ಮಥುರಾದ ಶ್ರೀಕೃಷ್ಣ ದೇವಾಲಯದ ಪಕ್ಕದಲ್ಲಿರುವ ಶಾಹಿ ಮಸೀದಿಯನ್ನು ಹಿಂದೂಗಳಿಗೆ ಹಸ್ತಾಂತರಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗಿದೆ. ವಕೀಲರಾದ ಮೆಹೆಕ್ ಮಹೇಶ್ವರಿ ಅವರು ಸಲ್ಲಿಸಿರುವ ಅರ್ಜಿ 1991ರ ಪೂಜಾ ಸ್ಥಳಗಳ ಕಾಯಿದೆ ಸೆಕ್ಷನ್ 2,3 ಹಾಗೂ 4ರ ಸಾಂವಿಧಾನಿಕ ಸಿಂಧುತ್ವವನ್ನು ಕೂಡ ಪ್ರಶ್ನಿಸಿದೆ.
ಮಥುರಾದ ಭಗವಾನ್ ಶ್ರೀ ಕೃಷ್ಣನ ಜನ್ಮಸ್ಥಳದಲ್ಲಿ ಶಾಹಿ ಮಸೀದಿಯನ್ನು ನಿರ್ಮಿಸಲಾಗಿದೆ ಮತ್ತು ಅಲ್ಲಿ ಕತ್ರ್ ಕೇಶವದೇವ್ ಹೆಸರಿನ ದೇಗುಲ ಇತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. 16ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಈ ದೇವಾಲಯ ನೆಲಸಮಗೊಳಿಸಿ ನಂತರ ಆ ಸ್ಥಳದಲ್ಲಿ ಮಸೀದಿ ನಿರ್ಮಿಸಿದ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಮಸೀದಿಯನ್ನು ಹಿಂದೂಗಳಿಗೆ ಹಸ್ತಾಂತರಿಸಲು ನಿರ್ದೇಶನ ನೀಡಬೇಕೆಂದು ಕೋರುವ ಜೊತೆಗೆ 1991ರ ಕಾಯಿದೆಯ ಪ್ರಮುಖ ನಿಬಂಧನೆಗಳನ್ನು ಅಸಾಂವಿಧಾನಿಕವೆಂದು ಘೋಷಿಸಬೇಕು ಎಂದು ಮನವಿ ಮಾಡಲಾಗಿದೆ. ಅಲ್ಲದೆ ಪ್ರಕರಣ ಇತ್ಯರ್ಥವಾಗುವವರೆಗೆ ವಾರದಲ್ಲಿ ಕೆಲ ದಿನಗಳು ಮತ್ತು ಕೃಷ್ಣ ಜನ್ಮಾಷ್ಟಮಿಯಂದು ಮಸೀದಿಯಲ್ಲಿ ಪೂಜೆ ಮಾಡಲು ಹಿಂದೂಗಳಿಗೆ ಮಧ್ಯಂತರ ಪರಿಹಾರವಾಗಿ ಅನುಮತಿ ನೀಡಬೇಕೆಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.
ಅರ್ಜಿಯಲ್ಲಿ ವಿವಾದಿತ ಸ್ಥಳದ ಇತಿಹಾಸವನ್ನು ಮೊಘಲ್ ಆಳ್ವಿಕೆಯ ನಂತರದ ಅವಧಿಯಿಂದ ಗುರುತಿಸಲಾಗಿದೆ. ಅದರಂತೆ ಈಸ್ಟ್ ಇಂಡಿಯಾ ಕಂಪೆನಿ ಈ ಪ್ರದೇಶವನ್ನು ವಶಪಡಿಸಿಕೊಂಡ ಪರಿಣಾಮ ವಿವಾದಿತ ಸ್ಥಳ 1803ರಲ್ಲಿ ಕಂಪನಿಯ ವ್ಯಾಪ್ತಿಗೆ ಒಳಪಟ್ಟಿತು. ನಂತರ ಭೂಮಿಯನ್ನು 1815ರಲ್ಲಿ ಹರಾಜು ಹಾಕಲಾಯಿತು ಮತ್ತು ಅದನ್ನು ಬನಾರಸ್‌ನ ರಾಜ ಪಾತ್ನಿಮಲ್ ಅವರು ಖರೀದಿಸಿ ಅದರ ಮಾಲೀಕರಾದರು. ನಂತರ ಭೂಮಿಯ ಮಾಲೀಕತ್ವ ಕೋರಿ ಮುಸ್ಲಿಮರು ಹಲವು ಪ್ರಕರಣಗಳನ್ನು ದಾಖಲಿಸಿದರು ಆದರೆ ಅವುಗಳನ್ನು ವಜಾಗೊಳಿಸಲಾಯಿತು ಎಂದು ತಿಳಿಸಲಾಗಿದೆ.
