ 2020ರಲ್ಲಿ ಮಕ್ಕಳ ಬ್ಯಾಗ್ ತೂಕದ ಮಿತಿ ಇಷ್ಟೇ ಇರಬೇಕು ಎಂಬ ನಿಯಮವಿದೆ. ಆದರೆ, ಆದು ಪಾಲನೆಯಾಗುತ್ತಿಲ್ಲ. ನಗರ ಅಥವಾ ಪಟ್ಟಣಗಳಲ್ಲಿ ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳು ತೂಕದ ಬ್ಯಾಗ್‌ಗಳನ್ನು ಹೊತ್ತು ಶಾಲೆಗೆ ಹೋಗುವುದು ಸಾಮಾನ್ಯವಾಗಿದೆ ಎಂದು ವಿವರಿಸಲಾಗಿದೆ.

ಆರೋಗ್ಯ, ತಜ್ಞರ ನಾನಾ ಅಧ್ಯಯನಗಳ ಪ್ರಕಾರ ಭಾರಿ ತೂಕದ ಶಾಲಾ ಬ್ಯಾಗ್ ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಬ್ಯಾಗ್ ಹೊರುವುದರಿಂದ ಮಕ್ಕಳ ದೈಹಿಕ ಬೆಳವಣಿಗೆ ಕುಂಠಿತವಾಗುವುದಲ್ಲದೆ, ಅವರ ಬೆನ್ನು ಮತ್ತು ಕಾಲಿಗೆ ಹಾನಿಯಾಗುತ್ತದೆ. ಹೀಗಾಗಿ, ಈ ಕುರಿತು ಸಂವಿಧಾನದ 21ನೇ ವಿಧಿಯ ಅಡಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.  

Kannada Bar & Bench
kannada.barandbench.com