ವಯಸ್ಸಾದ ಹೋರಿ, ಎಮ್ಮೆ, ಕೋಣಗಳ ವಧೆಯನ್ನು ನಿಷೇಧಿಸಲು ದೆಹಲಿ ಹೈಕೋರ್ಟ್‌ ಮುಂದೆ ಅರ್ಜಿ: ಕೇಂದ್ರಕ್ಕೆ ನೋಟಿಸ್‌

ಹೋರಿ, ಎಮ್ಮೆ ಮತ್ತು ಕೋಣಗಳು ಸಹ ಕೃಷಿ ಕೆಲಸಗಳಲ್ಲಿ ಹಾಗೂ ವಂಶಾಭಿವೃದ್ದಿಯಲ್ಲಿ ನಿರ್ದಿಷ್ಟ ವಯಸ್ಸನ್ನು ದಾಟಿದ ನಂತರವೂ ಬಳಕೆಯಾಗುವುದರಿಂದ ಅವುಗಳ ವಧೆಯನ್ನು ನಿಷೇಧಿಸಬೇಕು.
ವಯಸ್ಸಾದ ಹೋರಿ, ಎಮ್ಮೆ, ಕೋಣಗಳ ವಧೆಯನ್ನು ನಿಷೇಧಿಸಲು ದೆಹಲಿ ಹೈಕೋರ್ಟ್‌ ಮುಂದೆ ಅರ್ಜಿ: ಕೇಂದ್ರಕ್ಕೆ ನೋಟಿಸ್‌

Cattle slaughter

ವಯಸ್ಸಾದ ಹೋರಿ ಮತ್ತು ಕೋಣಗಳ ವಧೆಯನ್ನು ನಿರ್ಬಂಧಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ ಮುಂದೆ ಪಿಐಎಲ್‌ ಸಲ್ಲಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯವು ನೋಟಿಸ್‌ ಜಾರಿ ಮಾಡಿದೆ [ಬ್ರಿಷ್‌ಭಾನ್‌ ವರ್ಮ ವರ್ಸಸ್‌ ಕೇಂದ್ರ ಸರ್ಕಾರ ಮತ್ತು ಮತ್ತಿತರರು].

ಪ್ರಕರಣದ ಸಂಬಂಧ ಮಾರ್ಚ್‌ 15ರ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿ ಎನ್‌ ಪಟೇಲ್‌ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠವು ನಿರ್ದೇಶಿಸಿದೆ. ಬ್ರಿಷ್‌ಭಾನ್‌ ವರ್ಮಾ ಎನ್ನುವವರು ಸಲ್ಲಿಸಿರುವ ಅರ್ಜಿಯಲ್ಲಿ ಗೋಹತ್ಯೆ ನಿಷೇಧವನ್ನು ಹೋರಿಗಳು, ಎಮ್ಮೆಗಳು ಹಾಗೂ ಕೋಣಗಳಿಗೂ ವಿಸ್ತರಿಸುವಂತೆ ಕೋರಿದ್ದಾರೆ.

ಹೋರಿ, ಎಮ್ಮೆ ಮತ್ತು ಕೋಣಗಳು ಸಹ ಕೃಷಿ ಕೆಲಸಗಳಲ್ಲಿ ಹಾಗೂ ವಂಶಾಭಿವೃದ್ದಿಯಲ್ಲಿ ನಿರ್ದಿಷ್ಟ ವಯಸ್ಸನ್ನು ದಾಟಿದ ನಂತರವೂ ಬಳಕೆಯಾಗುವುದರಿಂದ ಅವುಗಳ ವಧೆಯನ್ನು ನಿಷೇಧಿಸಬೇಕು. ಎಮ್ಮೆ, ಹೋರಿ, ಕೋಣಗಳು ನೀಡುವ ಸೆಗಣಿ, ಗಂಜಲವು ಕೃಷಿ ಬಳಕೆಗೆ ಯೋಗ್ಯವಾಗಿದ್ದು ಇಳುವರಿಯನ್ನು ಹೆಚ್ಚಿಸುತ್ತದೆ ಎಂದು ಅವರು ವಕೀಲ ಪ್ರಶಾಂತ್ ಶುಕ್ಲಾ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ವಿವರಿಸಿದ್ದಾರೆ.

ಪ್ರಸ್ತುತ ಇರುವ ಗೋಹತ್ಯಾ ನಿಷೇಧ ಕಾನೂನು ಗಂಡು ಮತ್ತು ಹೆಣ್ಣು ಪ್ರಾಣಿಗಳ ನಡುವೆ ಭೇದವನ್ನು ಮಾಡುತ್ತದೆ. "ಯಾವುದೇ ವ್ಯಕ್ತಿಗಳನ್ನು ಕೊಲ್ಲುವುದನ್ನು ನಿರ್ಬಂಧಿಸಲಾಗುತ್ತದೆ ಎಂದರೆ ಅದು ಪುರುಷ ಹಾಗೂ ಮಹಿಳೆ ಇಬ್ಬರಿಗೂ ಅನ್ವಯವಾಗುತ್ತದೆ. ಹೆಣ್ಣು ನವಿಲನ್ನು ಕೊಲ್ಲುವುದರ ಮೇಲೆ ನಿರ್ಬಂಧವಿದ್ದು ಗಂಡು ನವಿಲನ್ನು ಕೊಲ್ಲುವುದನ್ನು ಸಹ ನಿರ್ಬಂಧಿಸಬೇಕು," ಎಂದು ಮನವಿಯಲ್ಲಿ ವಿವರಿಸಲಾಗಿದೆ.

Related Stories

No stories found.