1944 ರಲ್ಲಿ, ರಾಜ ಪಾತ್ನಿಮಲ್ ಅವರ ಉತ್ತರಾಧಿಕಾರಿಗಳಾದ ರಾಯ್ ಕಿಶನ್ ದಾಸ್ ಮತ್ತು ರಾಯ್ ಆನಂದ್ ದಾಸ್ ಅವರು ರೂ 13,400ಕ್ಕೆ (ಜುಗಲ್ ಕಿಶೋರ್ ಬಿರ್ಲಾ ಹಣ ಪಾವತಿಸಿದರು) ಕ್ರಯ ಪತ್ರ ಸಿದ್ಧಪಡಿಸಿದರು. ಕತ್ರ್ ಕೇಶವ್ ದೇವ್ ನ 13.37 ಎಕರೆ ಜಮೀನಿನ ಮಾಲೀಕತ್ವ ಮತ್ತು ಸ್ವಾಧೀನವನ್ನು ಮದನ ಮೋಹನ ಮಾಳವೀಯ, ಗೋಸ್ವಾಮಿ ಗಣೇಶ್ ದತ್ ಮತ್ತು ಭಿಖೇನ್ ಲಾಲ್‌ಜಿ ಆತ್ರೆ ಅವರಿಗೆ ವರ್ಗಾಯಿಸಲಾಯಿತು ಅದರ ನಂತರ, ಜುಗಲ್ ಕಿಶೋರ್ ಬಿರ್ಲಾ ಅವರು ‘ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್’ ಹೆಸರಿನಲ್ಲಿ ಒಂದು ಟ್ರಸ್ಟ್ ರಚಿಸಿದರು ಮತ್ತು ಕತ್ರ್ ಕೇಶವ ದೇವ್‌ಗೆ ಸೇರಿದ 13.37 ಎಕರೆ ಜಮೀನನ್ನು ದೈವ ಶ್ರೀಕೃಷ್ಣ ವಿರಾಜಮಾನ್‌ಗೆ ಅರ್ಪಿಸಿದರು. ತರುವಾಯ, ಟ್ರಸ್ಟ್ ಮತ್ತು ಮುಸ್ಲಿಮರ ನಡುವೆ ರಾಜಿ ಮಾಡಿಕೊಳ್ಳಲಾಯಿತು, ಅದರ ಆಧಾರದ ಮೇಲೆ ಎರಡು ಎಕರೆ ಭೂಮಿಯನ್ನು ಶಾಹಿ ಮಸೀದಿಗೆ ನೀಡಲಾಯಿತು ಎಂದು ಅರ್ಜಿ ವಿವರಿಸುತ್ತದೆ.
ಮಸೀದಿ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ, ಆದರೆ ಪೂಜಾಸ್ಥಳ ಹಾಳಾಗಿದ್ದರೂ ಕೂಡ ಹಿಂದೂಗಳ ಪ್ರಾರ್ಥನೆ ಉದ್ದೇಶಗಳಿಗೆ ಇನ್ನೂ ಮಹತ್ವದ್ದಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. "ಮಥುರಾ ಜಿಲ್ಲೆಯ ಸರ್ಕಾರದ ಅಧಿಕೃತ ಜಾಲತಾಣದಲ್ಲಿ ಔರಂಗಜೇಬ್ ಕೃಷ್ಣಜನ್ಮಭೂಮಿಯನ್ನು ನೆಲಸಮಗೊಳಿಸಿ ನಂತರ ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಕೃಷ್ಣ ಜನ್ಮಸ್ಥಾನದಲ್ಲಿ ಕೃಷ್ಣ ಜನ್ಮಭೂಮಿ ಯಾವುದೇ ಮಸೀದಿಗಿಂತ ಹೆಚ್ಚಿನ ಹಕ್ಕು ಪಡೆದಿದೆ. ಇದು ಕೃಷ್ಣ ಜನ್ಮಭೂಮಿ ವಿವಾದದ ಮೂಲಭೂತ ಸತ್ಯ," ಎಂದು ಅರ್ಜಿ ಪ್ರತಿಪಾದಿಸಿದೆ.
1991ರ ಕಾಯಿದೆಯ 2,3 ಹಾಗೂ 4 ಸೆಕ್ಷನ್‌ಗಳು ಏಕೆ ಅಸಾಂವಿಧಾನಿಕ ಎಂದು ವಿವರವಾಗಿ ತಿಳಿಸಲಾಗಿದೆ. ಜೊತೆಗೆ ಅರ್ಜಿ ಹೀಗೆ ಹೇಳುತ್ತದೆ:
ಬಾಲದೈವ ಶ್ರೀ ಕೃಷ್ಣ ವಿರಾಜಮಾನ್ ಪರವಾಗಿ ಸಿವಿಲ್ ಮೊಕದ್ದಮೆ ಹೂಡಲಾಗಿದ್ದು ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿರುವ ಅರ್ಜಿ ಉತ್ತರಪ್ರದೇಶದ ನ್ಯಾಯಾಲಯದಲ್ಲಿ ಬಾಕಿ ಇದೆ. ಬಾಲದೈವದ ವಾದಮಿತ್ರರಾದ ವಕೀಲೆ ರಂಜನಾ ಅಗ್ನಿಹೋತ್ರಿ ಮತ್ತು ಉತ್ತರ ಪ್ರದೇಶದ ಲಖನೌ ನಿವಾಸಿಯೊಬ್ಬರು ಹೂಡಿದ್ದ ಮೊಕದ್ದಮೆಯನ್ನು ಲಖನೌ ಸಿವಿಲ್ ನ್ಯಾಯಾಧೀಶರು ಸೆಪ್ಟೆಂಬರ್‌ನಲ್ಲಿ ವಜಾ ಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಬಳಿಕ ಜಿಲ್ಲಾ ನ್ಯಾಯಾಲಯ ಅ.16 ರಂದು ವಿಚಾರಣೆಗೆ ಒಪ್ಪಿಕೊಂಡಿತ್ತು.