ತಮಿಳುನಾಡಿನ ದೇವಾಲಯಗಳಿಗೆ ಹಿಂದೂಗಳಲ್ಲದವರು ಪ್ರವೇಶ ನೀಡದಂತೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಯ ಸಂದರ್ಭದಲ್ಲಿ ಮದ್ರಾಸ್ ಹೈಕೋರ್ಟ್ ಶುಕ್ರವಾರ ಕೆಲ ತೀಕ್ಷ್ಣ ಅವಲೋಕನಗಳನ್ನು ಮಾಡಿದೆ [ರಂಗರಾಜನ್ ನರಸಿಂಹನ್ ಮತ್ತು ತಮಿಳು ನಾಡು ಸರ್ಕಾರ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಡುವಣ ಪ್ರಕರಣ].
ಧರ್ಮದ ಆಧಾರದಲ್ಲಿ ದೇಶ ಒಡೆಯುವ ಯತ್ನಗಳು ನಡೆಯುತ್ತಿವೆ ಎಂಬುದನ್ನು ಇತ್ತೀಚಿನ ಘಟನೆಗಳು ತೋರಿಸುತ್ತಿವೆ ಎಂದು ಮುಖ್ಯ ನ್ಯಾಯಮೂರ್ತಿ ಎಂ ಎನ್ ಭಂಡಾರಿ ಮತ್ತು ನ್ಯಾ. ಪಿ ಡಿ ಆದಿಕೇಶವಲು ಅವರಿದ್ದ ಪೀಠ ಟೀಕಿಸಿತು. ಪ್ರಕರಣವನ್ನು ಹತ್ತು ದಿನಗಳ ಕಾಲ ಮುಂದೂಡಲಾಗಿದೆ.
"ನಾವು ಒಂದೇ ದೇಶವೇ ಅಥವಾ ಧರ್ಮದಿಂದ ವಿಭಜನೆಗೊಂಡಿದ್ದೇವೆಯೇ? ನಾವು ಯಾವ ಸಂದೇಶ ರವಾನಿಸುತ್ತಿದ್ದೇವೆ?... ವಸ್ತ್ರ ಸಂಹಿತೆ ಇತ್ಯಾದಿಗಳನ್ನು ಕುರಿತ ದೇವಾಲಯಗಳ ಹೊರಗಿನ ಫಲಕಗಳಿಗೆ ಹೇಗೆ ಸಾಮಾನ್ಯ ನಿರ್ದೇಶನ ನೀಡಬಹುದು? ದೇಶವನ್ನು ಧರ್ಮದಿಂದ ವಿಭಜಿಸುವ ಯತ್ನವನ್ನು ಇತ್ತೀಚಿನ ಪ್ರಚಲಿತ ವಿದ್ಯಮಾನಗಳು ತೋರಿಸುತ್ತವೆ" ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.
ರಾಜ್ಯದ ದೇವಾಲಯಗಳಲ್ಲಿ ನಿಯಮಗಳು ಮತ್ತು ಪದ್ಧತಿಗಳನ್ನು ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ಪೀಠದಲ್ಲಿ ನಡೆಯಿತು. ಇತರೆ ಅರ್ಜಿಗಳ ಜೊತೆಗೆ ತಮಿಳುನಾಡು ದೇವಾಲಯ ಪ್ರವೇಶ ದೃಢೀಕರಣ ಕಾಯಿದೆಯ ಪ್ರಕಾರ ಹಿಂದೂಗಳಲ್ಲದವರನ್ನು ದೇವಾಲಯ ಪ್ರವೇಶದಿಂದ ನಿರ್ಬಂಧಿಸಬೇಕು ಮತ್ತು ವಸ್ತ್ರ ಸಂಹಿತೆ ಪಾಲಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.