

ರಾಜ್ಯದ ಎಂಜಿನಿಯರ್ಗಳು ತಮ್ಮ ಹೆಸರಿನ ಮೊದಲು ಗೌರವಸೂಚಕವಾಗಿ ‘Er.’ ಎಂದು ಪೂರ್ವಪ್ರತ್ಯಯವಾಗಿ ಬಳಸಲು ಅನುಮತಿ ನೀಡಿರುವ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಮಂಗಳವಾರ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
ಸರ್ಕಾರದ ಆದೇಶವನ್ನು ಪ್ರಶ್ನಿಸಿ ವಕೀಲ ಎನ್ ಬೀರಪ್ಪ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಪ್ರತಿವಾದಿಗಳಾದ ರಾಜ್ಯ ಸರ್ಕಾರ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ನಿರ್ದೇಶಿಸಿದ ಪೀಠವು ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ನವೆಂಬರ್ 16ಕ್ಕೆ ಮುಂದೂಡಿದೆ.
ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನವಾದ 2026ರ ಸೆಪ್ಟೆಂಬರ್ 15ರಂದು ಎಂಜಿನಿಯರ್ಗಳ ದಿನಾಚರಣೆ ಸಂದರ್ಭದಲ್ಲಿ ಹೊರಡಿಸಲಾದ ಈ ಆದೇಶಕ್ಕೆ ಯಾವುದೇ ತರ್ಕಬದ್ಧ ಆಧಾರವಿಲ್ಲ ಎಂದು ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರತಿ ರಾಜ್ಯವೂ ಪ್ರತ್ಯೇಕವಾಗಿ ಇಂತಹ ಬಿರುದುಗಳನ್ನು ನೀಡಲು ಆರಂಭಿಸಿದರೆ ಏಕರೂಪತೆ ನಾಶವಾಗಿ, ಅವು ಕಾರ್ಯಾಂಗದ ಮರ್ಜಿಗೆ ಒಳಪಟ್ಟ ಸಂಕೇತಗಳಾಗಬಹುದು. ಮುಂದಿನ ದಿನಗಳಲ್ಲಿ ವೈದ್ಯರು, ಲೆಕ್ಕ ಪರಿಶೋಧಕರು, ವಾಸ್ತು ಶಿಲ್ಪಿಗಳು, ಶಿಕ್ಷಕರು ಸೇರಿದಂತೆ ವಿವಿಧ ವೃತ್ತಿಪರರಿಂದಲೂ ಇದೇ ರೀತಿಯ ಗೌರವಸೂಚಕ ಪದಕ್ಕಾಗಿ ಬೇಡಿಕೆ ಉದ್ಭವಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಾನೂನಿನ ಅಧಿಕಾರ ಅಗತ್ಯವಿರುವ ವಿಷಯವನ್ನು ಕಾರ್ಯಾಂಗದ ಸೂಚನೆಯ ಮೂಲಕ ಜಾರಿಗೊಳಿಸಲಾಗದು. ಎಂಜಿನಿಯರಿಂಗ್ ವೃತ್ತಿಗೆ ಯಾವುದೇ ಪೂರ್ವ ಪ್ರತ್ಯಯ ಅಥವಾ ಗೌರವಸೂಚಕ ಪದ ನೀಡಬೇಕಿದ್ದರೆ, ಅದನ್ನು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಪರಿಶೀಲಿಸಿ ಶಿಫಾರಸು ಮಾಡಬೇಕು. ಬಳಿಕ ಕೇಂದ್ರ ಸರ್ಕಾರ ಆ ಶಿಫಾರಸನ್ನು ಅನುಮೋದಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ಸಂವಿಧಾನದ 18(1)ನೇ ವಿಧಿಯು ಸೇನಾ ಅಥವಾ ಶೈಕ್ಷಣಿಕ ಗೌರವಗಳನ್ನು ಹೊರತುಪಡಿಸಿ, ರಾಜ್ಯವು ಯಾವುದೇ ಬಿರುದು ನೀಡುವುದನ್ನು ನಿರ್ಬಂಧಿಸುತ್ತದೆ. ನಿರ್ದಿಷ್ಟ ವೃತ್ತಿಪರರಿಗೆ ಮಾತ್ರವೇ ನೀಡಲಾಗಿರುವ ಈ ಅಧಿಕೃತ ಗೌರವಸೂಚಕ ಪದ ಗೌರವಸೂಚಕ ಪದ ಹೊಂದಿರದೇ ಇರುವ ಇತರ ನಾಗರಿಕರನ್ನು ಕೆಳಮಟ್ಟದಲ್ಲಿ ಇರಿಸಿದಂತಾಗುತ್ತದೆ. ಇದು ಸಮಾನ ಸ್ಥಾನಮಾನದ ಹಕ್ಕಿಗೆ ಧಕ್ಕೆ ಉಂಟುಮಾಡುತ್ತದೆ. ಆದ್ದರಿಂದ, ಸರ್ಕಾರದ ಆದೇಶವು ಸಂವಿಧಾನಬಾಹಿರ ಮತ್ತು ಅಧಿಕಾರಕ್ಕೆ ಅತೀತವಾಗಿದ್ದು ಇದನ್ನು ಅನೂರ್ಜಿತ ಎಂದು ಘೋಷಿಸಬೇಕು ಎಂದು ಕೋರಿದ್ದಾರೆ.